ಬಾವಿಗೆ ಬಿದ್ದ ಬೈಕ್: 3 ಮಕ್ಕಳ ದುರ್ಮರಣ

ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್‍ಶೋ ನೋಡಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್ ಆಯತಪ್ಪಿ ಬಾವಿಗೆ ಬಿದ್ದ ಪರಿಣಾಮ ಮೂವರು ಮಕ್ಕಳು ಮೃತಪಟ್ಟು, ತಂದೆ ಅದೃಷ್ಟವಶಾತ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರ್‍ಶೋ ನೋಡಿಕೊಂಡು ಮನೆಗೆ ಹಿಂತಿರುಗುತ್ತಿದ್ದಾಗ ಬೈಕ್ ಆಯತಪ್ಪಿ ಬಾವಿಗೆ ಬಿದ್ದ ಪರಿಣಾಮ ಮೂವರು ಮಕ್ಕಳು ಮೃತಪಟ್ಟು, ತಂದೆ ಅದೃಷ್ಟವಶಾತ್ ಪಾರಾಗಿರುವ ಘಟನೆ ಯಲಹಂಕ ನ್ಯೂ ಟೌನ್ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ರಾತ್ರಿ ನಡೆದಿದೆ.

ಕೆಂಚನಹಳ್ಳಿ ಬಳಿ ಈ ಘಟನೆ ನಡೆದಿದ್ದು, ಸಿಂಗಾರ ವೇಲನ್(13), ಕವಿತಾ(10), ಗೋಕುಲ್ (8) ಮೃತ ಮಕ್ಕಳು. ಮಕ್ಕಳನ್ನು ಬೈಕ್‍ನಲ್ಲಿ ಕರೆದುಕೊಂಡು ಹೋಗುತ್ತಿದ್ದ ಅನಂತಪುರ ಗ್ರಾಮ ನಿವಾಸಿ ವೆಂಕಟರಾಜು ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮನೆಗೆ ಹಿಂತಿರುಗುತ್ತಿದ್ದ ವೇಳೆ ಯಲಹಂಕ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಗಿತ್ತು. ಹಾಗಾಗಿ ಆತ ಕಾಲುದಾರಿಯನ್ನು ಹುಡುಕಿಕೊಂಡು ಆ ಮಾರ್ಗವಾಗಿ ಮನೆಗೆ ತೆರಳುತ್ತಿದ್ದ. ಕೆಂಚನಹಳ್ಳಿ ಮಾರ್ಗವಾಗಿ ಹೋಗುತ್ತಿದ್ದಾಗ, ಅಲ್ಲಿ ರಸ್ತೆ ಬದಿಯಲ್ಲೇ ಇದ್ದ ಬಾವಿಯನ್ನು ಗಮನಿಸದ ಕಾರಣ ಬೈಕ್ ಬಾವಿಗೆ ಉರುಳಿತು.

ಈಜು ಬರುತ್ತಿದ್ದ ಕಾರಣ ವೆಂಕಟರಾಜು ಈಜಿ ಸಹಾಯಕ್ಕಾಗಿ ಕೂಗಿಕೊಂಡಿದ್ದಾರೆ. ಜನ ಅಲ್ಲಿಗೆ ಧಾವಿಸಿ ರಕ್ಷಣಾ ಕಾರ್ಯಾಚರಣೆಗೆ ಮುಂದಾಗುವ ವೇಳೆಗೆ ಮಕ್ಕಳು ಮೃತಪಟ್ಟಿದ್ದರು. ವೆಂಕಟರಾಜು ಪಾನಮತ್ತನಾಗಿ ವಾಹನ ಚಾಲನೆ ಮಾಡಿದ್ದುದೇ ಘಟನೆಗೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆ ನಂತರ ನಾಪತ್ತೆಯಾಗಿದ್ದ ವೆಂಕಟರಾಜುನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ. ಕಾಲುದಾರಿ ಹಿಡಿದದ್ದೇ ಕಾರಣ ಸ್ಥಳೀಯರ ಅನುಮಾನ ಮುಖ್ಯರಸ್ತೆಯಲ್ಲಿ ಸಂಚಾರ ವ್ಯವಸ್ಥೆ ಮಾರ್ಪಾಡು ಹಿನ್ನೆಲೆಯಲ್ಲಿ ಕೆಂಚೇನಹಳ್ಳಿ ಮಾರ್ಗವಾಗಿ ತೆರಳಲು ಲಕ್ಕಅಲಿ ಎಸ್ಟೇಟ್‍ನ ಕಾಲು ದಾರಿಯಲ್ಲಿ ಹೋಗುತ್ತಿದ್ದುದೇ ದುರಂತಕ್ಕೆ ಕಾರಣವೆನ್ನಲಾಗಿದೆ. ಬಾವಿ ಬಳಿ ಹಂಪ್ ಇದ್ದು, ಅದನ್ನು ನೋಡದೆ ಜೋರಾಗಿ ವಾಹನ ಚಾಲನೆ ಮಾಡಿದ್ದರಿಂದ ಮುಂದೆ ನಿಂತಿದ್ದ ಇಬ್ಬರು ಹಾಗೂ ಹಿಂದೆ ಕುಳಿತಿದ್ದ ಮಗು ಸೇರಿ ನಾಲ್ವರೂ ಬಾವಿಗೆ ಬಿದ್ದಿದ್ದಾರೆ.

ನುರಿತ ಈಜುಗಾರರ ಸಹಾಯದಿಂದ ಶವಗಳ ಶೋಧಕಾರ್ಯ ನಡೆಸಿದ್ದು, ಸಂಜೆ ವೇಳೆಗೆ ಗೋಕುಲ್, ಸಿಂಗಾರವೇಲು ಶವ ಹಾಗೂ ಸ್ಕೂಟರ್‍ನ್ನು ಹೊರ ತೆಗೆಯಲಾಗಿದೆ. ಕವಿತಾ ಶವಕ್ಕಾಗಿ ಹುಡುಕಾಟ ಮುಂದುವರಿದಿದೆ. ಗುಜರಿ ವ್ಯಾಪಾರಿಯಾದ ವೆಂಕಟರಾಜು ಮದ್ಯವ್ಯಸನಿಯಾಗಿದ್ದ. ಪಾನಮತ್ತನಾಗಿ ಸ್ಕೂಟರ್ ಚಲಾಯಿಸಿದ್ದರಿಂದಲೇ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಅಲ್ಲದೇ ಬಾವಿಯಿಂದ ಹೊರಬಂದ ವೆಂಕಟರಾಜು ಸಹಾಯಕ್ಕಾಗಿ ಕೂಗಿಕೊಂಡಿದ್ದ. ಆದರೆ, ಜನರು ಬಂದ ನಂತರ ಆತ ನಾಪತ್ತೆಯಾಗಿದ್ದ. ಅಲ್ಲದೇ ವೆಂಕಟರಾಜುಗೆ ಈಜು ಬರುತ್ತಿದ್ದರಿಂದ ನೀರಿನಲ್ಲಿ ಮುಳುಗುತ್ತಿದ್ದ ಮಕ್ಕಳ ಪೈಕಿ ಒಬ್ಬರನ್ನಾದರೂ ರಕ್ಷಣೆ ಮಾಡಬಹುದಿತ್ತು. ಹಾಗಾಗಿ ಇದು ಉದ್ದೇಶಪೂರ್ವಕವೋ ಅಥವಾ ಆಕಸ್ಮಿಕವೋ ಎಂದು ಸ್ಥಳೀಯರು ಅನುಮಾನ ವ್ಯಕ್ತಪಡಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com