ನಟನನ್ನು ನೋಡಲು ಓಡಿ ಬಂದಳು, ವಿಳಾಸ ಸಿಗದೆ ಅಲೆದಾಡಿದಳು

ನಟ ಧ್ರುವ ಸರ್ಜಾ ಅವರನ್ನು ನೋಡಲು ಕುಕ್ಕೆ ಸುಬ್ರಹ್ಮಣ್ಯದಿಂದ ನಗರಕ್ಕೆ ಬಂದು ಅಲೆದಾಡುತ್ತಿದ್ದ ಮಹಿಳಾ ಅಭಿಮಾನಿಯೊಬ್ಬಳಿಗೆ ಆಟೋ ಚಾಲಕನೊಬ್ಬ ಆಶ್ರಯ ನೀಡಿ, ಸುರಕ್ಷಿತವಾಗಿ ಪಾಲಕರ ಮನೆಗೆ ಸೇರಿಸಿದ್ದಾನೆ...
ರಕ್ಷಣೆಗೊಂಡ ಯುವತಿ
ರಕ್ಷಣೆಗೊಂಡ ಯುವತಿ

ಬೆಂಗಳೂರು: ನಟ ಧ್ರುವ ಸರ್ಜಾ ಅವರನ್ನು ನೋಡಲು ಕುಕ್ಕೆ ಸುಬ್ರಹ್ಮಣ್ಯದಿಂದ ನಗರಕ್ಕೆ ಬಂದು ಅಲೆದಾಡುತ್ತಿದ್ದ ಮಹಿಳಾ ಅಭಿಮಾನಿಯೊಬ್ಬಳಿಗೆ ಆಟೋ ಚಾಲಕನೊಬ್ಬ ಆಶ್ರಯ ನೀಡಿ, ಸುರಕ್ಷಿತವಾಗಿ ಪಾಲಕರ ಮನೆಗೆ ಸೇರಿಸಿದ್ದಾನೆ.

ನಟನ ವಿಳಾಸ ಪತ್ತೆಯಾಗದೆ ತಡರಾತ್ರಿ ನಡುರಸ್ತೆಯಲ್ಲಿ ಕಂಗೆಟ್ಟು ನಿಂತ ಯುವತಿ ಸವಿತಾ ಎಂಬಾಕೆಯನ್ನು ಆಟೋ ಚಾಲಕ ಅನಂತಕುಮಾರ್ ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಫೆ.18ರ ರಾತ್ರಿ 9.45ಕ್ಕೆ ಅನಂತಕುಮಾರ್ ಅವರು ತಮ್ಮ ಆಟೋದಲ್ಲಿ ವೆಸ್ಟ್ ಆಫ್ ಕಾರ್ಡ್ ರಸ್ತೆಯ ಶಿವನಹಳ್ಳಿ ಸಿಗ್ನಲ್ ಬಳಿ ತೆರಳುತ್ತಿದ್ದಾಗ ಸವಿತಾ ಅವರು ಆಟೋ ತಡೆದು ನಿಲ್ಲಿಸಿದರು. ನಟ ಧ್ರುವ ಸರ್ಜಾ ಮನೆಗೆ ಹೋಗಬೇಕು, ವಿಳಾಸ ಜಯನಗರ 1ನೇ ಬ್ಲಾಕ್ ಎಂದರು.

ನಟನ ಮನೆ ಬಗ್ಗೆ ಮಾಹಿತಿ ಇಲ್ಲದ ಚಾಲಕ ಅನಂತ, ಜಯನಗರ 1ನೇ ಬ್ಲಾಕ್‍ನಲ್ಲಿ ವಿಳಾಸದ ಹುಡುಕಾಟ ನಡೆಸಿದ್ದಾರೆ. ರಾತ್ರಿ 11.30ರವರೆಗೆ ಎಷ್ಟೇ ಹುಡುಕಿದರೂ ಮನೆ ಸಿಗಲಿಲ್ಲ. ಹೀಗಾಗಿ, ನೀವು ಎಲ್ಲಿಗೆ ಹೋಗಬೇಕು, ಸರಿಯಾಗಿ ಹೇಳಿ ಎಂದಾಗ ಕಣ್ಣೀರಿಟ್ಟ ಸವಿತಾ, ತಾನು ಧ್ರುವ ಸರ್ಜಾ ಅಭಿಮಾನಿ. ಅವರನ್ನು ಹುಡುಕಿಕೊಂಡು ಬಂದಿದ್ದೇನೆ ಎಂದಿದ್ದಾರೆ. ಎಲ್ಲಿ ಉಳಿದುಕೊಳ್ಳುವಿರಿ ಎಂದಾಗ ಉತ್ತರ ಇರಲಿಲ್ಲ. ಹೀಗಾಗಿ ಚಾಲಕ ಅನಂತ, ಆಕೆಯ ಮನವೊಲಿಸಿ ನೀವು ಪಾಲಕರ ಬಗ್ಗೆ ಮಾಹಿತಿ ನೀಡಿ ಅಲ್ಲಿಗೆ ತಲುಪಿಸುತ್ತೇನೆ. ರಾತ್ರಿ ವೇಳೆ ರಸ್ತೆಯಲ್ಲಿರುವುದು ಬೇಡ ಎಂದು ಮನೆಗೆ ಕರೆದುಕೊಂಡು ಹೋಗಿ ಆಶ್ರಯ ನೀಡಿದ್ದರು.

ಮೂಡಲಪಾಳ್ಯದ ಮನೆಯಲ್ಲಿ ಪತ್ನಿ ಹಾಗೂ ಅತ್ತೆ ಜತೆ ವಾಸವಿದ್ದೇನೆ. ರಾತ್ರಿ ಮನೆಗೆ ಕರೆದುಕೊಂಡು ಹೋಗಿ ವಿಚಾರಿಸಿದಾಗ ಯುವತಿ ಯಾವುದೇ ಉತ್ತರ ನೀಡಲಿಲ್ಲ. ಹೀಗಾಗಿ ಯಾರೂ ಅವರನ್ನು ಪ್ರಶ್ನಿಸಿರಲಿಲ್ಲ. ಒಂದು ದಿನ ಸುಮ್ಮನಿದ್ದೆವು. ಫೆ.20 ರಂದು ವಿಚಾರಿಸಿದಾಗ, ಸಹೋದರನ ಮೊಬೈಲ್ ಸಂಖ್ಯೆ ನೀಡಿದರು. ಅವರ ಮನೆಗೆ ಮÁಹಿತಿ ನೀಡಿದಾಗ ಆತಂಕಗೊಂಡಿದ್ದ ಪಾಲಕರು, ಸವಿತಾ ಸುರಕ್ಷಿತವಾಗಿರುವ ವಿಷಯ ಕೇಳಿ ಸಮಾಧಾನಪಟ್ಟರು ಎಂದು ಅನಂತ ವಿವರಿಸಿದರು.

ದೂರು ದಾಖಲಾಗಿಲ್ಲ: ಶಾಲಾ ಶಿಕ್ಷಕಿಯಾಗಿರುವ ಸವಿತಾ ಅವರು ಧ್ರುವ ಸರ್ಜಾರನ್ನು ಕಾಣಲು ಮನೆಯಲ್ಲಿ ತಿಳಿಸದೆ ನೇರವಾಗಿ ಬೆಂಗಳೂರಿಗೆ ಬಂದಿದ್ದರು. ಆದರೆ, ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಯುವತಿ ನಾಪತ್ತೆಯಾಗಿದ್ದಾಳೆ ಎಂದು ಪಾಲಕರು ಮೌಖಿಕವಾಗಿ ಹೇಳಿದ್ದು ಯಾವುದೇ ದೂರು ದಾಖಲಾಗಿರಲಿಲ್ಲ.ಫೆ.20ರಂದೇ ಸವಿತಾ ಸಹೋದರ ನವೀನ್ ಕಟ್ರಮನೆ ಎಂಬುವರು ಬೆಂಗಳೂರಿಗೆ ಬಂದು ಅನಂತ ಅವರ ಮನೆಯಲ್ಲಿ ಉಳಿದುಕೊಂಡು ಶನಿವಾರ ಬೆಳಗ್ಗೆ ಸುಬ್ರಹ್ಮಣ್ಯಕ್ಕೆ ತೆರಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com