ಎಟಿಎಂ ದೋಚಲು ಯತ್ನ

ಬನ್ನೇರುಘಟ್ಟ ರಸ್ತೆಯಲ್ಲಿ ರುವ ಆ್ಯಕ್ಸಿಸ್ ಬ್ಯಾಂಕ್‍ನ ಎಟಿಎಂ ಘಟಕಕ್ಕೆ ನುಗ್ಗಿದ ಕಳ್ಳನೊಬ್ಬ ಹಣದೋಚಲು ಯತ್ನಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಬನ್ನೇರುಘಟ್ಟ ರಸ್ತೆಯಲ್ಲಿ ರುವ ಆ್ಯಕ್ಸಿಸ್ ಬ್ಯಾಂಕ್‍ನ ಎಟಿಎಂ ಘಟಕಕ್ಕೆ ನುಗ್ಗಿದ ಕಳ್ಳನೊಬ್ಬ ಹಣದೋಚಲು ಯತ್ನಿಸಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ರಾತ್ರಿ 1.45ರ ಸುಮಾರಿಗೆ ಎಟಿಎಂ ಘಟಕಕ್ಕೆ ನುಗ್ಗಿದ ದುಷ್ಕರ್ಮಿ ಮಾರಕಾಸ್ತ್ರದಿಂದ ಎಟಿಎಂ ಯಂತ್ರವನ್ನು ಜಖಂಗೊಳಿಸಲು ಯತ್ನಿಸಿದ್ದಾನೆ. ಆದರೆ, ಸಾಧ್ಯವಾಗದೆ 10 ನಿಮಿಷದ ಬಳಿಕ ಹೊರ ಬಂದು ಪರಾರಿಯಾಗಿದ್ದಾನೆ. ಘಟಕದ ಭದ್ರತೆಗೆ ನಿಯೋಜನೆಗೊಂಡಿದ್ದ ಸೆಕ್ಯುರಿಟಿ ಗಾರ್ಡ್ ರಾತ್ರಿ ಕೆಲಸಕ್ಕೆ ಆಗಮಿಸಿರಲಿಲ್ಲ. ಹಾಗಾಗಿ ಆರೋಪಿ ಹಣ ಕಳವಿಗೆ ಯತ್ನಿಸಿದ್ದಾನೆ. ಆದರೆ, ಇದರ ನಿಯಂತ್ರಣ ಕೊಠಡಿ ಮುಂಬೈನಲ್ಲಿದ್ದು ಅಲ್ಲಿ ರಾತ್ರಿ ಪಾಳಿಯ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿ, ದುಷ್ಕರ್ಮಿ ಎಟಿಎಂ ಯಂತ್ರವನ್ನು  ಜಖಂಗೊಳಿಸುತ್ತಿರುವುದನ್ನು ಗಮನಿಸಿದ್ದಾರೆ.

ತಕ್ಷಣ ಏಜೆನ್ಸಿಯ ಸ್ಥಳೀಯ ಸೇವಾ ವ್ಯವಸ್ಥಾಪಕ ಜಯಪ್ರಕಾಶ್ ಅವರಿಗೆ ಮಾಹಿತಿ ನೀಡಿದ್ದಾರೆ. ನಂತರ ಜಯ ಪ್ರಕಾಶ್ ಅವರು ಘಟಕದ ಬಳಿ ಬರುವಷ್ಟರಲ್ಲಿ ಆರೋಪಿ ಪರಾರಿಯಾದ್ದಾನೆ. ಆರೋಪಿಯ ಚಹರೆ ಸಿ.ಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದನ್ನು ಸಂಗ್ರಹಿಸಿ ಆರೋಪಿಯನ್ನು ಪತ್ತೆ ಮಾಡುವುದಾಗಿ ಪೊಲೀಸರು ತಿಳಿಸಿದ್ದಾರೆ.

ಘಟಕದ ಭದ್ರತಾ ಕಾರ್ಯದ ಹೊಣೆ ಹೊತ್ತಿರುವ ಸೆಕ್ಯುರಾನ್ಸ್ ಸೆಕ್ಯುರಿಟಿ ಸಿಸ್ಟಂ' ಏಜೆನ್ಸಿಯು ಘಟಕದೊಳಗೆ ಸಿ.ಸಿ ಕ್ಯಾಮೆರಾ ಅಳವಡಿಸಿದ್ದು, ಮುಂಬೈನಲ್ಲಿರುವ ಆ ಏಜೆನ್ಸಿಯ ನಿಯಂತ್ರಣ ಕೊಠಡಿ ಮತ್ತು ಘಟಕದ ಸಿ.ಸಿ ಕ್ಯಾಮೆರಾಕ್ಕೆ ಸಂಪರ್ಕ ಕಲ್ಪಿಸಲಾಗಿದೆ. ನಿಯಂತ್ರಣ ಕೊಠಡಿ ಸಿಬ್ಬಂದಿ ಮುಂಬೈನಿಂದಲೇ ಭದ್ರತಾ ಕಾರ್ಯ ನಿರ್ವಹಿಸುತ್ತಾರೆ. ಹಾಗಾಗಿ ಎಟಿಎಂನಲ್ಲಿ ಹಣ ದೋಚಲು ಯತ್ನಿಸಿದ ತಕ್ಷಣ ಅಲ್ಲಿನ ಸಿಬ್ಬಂದಿಗೆ ಮಾಹಿತಿ ಲಭ್ಯವಾಗಿದ್ದು, ಅವರು ಬೆಂಗಳೂರಿಗೆ ಸಂದೇಶ ಕಳುಹಿಸಿದ್ದಾರೆ ಪೊಲೀಸರು ಮಾಹಿತಿ ನೀಡಿದ್ದಾರೆ. ಜೆ.ಪಿ.ನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com