
ಬೆಂಗಳೂರು: ಕಾರು ಬಂದಾಗ ಗೇಟನ್ನು ತಕ್ಷಣ ತೆಗೆದಿಲ್ಲ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್ ಮೇಲೆ ಐಷಾರಾಮಿ ಹಮ್ಮರ್ ಕಾರು ಹರಿಸಿ ಕೊಲೆ ಮಾಡಿದ ಕೇರಳದ ಕಿಂಗ್ಸ್ ಬೀಡಿ ಕಂಪನಿ ಮಾಲೀಕ ಉದ್ಯಮಿ ಮಹಮ್ಮದ್ ನಿಶಾಮ್ (39) ವಿರುದ್ಧ ಬೆಂಗಳೂರಿನಲ್ಲೂ ಅತ್ಯಾಚಾರ ಸೇರಿದಂತೆ 2 ಪ್ರಕರಣಗಳು ದಾಖಲಾಗಿವೆ.
ಯುಬಿ ಸಿಟಿ ಸಮೀಪದ ಸನ್ ಡ್ಯಾನ್ಸ್ ಅಪಾರ್ಟ್ ಮೆಂಟ್‍ನಲ್ಲಿ ವಾಸವಿದ್ದ ನಿಶಾಮ್, 2014ರ ಡಿ.22ರಂದು ತನ್ನ ಐಷಾರಾಮಿ ಲ್ಯಾಂಬೊರ್ಘಿನಿ ಕಾರಿನ ಎಕ್ಸಲರೇಟರ್ ಧ್ವನಿ ಹೆಚ್ಚಿಸಿ ಗಲಾಟೆ ಮಾಡಿದ್ದ. ಮಕ್ಕಳಿರುವ ಪ್ರದೇಶದಲ್ಲಿ ಹೆಚ್ಚು ಸೌಂಡ್ ಮಾಡಬೇಡಿ ಎಂದು ಸ್ಥಳೀಯರಾದ ಸುಮನ್ ಎಂಬುವರು ಆತನಿಗೆ ಬುದಿಟಛಿವಾದ ಹೇಳಿದ್ದರು. ಆಗ ಆರೋಪಿ, ತನ್ನ ಬಳಿ ಇದ್ದ ಗನ್‍ನಿಂದ ಅವರಿಗೆ ಪ್ರಾಣ ಬೆದರಿಕೆ ಹಾಕಿದ್ದ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಬಳಿಕ ಆರೋಪಿ ತಲೆಮರೆಸಿಕೊಂಡಿದ್ದ.
ಅತ್ಯಾಚಾರ ಪ್ರಕರಣ: ನಗರದಲ್ಲಿ ವಾಸವಿದ್ದ ಮಲಯಾಳಂ ನಟಿಯೊಂದಿಗೆ ಮೂರು ವರ್ಷಗಳ ಕಾಲ ಸಂಪರ್ಕದಲ್ಲಿದ್ದ ಆರೋಪಿ, ಮದುವೆಯಾಗುವುದಾಗಿ ನಂಬಿಸಿ ಆಕೆಯೊಂದಿಗೆ ದೈಹಿಕ ಸಂಪರ್ಕ ಬೆಳೆಸಿದ್ದ. ಬಳಿಕ ಆಕೆಯನ್ನು ತೊರೆದಿದ್ದ. ಅತ್ಯಾಚಾರ ಹಾಗೂ ಪ್ರಾಣ ಬೆದರಿಕೆ ಸಂಬಂಧ ನಟಿ ಪುಲಕೇಶಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಕೆಯಾಗಿದೆ. ಪ್ರಕರಣದಲ್ಲಿ ಆರೋಪಿ ನಿಶಾಮ್ ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದಾನೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಆರೋಪಿಯ ಹಿನ್ನೆಲೆ: ಕೇರಳದ ಕಿಂಗ್ಸ್ ಬೀಡಿ ಕಂಪನಿ ಮಾಲೀಕನಾಗಿರುವ ಮಹಮ್ಮದ್ ನಿಶಾಮ್, ಶೋಕಿ ಜೀವನ, ಐಷಾರಾಮಿ ಕಾರುಗಳ ಬಳಕೆ ಹಾಗೂ ಅಪರಾಧ ಕೃತ್ಯಗಳಿಂದಲೇ ಕುಖ್ಯಾತಿ ಗಳಿಸಿದ್ದಾನೆ. ಕೆಲಸ ಹಾಗೂ ವಿವಿಧ ಕಾರಣಗಳಿಂದ ಬೆಂಗಳೂರು ಸೇರಿದಂತೆ ವಿವಿಧ ನಗರಗಳಲ್ಲಿ ಸಂಚರಿಸುತ್ತಾ ತಾತ್ಕಾಲಿಕವಾಗಿ ವಾಸವಿರುತ್ತಿದ್ದ.
ಕೇರಳದ ತ್ರಿಶೂರ್‍ನಲ್ಲಿರುವ ಶೋಭಾ ಸಿಟಿ ಅಪಾರ್ಟ್ ಮೆಂಟ್‍ನಲ್ಲಿ ವಾಸವಿದ್ದ ನಿಶಾಮ್, 2015ರ ಜ.29ರಂದು ಮದ್ಯದ ನಶೆಯಲ್ಲಿ ಹಮ್ಮರ್ ಕಾರು ಚಲಾಯಿಸಿಕೊಂಡು ಅಪಾರ್ಟ್‍ಮೆಂಟ್‍ಗೆ ಬಂದಿದ್ದ. ಕಾರು ಬಂದ ತಕ್ಷಣ ಗೇಟ್ ತೆರೆದಿಲ್ಲ ಎನ್ನುವ ಕಾರಣಕ್ಕೆ ಸೆಕ್ಯುರಿಟಿ ಗಾರ್ಡ್ ಚಂದ್ರಬೋಸ್ ಎಂಬಾತನನ್ನು ಹಿಡಿದು ಹಿಗ್ಗಾ ಮುಗ್ಗಾ ಥಳಿಸಿದ್ದ. ಬಳಿಕ ಗೋಡೆಯ ಬಳಿ ಚಂದ್ರಬೋಸ್‍ನನ್ನು ನಿಲ್ಲಿಸಿ ತನ್ನ ಕಾರಿನಿಂದ ಗುದ್ದಿದ್ದ. ತೀವ್ರ ಗಾಯಗೊಂಡಿದ್ದ ಚಂದ್ರಬೋಸ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ತ್ರಿಶೂರ್ ಪೊಲೀಸರು ನಿಶಾಮ್ ನನ್ನು ಬಂಧಿಸಿದ್ದು ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾನೆ. ನಗರದಲ್ಲಿ ಬೇಕಾಗಿರುವ ಎರಡು ಪ್ರಕರಣಗಳ ಪೈಕಿ 1 ಪ್ರಕರಣದಲ್ಲಿ ಆರೋಪಿ ನಿರೀಕ್ಷಣಾ ಜಾಮೀನು ಪಡೆದಿದ್ದಾನೆ. ಮತ್ತೊಂದು ಪ್ರಕರಣದಲ್ಲಿ ತಲೆಮರೆಸಿ ಕೊಂಡಿದ್ದು ತ್ರಿಶೂರ್ ನ್ಯಾಯಾಲಯದಿಂದ ಬಾಡಿ ವಾರೆಂಟ್ ಪಡೆದು ನಗರಕ್ಕೆ ಕರೆತಂದು ಪ್ರಕರಣದ ಬಗ್ಗೆ ವಿಚಾರಣೆ ನಡೆಸುವುದಾಗಿ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ತಿಳಿಸಿದರು.
ಕೇರಳದ ಪ್ರಕರಣಗಳು
Advertisement