ಅಡುಗೆಗಿನ್ನು ಸಿಲೆಂಡರ್ ಕಾಯೋ ಕಷ್ಟ ಇಲ್ಲ!

ಇನ್ನು ನೀರಿನಿಂದ ಅಡುಗೆ ಮಾಡಬಹುದು!ಮತ್ತೆ ನೀರಿನಿಂದಲ್ಲದೇ ಬೇರೆ ಯಾವ ದ್ರವದಿಂದ ಅಡುಗೆ ಮಾಡಬಹುದೆಂದು ಮರುಪ್ರಶ್ನೆ..
ಗ್ಯಾಸ್ ಸಿಲೆಂಡರ್‍
ಗ್ಯಾಸ್ ಸಿಲೆಂಡರ್‍
Updated on

ಬೆಂಗಳೂರು: ಇನ್ನು ನೀರಿನಿಂದ ಅಡುಗೆ ಮಾಡಬಹುದು!ಮತ್ತೆ ನೀರಿನಿಂದಲ್ಲದೇ ಬೇರೆ ಯಾವ  ದ್ರವದಿಂದ ಅಡುಗೆ ಮಾಡಬಹುದೆಂದು ಮರುಪ್ರಶ್ನೆ ಹಾಕುವ ಮುನ್ನ ಬೆಂಗಳೂರಿನ ಡಾ.ರಾಜಾ ವಿಜಯ್ ಕುಮಾರ್ ಅವರ ಸಂಶೋಧನೆಯನ್ನು ಒಮ್ಮೆ ನೋಡಿ. ನೀರು, ಸೂರ್ಯನ ಬೆಳಕು ಹಾಗೂ ಅಡುಗೆ ಎಣ್ಣೆಗಳಿಂದ ಇಂಧನ ಅನಿಲವನ್ನು ಮನೆಯಲ್ಲಿಯೇ  ತಯಾರಿಸಬಹುದಾದ ತಂತ್ರಜ್ಞಾನವನ್ನು ಅವರು ಕಂಡುಹಿಡಿದಿದ್ದಾರೆ. ಅದೇನಾದರೂ ಸ್ವಲ್ಪ ಕಡಿಮೆ ದರಕ್ಕೆ ಲಭ್ಯವಾದರೆ ಗ್ಯಾಸ್ ಸಿಲೆಂಡರ್‍ಗಾಗಿ ಕಾಯುವ ಕಷ್ಟವೇ ಇಲ್ಲ. ಸಾವಯವ ಪೆಟ್ರೋಲಿಯಂ ಅನಿಲ (ಆರ್ಗಾನಿಕ್ ಪೆಟ್ರೋಲಿಯಂಗ್ಯಾಸ್) ಎಂಬ ನೂತನ ಇಂಧನವನ್ನು ವಿಶೇಷ ರಿಯಾಕ್ಟರ್ ಮೂಲಕ ಉತ್ಪಾದಿಸುವ ತಂತ್ರಜ್ಞಾನವನ್ನು ಬೆಂಗಳೂರಿನ ಸ್ಕೇಲನ್ ಎನರ್ಜಿ ರಿಸರ್ಚ್ ಇನ್ಸಿಟ್ಯೂಟ್‍ನಲ್ಲಿ ಆವಿಷ್ಕರಿಸಲಾಗಿದೆ. ರಾಜಾ ವಿಜಯ್ ಕುಮಾರ್ ಪ್ರಕಾರ ಈ `ಹೈಡ್ರೋಡಿಸೈಡರ್' ರಿಯಾಕ್ಟರ್‍ನ ಬೆಲೆ ಸದ್ಯಕ್ಕೆ ರು. 75 ಸಾವಿರದ ಆಸು ಪಾಸಿನಲ್ಲಿದೆ. ಮುಂದಿನ ಐದಾರು ತಿಂಗಳಲ್ಲಿ ಈ ಯಂತ್ರ ಮಾರು ಕಟ್ಟೆಯಲ್ಲಿ ಸಿಗಲಿದೆ. 3 ದಶಕ ಗಳಿಂದ ನವೀಕರಿಸಬಹುದಾದ ಇಂಧನಗಳ ನಾನಾ ಸಂಶೋಧನೆ ಯಲ್ಲಿ ತೊಡಗಿರುವ ರಾಜಾ ವಿಜಯ್ ಕುಮಾರ್, ಮಾಜಿ ರಾಷ್ಟ್ರಪತಿ ಅಬ್ದುಲ್ ಕಲಾಂ ಸಹದ್ಯೋಗಿ ಕೂಡ. ಇಂದಿಗೂ ತಮಗೆ ಅವರೇ ಸ್ಪೂರ್ತಿ ಎನ್ನುತ್ತಾರೆ

ಕಚ್ಚಾ ತೈಲ ಬೇಡ: ಈಗ ಭಾರತದಲ್ಲಿ ಬಳಕೆಯಾಗುತ್ತಿರುವ ಬಹುತೇಕ ಅಡುಗೆ ಅನಿಲ ಕಚ್ಚಾ ಪೆಟ್ರೋಲಿಯಂ. ಇದಕ್ಕಾಗಿ ಕೇಂದ್ರ ಸಬ್ಸಿಡಿ ರೂಪದಲ್ಲಿ ಸಾವಿರಾರು ಕೋಟಿ ಸುರಿಯುತ್ತಿದೆ. ಈ ಯಂತ್ರದಿಂದ ಇಂಧನ ಸ್ವಾಯತ್ತೆ ಜತೆಗೆ ಬೇಡಿಕೆಗೆ ತಕ್ಕಂತೆ ಗ್ರಾಹಕರೇ ಉತ್ಪಾದಿಸಿಕೊಳ್ಳಬಹುದು.

ಹೇಗೆ ತಯಾರಿಸೋದು?: ಸುಮಾರು 30 ಚದರ ಅಡಿ ಅಳತೆಯ ಈ ಯಂತ್ರ ಸೂರ್ಯ ಕಿರಣವನ್ನು ಶಕ್ತಿಯನ್ನಾಗಿ ಬಳಸಿ ಕೊಳ್ಳುತ್ತದೆ. ಯಂತ್ರದಲ್ಲಿರುವ ಹೈಡ್ರಾಲಿಕ್ ರಿಯಾಕ್ಟರ್‍ಗೆ ನೀರು ಹಾಕಿದಾಗ ಆಟೋ ಮಿಕ್ ಹೈಡ್ರೋಜನ್ ಹಾಗೂ ಆಕ್ಸಿಜನ್ ಬೇರ್ಪಡಿಸುತ್ತದೆ. ಬಳಿಕ ಅಲ್ಲಿ ಅಡುಗೆ ಎಣ್ಣೆ ಹಾಕಿದರೆ ಸಾವಯವ ಇಂಗಾಲ ದೊರೆಯುತ್ತದೆ. ಅಂತಿಮವಾಗಿ ಟ್ಯಾಂಕರ್ ನಲ್ಲಿ ಸಿ1ರಿಂದ ಸಿ8 ಮಾದರಿಯ ಹೈಡ್ರೋ ಕಾರ್ಬನ್ ಅಂಶದ ಇಂಧನ ಶೇಖರಣೆಯಾಗುತ್ತದೆ. ಮಿಥೇನ್, ಈಥೇನ್, ಎಥಿಲೇನ್ ಮಾದರಿಯ ಪೆಟ್ರೋಲಿಯಂ ಅನಿಲಗಳೇ ಇದರಲ್ಲಿರುತ್ತವೆ. ಇದನ್ನು ಸಾಮಾನ್ಯ ತಾಪ ಮಾನದ ಕೊಠಡಿಯಲ್ಲಿ ಶೇಖರಿಸಿದಾಗ ದ್ರವರೂಪ ಪಡೆದುಕೊಳ್ಳುತ್ತದೆ.



ಸೋಲಾರ್ ವಿದ್ಯುತ್ ಶಕ್ತಿ ಬಳಸಿ ರಿಯಾಕ್ಟರ್‍ಗೆ ನಾಲ್ಕು ಲೀಟರ್‍ನಷ್ಟು ಸ್ವಚ್ಛ ಕುದಿಸಿ ಆರಿಸಿದಂತಹ ನೀರು, 500 ಗ್ರಾಂನಷ್ಟು ಬಳಕೆ ಮಾಡಿದಂತ ಅಡುಗೆ ಎಣ್ಣೆ ಅಥವಾ ಹೊಂಗೆ, ಬೇವಿನ ಎಣ್ಣೆಯನ್ನು ಹಾಕಿ 5 ಗಂಟೆಗಳ ಕಾಲ ಬಿಟ್ಟಲ್ಲಿ ನಾಲ್ವರು ಇರುವ ಒಂದು ಕುಟುಂಬಕ್ಕೆ ತಿಂಗಳಿಗೆ ಸಾಕಾಗುವಷ್ಟು ಇಂಧನ ಉತ್ಪಾದನೆಯಾಗುತ್ತದೆ. ಇದನ್ನು ಅಡುಗೆ ಜತೆಗೆ ವಾಹನ ಗಳಿಗೂ ಬಳಸಬಹುದು ಎನ್ನುವುದು ಡಾ.ರಾಜಾ ವಿಜಯ್ ಕುಮಾರ್  ಅಭಿಪ್ರಾಯ.


ಅಂತಾರಾಷ್ಟ್ರೀಯ ಸುರಕ್ಷಾ ಕ್ರಮಗಳಂತೆ ರಿಯಾಕ್ಟರ್ ರೂಪಿಸಲಾಗಿದೆ. ಕೇಂದ್ರ ಸರ್ಕಾರದ ಯಾವುದೇ ಇಂಧನ ಉದ್ದಿಮೆ ಗಳಿಗೆ ಪೇಟೆಂಟ್ ಕೊಡಲು ತಯಾರಿದ್ದೇನೆ. ದೇಶದಇಂಧನ ಅಗತ್ಯಕ್ಕೆ ಪರ್ಯಾಯ  ಮಾರ್ಗ ಹುಡುಕುವುದು ಅನಿವಾರ್ಯ ವಾದ್ದರಿಂದ, ಈ ಸಂಶೋಧನೆ ಭಾರತದ ಪಾಲಿಗೆ ದೊಡ್ಡ ಯಶಸ್ಸು ಎಂದುಕೊಂಡಿದ್ದೇನೆ.
- ಡಾ.ರಾಜಾ ವಿಜಯ್ ಕುಮಾರ್,
ಸ್ಕೇಲೆನ್ ಎನರ್ಜಿ ರಿಸರ್ಚ್
ಇನ್ಸಿಟ್ಯೂಟ್ ಅಧ್ಯಕ್ಷ


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com