ರೆಡ್ ಮರ್ಕ್ಯುರಿ ಹೆಸರಲ್ಲಿ ವಂಚನೆಗೆ ಯತ್ನ

ಎಲ್‌ಟಿಟಿಇ ಕಥೆ ಹೇಳಿ 150 ಕೋಟಿಗೆ ಬೇಡಿಕೆ, ಸ್ಯಾಂಪಲ್ ತೋರಿಸಲು 5 ಲಕ್ಷ ಕೇಳಿದ್ದರು.
ನಕಲಿ ರೆಡ್ ಮರ್ಕ್ಯುರಿ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಆರೋಪಿಗಳು (ಸಂಗ್ರಹ ಚಿತ್ರ)
ನಕಲಿ ರೆಡ್ ಮರ್ಕ್ಯುರಿ ಮಾರಾಟ ಮಾಡಲು ಯತ್ನಿಸಿ ಪೊಲೀಸರ ಅತಿಥಿಯಾಗಿರುವ ಆರೋಪಿಗಳು (ಸಂಗ್ರಹ ಚಿತ್ರ)

ಸಿಸಿಬಿ ಪೊಲೀಸರಿಂದ ಮೂವರು ಆರೋಪಿಗಳ ಬಂಧನ
ಬೆಂಗಳೂರು: ನಕಲಿ ಚಿನ್ನ, ವಜ್ರಾಭರಣ, ನೋಟು, ಬೇರೆ ಬೇರೆ ವಸ್ತುಗಳನ್ನು ನಕಲಿ ಮಾರಾಟ ಮಾಡಿ ಸಾರ್ವಜನಿಕರನ್ನು ಮೋಸ ಮಾಡುವುದನ್ನು ನೋಡಿದ್ದೇವೆ. ಆದರೆ ಇಲ್ಲೊಂದು ಖದೀಮರ ತಂಡ ನ್ಯೂಕ್ಲಿಯರ್ ಬಾಂಬ್ ತಯಾರಿಸಲು ಬಳಸುತ್ತಾರೆ ಎನ್ನಲಾದ ರೆಡ್ ಮರ್ಕ್ಯುರಿಯನ್ನು (ನಕಲಿ) ಮಾರಾಟ ಮಾಡಿ ವಂಚಿಸಲು ಯತ್ನಿಸಿ ಪೊಲೀಸರ ಅತಿಥಿಯಾಗಿದೆ.

ಹೌದು, ಅಗಾಧ ಶಕ್ತಿಯುಳ್ಳ ಬಾಂಬ್ ತಯಾರಿಕ ವಸ್ತು (ರೆಡ್ ಮರ್ಕ್ಯುರಿ) ಎಂದು ಹೇಳಿ ಅದನ್ನು ರು.150 ಕೋಟಿಗೆ ಮಾರಾಟ ಮಾಡಲು ಯತ್ನಿಸಿದವರನ್ನು ಗ್ರಾಹಕರ ಸೋಗಿನಲ್ಲಿ ಹೋದ ಸಿಸಿಬಿ ಪೊಲೀಸರ ತಂಡ ಹೆಡೆ ಮುರಿ ಕಟ್ಟಿದೆ. ಅಸಲಿಗೆ ಆರೋಪಿಗಳು ಮಾರಾಟ ಮಾಡಲು ಹೊರಟಿದ್ದ ರೆಡ್‌ಮರ್ಕ್ಯುರಿ ಬರೀ ಅಲ್ಯೂಮಿನಿಯಂ ಆಗಿದ್ದು, ಅದರ ಮಾರುಕಟ್ಟೆ ಬೆಲೆ 7,500 ಸಾವಿರ ಮಾತ್ರ.

ಪ್ರಕರಣ ಸಂಬಂಧ ತಮಿಳುನಾಡಿನ ಹೊಸೂರು ಮೂಲದ ಮಣಿಕಂಠನ್, ಎಂಡಿ ಹನೀಫ್ ಹಾಗೂ ಹೊಸಕೋಟೆಯ ನಾಗಾರಾಜ ಎಂಬುವವರನ್ನು ಬಂಧಿಸಲಾಗಿದೆ. ಆರೋಪಿಗಳೆಲ್ಲರೂ ರಿಯಲ್ ಎಸ್ಟೇಟ್ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಮತ್ತೊಬ ಆರೋಪಿ ಜಯ್ ಸಿಂಗ್ ಎಂಬಾತ ತಲೆಮರೆಸಿಕೊಂಡಿದ್ದಾನೆ. ಆತನ ಬಂಧನಕ್ಕೆ ಕಾರ್ಯಾಚರಣೆ ಮುಂದುವರೆದಿದೆ ಎಂದು ಸಿಸಿಬಿ ಡಿಸಿಪಿ ಅಭಿಷೇಕ್ ಗೋಯಲ್ ತಿಳಿಸಿದರು.

ವಿವರ: ನಾಲ್ವರು ಆರೋಪಿಗಳು ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಬಳಸಲಾಗುವ ರೆಡ್ ಮರ್ಕ್ಯುರಿ ಮಾರಾಟಕ್ಕಿದೆ ಎಂದು ಹೇಳುತ್ತಿದ್ದರು. ಈ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಸಿಕ್ಕಿತು. ಗ್ರಾಹಕರ ಸೋಗಿನಲ್ಲಿ ಸಿಸಿಬಿ ಪೊಲೀಸರ ತಂಡ ಆರೋಪಿಗಳ ಸಂಪರ್ಕ ಸಾಧಿಸಿ ತಾವು ಈ ವಸ್ತುವನ್ನು ಕೊಂಡು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತೇವೆ ಎಂದರು. ಅಲ್ಲದೇ ಸ್ಯಾಂಪಲ್ ನೋಡಬೇಕಿದೆ ಎಂದಿದ್ದರು.

ಅದಕ್ಕೆ ಆರೋಪಿಗಳು 5 ಲಕ್ಷವಾಗುತ್ತದೆ ಎಂದು ಹೇಳಿದ್ದರು. ಗಾಂಧಿನಗರದ ಉಧ್ಯಾನದಲ್ಲಿ ಆರೋಪಿಗಳು ಸ್ಯಾಂಪಲ್ ಎಂದು ಸಿಲಿಂಡರ್ ಬ್ಲಾಕ್‌ನಲ್ಲಿ ಅಲ್ಯೂಮಿನಿಯಂ ಪುಡಿತಂದಿದ್ದರು.

ಅಲ್ಲದೇ ಅದನ್ನು ತೆರೆದರೆ ಊಹಿಸಲು ಅಸಾಧ್ಯವಾದ ಸ್ಫೋಟ ಸಂಭವಿಸುತ್ತದೆ ಎಂದು ಹೇಳಿ ಲ್ಯಾಪ್‌ಟಾಪ್‌ನಲ್ಲಿ ಪವರ್ ಪಾಯಿಂಟ್ ಮೂಲಕ ರೆಡ್ ಮರ್ಕ್ಯುರಿ ಬಗ್ಗೆ ವಿವರಣೆ ನೀಡಿದರು. ಕೂಡಲೇ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಅದು ನಕಲಿ ವಸ್ತುವಾಗಿದ್ದು, ತಾವು ವಂಚನೆ ಮಾಡುತ್ತಿದ್ದಾಗಿ ಬಾಯಿಬಿಟ್ಟಿದ್ದಾರೆ. ಅಲ್ಲದೇ ಈ ರೀತಿ ವಂಚನೆ ಮಾಡಲು ನಮಗೆ ಐಡಿಯಾ ಕೊಟ್ಟಿದ್ದೇ ಜಯ್‌ಸಿಂಗ್ ಎಂದು ಹೇಳಿದ್ದಾರೆ. ಸದ್ಯ ಆರೋಪಿ ಜಯ್‌ಸಿಂಗ್ ತಲೆ ಮರೆಸಿಕೊಂಡಿದ್ದಾನೆ.

ಮುಂಜಾಗೃತಾ ಕ್ರಮವಾಗಿ ಆರೋಪಿಗಳು ಹೊಂದಿದ್ದ ವಸ್ತುವನ್ನು ಅಣು ವಸ್ತುಗಳ ಸಂಶೋಧನ ಸಂಸ್ಥೆ ಮೂಲಕ ಪರೀಕ್ಷಿಸಿದಾಗ ಅದು ಅಲ್ಯೂಮಿನಿಯಂ ಎನ್ನುವುದು ಖಚಿತವಾಗಿದೆ. ಆರೋಪಿಗಳಿಂದ 1 ಲ್ಯಾಪ್‌ಟಾಪ್ ಹಾಗೂ 9 ಕೆಜಿ ಅಲ್ಯೂಮಿನಿಯಂ ವಶಪಡಿಸಿಕೊಳ್ಳಲಾಗಿದೆ ಎಂದು ಸಿಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಸೋವಿಯತ್ ಯೂನಿಯನ್, ಎಲ್‌ಟಿಟಿಇ ಕಥೆ
ಸಿಕ್ಕಿದ್ದು ಎಲ್ಲಿ ಎಂದು ಪೊಲೀಸರು ಕೇಳಿದಾಗ ಆರೋಪಿಗಳು ಅದ್ಭುತವಾಗಿ ಕಥೆ ಕಟ್ಟಿದ್ದಾರೆ. ರೆಡ್ ಮರ್ಕ್ಯುರಿಯನ್ನು ರಷ್ಯಾ ಯೂನಿಯನ್‌ನಿಂದ ಎಲ್‌ಟಿಟಿಇ ಖರೀದಿಸಿತ್ತು. ಆದರೆ ಎಲ್‌ಟಿಟಿಇ ಮುಖ್ಯಸ್ಥ ಪ್ರಭಾಕರನ್ ಸಾವಿನ ನಂತರ ಎಲ್‌ಟಿಟಿಇ ಮಾಜಿ ಸದಸ್ಯರು ಭಾರತಕ್ಕೆ ತಂದಿದ್ದರು. ಇದು ಅಸಲಿ ಎಂದು ನಂಬಿಸಲು ಆರೋಪಿಗಳು ಅಮೆರಿಕದ ಲ್ಯಾಬ್‌ನಲ್ಲಿ ಪರೀಕ್ಷಿಸಿ ಪ್ರಮಾಣಿತವಾಗಿದೆ ಎನ್ನಲು ಪ್ರಮಾಣಪತ್ರವನ್ನು ಸಿದ್ದಪಡಿಸಿದ್ದರು. ಅದನ್ನು ತೋರಿಸಲು ಆರೋಪಿಗಳು ಸಿಸಿಬಿ ಪೊಲೀಸರಿಂದ 5 ಲಕ್ಷ ನಗದ ಪಡೆದುಕೊಂಡಿದ್ದರು.

ಆರೋಪಿಗಳು ಬೇರೆಯವರಿಂದ ಮೋಸಹೋಗಿ ನಂತರ ಮತ್ತೊಬ್ಬರಿಗೆ ಮೋಸ ಮಾಡಲು ಯತ್ನಿಸಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ. ರೆಡ್ ಮರ್ಕ್ಯುರಿ ಕೊಳ್ಳುವವರೂ ಯಾರು ಇರಲಿಲ್ಲ. ಇವರ ಉದ್ದೇಶ ಮೋಸ ಮಾಡುವುದೇ ಆಗಿತ್ತು.
-ಅಭಿಷೇಕ್ ಗೋಯಲ್, ಸಿಸಿಬಿ ಡಿಸಿಪಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com