ಮತ್ತೆ ಬಂದಿದೆ ಚಿತ್ರ ಸಂತೆ

ನಾನಾ ಶೈಲಿಯ ಚಿತ್ರಗಳನ್ನು ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.
12ನೇ ವರ್ಷದ ಚಿತ್ರಸಂತೆ ಆರಂಭ
12ನೇ ವರ್ಷದ ಚಿತ್ರಸಂತೆ ಆರಂಭ
Updated on

ಬೆಂಗಳೂರು: 'ಎಲ್ಲರಿಗಾಗಿ ಕಲೆ' ಎಂಬ ಶೀರ್ಷಿಕೆಯೊಂದಿಗೆ ದೇಶದ ಹಲವು ಕಲಾವಿದರ ಅದ್ಭುತ, ಆಕರ್ಷಕ ಸಹಸ್ರಾರು ಚಿತ್ರಗಳು ಭಾನುವಾರ ನಗರಕ್ಕೆ ಲಗ್ಗೆಯಿಟ್ಟಿದೆ.

ಕರ್ನಾಟಕ ಚಿತ್ರಕಲಾ ಪರಿಷತ್ತು ಪ್ರತಿ ವರ್ಷದಂತೆ ಈ ಬಾರಿಯೂ ಜ.4ರಂದು 12ನೇ ವರ್ಷದ ಚಿತ್ರಸಂತೆ ಆರಂಭವಾಗಿದೆ. ರಾಜ್ಯದ ನಾನಾ ಕಲಾವಿದರ ಜತೆಗೆ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಸೇರಿದಂತೆ ದೇಶದ ಎಲ್ಲ ಭಾಗಗಳ ಕಲಾವಿದರು ಹೆಸರು ನೋಂದಾಯಿಸಿಕೊಂಡಿದ್ದಾರೆ.

ನಾನಾ ವೇದಿಕೆಗಳಲ್ಲಿ ನಿತ್ಯ ಚಿತ್ರಕಲಾ ಪ್ರದರ್ಶನಗಳು ನಡೆಯುತ್ತಿದ್ದರೂ ಹಲವು ಪ್ರತಿಭಾವಂತರಿಗೆ ವೇದಿಕೆ ಸಿಕ್ಕಿರುವುದಿಲ್ಲ. ಇಂತಹ ಕಲಾವಿದರಿಗೆ ವೇದಿಕೆ ಕಲ್ಪಿಸಲು ಪರಿಷತ್ ಕಳೆದ 11 ವರ್ಷಗಳಿಂದ ಸತತವಾಗಿ ಚಿತ್ರ ಸಂತೆ ಆಯೋಜಿಸುತ್ತಾ ಬಂದಿದೆ.

ಕಲಾಸಕ್ತರು ತಮಗಿಷ್ಟವಾದ ಚಿತ್ರಗಳನ್ನು ಖರೀದಿಸಲು ಕೂಡ ಈ ಸಂತೆ ಒಂದು ಉತ್ತಮ ವೇದಿಕೆ. ಅಂದ ಹಾಗೆ ಪ್ರದರ್ಶನಕ್ಕಿಟ್ಟಿರುವ ಚಿತ್ರಗಳಷ್ಟೇ ಅಲ್ಲ, ಸ್ಥಳದಲ್ಲಿಯೇ ತಮಗೆ ಬೇಕಾದ ಚಿತ್ರವನ್ನು ಕಲಾವಿದರಿಂದ ಚಿತ್ರಿಸಿಕೊಂಡು ಖರೀದಿಸಿ ಮನೆಗೊಯ್ಯುವ ಅವಕಾಶ ಕೂಡಾ ಇದೆ.

ಪರಿಷತ್ತಿನ  ಮುಂಭಾಗದಲ್ಲಿನ ಕುಮಾರಕೃಪಾ ರಸ್ತೆಯುದ್ದಕ್ಕೂ ಹರಡುವ, ಒಂದೇ ದಿನದ ಈ ಬೃಹತ್ ಮೇಳ ನಾನಾ ಪ್ರದೇಶಗಳ ಕಲಾವಿದರಿಗೆ ಒಂದೇ ಸ್ಥಳದಲ್ಲಿ ಅವಕಾಶ ಕಲ್ಪಿಸುತ್ತದೆ. ಎಲ್ಲರಿಗೂ ಕಲಾಕೃತಿ ಎಟುಕುವಂತಿರಬೇಕು, ಕಲಾಸಕ್ತರು ಕಲಾಕೃತಿ ಕೊಳ್ಳಬೇಕು.

ಚಿತ್ರ, ಶಿಲ್ಪ, ಗ್ರಾಫಿಕ್ ಅಲ್ಲದೆ ನಾನಾ ಶೈಲಿಯ ಸಾಂಪ್ರದಾಯಿಕ ಚಿತ್ರಗಳನ್ನು ಈ ಸಂತೆಯಲ್ಲಿ ಪ್ರದರ್ಶನ ಮತ್ತು ಮಾರಾಟಕ್ಕೆ ಇರಿಸಲಾಗಿದೆ.

ಗುಣಮಟ್ಟಕ್ಕಾಗಿ ಸಮಿತಿ
ಈ ವರ್ಷ ಚಿತ್ರಸಂತೆಯಲ್ಲಿ ಗುಣಮಟ್ಟದ ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಲು ನಿರ್ಧರಿಸಲಾಗಿದೆ. ಜತೆಗೆ ನಕಲು ಚಿತ್ರ(ಬೇರೆಯವರ ಚಿತ್ರಗಳನ್ನು ಕಾಪಿ ಮಾಡುವುದು)ಗಳನ್ನು ತಡೆಯುವ ಸಲುವಾಗಿ ಚಿತ್ರಗಳ ಆಯ್ಕೆಗೆ ತಜ್ಞರ ಸಮಿತಿ ರಚಿಸಲಾಗಿದೆ. ಈ ಸಮಿತಿಯಲ್ಲಿ ಕಲಾ ಕಾಲೇಜುಗಳ ಮುಖ್ಯಸ್ಥರು ಹಾಗೂ ಪರಿಷತ್ತಿನ ಪದಾಧಿಕಾರಿಗಳು ಇರುತ್ತಾರೆ. ಅರ್ಜಿಗಳನ್ನು ಸ್ವೀಕರಿಸುವ ಸಂದರ್ಭದಲ್ಲಿಯೇ ಅರ್ಜಿ ಜತೆಯಲ್ಲಿ ಕಳುಹಿಸುವ ಚಿತ್ರಗಳ ಗುಣಮಟ್ಟವನ್ನು ಪರಿಶೀಲಿಸಿ ಸೂಕ್ತವೆನಿಸುವ ಚಿತ್ರಗಳಿಗೆ ಮಾತ್ರ ಪ್ರವೇಶ ನೀಡಲಾಗಿದೆ.

ರಸ್ತೆಯುದ್ದಕ್ಕೂ ಸಿಸಿಟಿವಿ
ಚಿತ್ರಗಳನ್ನು ವೀಕ್ಷಿಸಲು ಲಕ್ಷಾಂತರ ಜನ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಯಾವುದೇ ಗೊಂದಲ, ಗದ್ದಲಗಳಿಲ್ಲದಂತೆ ನೋಡಿಕೊಳ್ಳಲು ಹಾಗೂ ಭದ್ರತೆ ಕಲ್ಪಿಸುವ ಸಲುವಾಗಿ ಇದೇ ಮೊದಲ ಬಾರಿಗೆ ಶಿವಾನಂದ ವೃತ್ತ ಆದಿಯಾಗಿ ಕುಮಾರಕೃಪಾ ರಸ್ತೆಯುದ್ದಕ್ಕೂ 15 ಸಿಸಿ ಟಿವಿಗಳನ್ನು ಅಳವಡಿಸಲಾಗಿದೆ. ಜತೆಗೆ ಸುಗಮ ವೀಕ್ಷಣೆ ಮತ್ತು ಸೂಕ್ತ ನಿಗಾ ವಹಿಸಲು ಅನುಕೂಲವಾಗುವಂತೆ 50 ಹೋಮ್‌ಗಾರ್ಡ್ಸ್ ನೇಮಿಸಲಾಗಿದೆ.

ವಾಹನ ಸಂಚಾರ ನಿಷೇಧ
ಚಿತ್ರ ಸಂತೆಯಲ್ಲಿ ರಸ್ತೆಯಲ್ಲೇ ಪ್ರದರ್ಶನ ಮತ್ತು ಮಾರಾಟ ಮಳೆಗೆಗಳನ್ನು ತೆರೆಯುವುದಿರಿಂದ ಇಂದು ಕುಮಾರ ಕೃಪಾ ರಸ್ತೆಯಲ್ಲಿ ಎಲ್ಲ ವಾಹನಗಳ ಸಂಚಾರ ದಟ್ಟಣೆಯನ್ನು ತಡೆಯುವಂತೆ ಚಿತ್ರಕಲಾ ಪರಿಷತ್‌ನ ಪದಾಧಿಕಾರಿಗಲು ಈಗಾಗಲೇ ಸಂಬಂಧಪಟ್ಟವರಿಗೆ ಮನವಿ ಸಲ್ಲಿಸಿದ್ದಾರೆ.

ಆಯ್ದ ಕಲಾಕೃತಿ ಪ್ರದರ್ಶನ
ಪರಿಷತ್ತಿನ ಸಂಗ್ರಹದಲ್ಲಿ ಪಾರಂಪರಿಕ, ಸಾಂಪ್ರದಾಯಿಕ, ಆಧುನಿಕ, ಸಮಕಾಲೀನ ಮತ್ತು ಜಾನಪದ ಶೈಲಿಯ ಕಲಾಕೃತಿಗಳಿದ್ದು, ಪರಿಷತ್ತಿನ ಗ್ಯಾಲರಿಗಳಲ್ಲಿ ಆಯ್ದ ಕಲಾಕೃತಿಗಳು ಪ್ರದರ್ಶನಗೊಂಡಿವೆ.


Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com