ಕೆಪಿಎಸ್‌ಸಿ ಕಿರಿಕ್: ರಾಜ್ಯಪಾಲರ ಆಕ್ಷೇಪಕ್ಕೆ ಸೊಪ್ಪು ಹಾಕದ ಸರ್ಕಾರ

ಕೆಪಿಎಸ್‌ಸಿ ನೇಮಕಕ್ಕೆ ಸಂಬಂಧಿಸಿ ವಿವಾದ ತಾರಕಕ್ಕೇರುವ ಸಾಧ್ಯತೆ...
ವಾಜು ಬಾಯಿ ವಾಲ
ವಾಜು ಬಾಯಿ ವಾಲ
Updated on

ಬೆಂಗಳೂರು: ಕರ್ನಾಟಕ ಲೋಕಸೇವಾ ಆಯೋಗಕ್ಕೆ ಅಧ್ಯಕ್ಷರು, ಸದಸ್ಯರ ನೇಮಕ ವಿಚಾರದಲ್ಲಿ ರಾಜ್ಯಪಾಲರ ಆಕ್ಷೇಪಣೆಗೆ ರಾಜ್ಯ ಸರ್ಕಾರ ಕ್ಯಾರೇ ಎಂದಿಲ್ಲ.
ರಾಜ್ಯ ಸರ್ಕಾರದ ಈ ಧೋರಣೆಯಿಂದ ಕೆಪಿಎಸ್‌ಸಿ ನೇಮಕಕ್ಕೆ ಸಂಬಂಧಿಸಿ ವಿವಾದ ತಾರಕಕ್ಕೇರುವ ಸಾಧ್ಯತೆ ಹೆಚ್ಚಿದೆ.

ಏತನ್ಮಧ್ಯೆ, ಕಳಂಕಿತರನ್ನು ಒಳಗೊಂಡ ಸದಸ್ಯರನ್ನು ಕೆಪಿಎಸ್‌ಸಿಗೆ ನೇಮಕ ಮಾಡುವ ಸರ್ಕಾರದ ಶಿಫಾರಸನ್ನು ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲು ನಿರ್ಧರಿಸಲಾಗಿದೆ. ರಾಜ್ಯಪಾಲರು ಹಾಗೂ ಸರ್ಕಾರಕ್ಕೆ ಸೀಮಿತವಾಗಿದ್ದ ತಿಕ್ಕಾಟ ಕೋರ್ಟ್ ಮೆಟ್ಟಿಲನ್ನೂ ಏರುವ ಸಾಧ್ಯತೆಯಿದೆ.

ಸುಪ್ರೀಂ ಕೋರ್ಟ್ ಹಾಗೂ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಹೆಸರನ್ನು ಶಿಫಾರಸು ಮಾಡಿ, ಜತೆಗೆ ಪಟ್ಟಿಯಲ್ಲಿರುವವರ ಬಗ್ಗೆ ವಿಚಕ್ಷಣ ದಳ ಹಾಗೂ ಲೋಕಾಯುಕ್ತದ ವರದಿ ನೀಡಿ ಎಂದು ರಾಜ್ಯಪಾಲರು ಸೂಚಿಸಿದ್ದಾರೆ. ಆದರೆ, ರಾಜ್ಯ ಸರ್ಕಾರ ಈ ವಿಚಾರದ ಬಗ್ಗೆ ಮೌನವಹಿಸಿ ಮತ್ತೆ ಶಿಫಾರಸು ಪಟ್ಟಿ ಕಳುಹಿಸಿದೆ.

ರಾಜ್ಯ ಸರ್ಕಾರ ಶಿಫಾರಸು ಮಾಡಿರುವ ಏಳು ವ್ಯಕ್ತಿಗಳ ಬಗ್ಗೆ 'ಹೆಚ್ಚುವರಿ ಮಾಹಿತಿ ನೀಡುವಂತೆ' ರಾಜ್ಯಪಾಲರು ಎಲ್ಲಿಯೂ ಕೇಳಿಲ್ಲ. ಬದಲಾಗಿ ಈ ವ್ಯಕ್ತಿಗಳ 'ಹಿನ್ನೆಲೆ ಹಾಗೂ ಪ್ರಾಮಾಣಿಕತೆ'ಯ ಬಗ್ಗೆ ತನಿಖಾ ದಳದ ವರದಿ ಬಯಸಿದ್ದಾರೆ. ಈ ಮೂಲಕ ಸಾಂವಿಧಾನಿಕ ಸಂಸ್ಥೆಗೆ ಪ್ರಾಮಣಿಕ ಹಾಗೂ ರಾಜಕೀಯೇತರ ವ್ಯಕ್ತಿಗಳನ್ನು ಶಿಫಾರಸು ಮಾಡುವಂತೆ ಪರೋಕ್ಷವಾಗಿ ಹೇಳಿದ್ದಾರೆ.

ಆದರೆ ವಿಚಕ್ಷಣ ದಳ ಅಥವಾ ಲೋಕಾಯುಕ್ತದಿಂದ ಈ ವ್ಯಕ್ತಿಗಳ ಬಗ್ಗೆ ಯಾವುದೇ ತನಿಖೆ ನಡೆಸಲಾಗಿಲ್ಲ ಎಂದು ಲೋಕಾಯುಕ್ತ ಕಚೇರಿಯ ಹಿರಿಯ ಅಧಿಕಾರಿಯೊಬ್ಬರು 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ. ರಾಜ್ಯಪಾಲರ ಕೋರಿಕೆಯಂತೆ ಯಾವುದೇ ವ್ಯಕ್ತಿಯ ಬಗ್ಗೆ ವರದಿ ನೀಡುವಂತೆ ಇವತ್ತಿನವರೆಗೆ ರಾಜ್ಯ ಸರ್ಕಾರದಿಂದ ಯಾವುದೇ ಸೂಚನೆಯೂ ಬಂದಿಲ್ಲ ಎಂದು ಅವರು ಹೇಳಿದ್ದಾರೆ.

ಸವೋಚ್ಚ ಆಕ್ಷೇಪಣೆ: ಈ ಹಿಂದೆ 2007ರಲ್ಲಿ ಕೆಪಿಎಸ್‌ಸಿಗೆ ಅಧ್ಯಕ್ಷರು ಹಾಗೂ ಸದಸ್ಯರನ್ನು ಆಯ್ಕೆ ಮಾಡುವಾಗ ರಾಜ್ಯಪಾಲರ ಕಚೇರಿಯೇ ಕೆಲ ವಿಷಯಗಳನ್ನು ಹೇಳಿತ್ತು. ಸರ್ಕಾರದ ಶಿಫಾರಸು ಪಟ್ಟಿಯಲ್ಲಿರುವ ವ್ಯಕ್ತಿಗಳ ಬಗ್ಗೆ ವಿಚಕ್ಷಣಾ ದಳದಿಂದ ಯಾವುದೇ ವಿಚಾರಣೆ ನಡೆಸಿಲ್ಲ.

ಭವಿಷ್ಯದಲ್ಲಿ ಇದು ಮರುಕಳಿಸಬಾರದು. ಸರ್ಕಾರೇತರ ಸೇವೆಯಲ್ಲಿರುವವರ ನೇಮಕ ಸಂದರ್ಭದಲ್ಲಿ ವಿಚಕ್ಷಣಾ ದಳದ ವರದಿ ಅನಿವಾರ್ಯ. ಇದರ ಜತೆಗೆ ಲೋಕಾಯುಕ್ತ ಸಂಸ್ಥೆಯಿಂದಲೂ ವಿಚಾರಣೆ ನಡೆಸಬೇಕಾಗುತ್ತದೆ.

ಸೈಯ್ಯದ್ ಉಲ್ಫತ್ ಹುಸೇನ್ ಬಗ್ಗೆ ಮಾತ್ರ ವಿಚಕ್ಷಣಾ ವರದಿ ನೀಡಲಾಗಿದೆ. ಆದರೆ ಲೋಕಾಯುಕ್ತ ವರದಿಯಿಲ್ಲ. ಉಳಿದ ಯಾವುದೇ ಸದಸ್ಯರ ಬಗ್ಗೆ ಸರ್ಕಾರ ವ್ಯಕ್ತಿತ್ವ ವಿವರ ಹೊರತುಪಡಿಸಿ ಮತ್ಯಾವುದೇ ವರದಿ ನೀಡಿಲ್ಲ ಎನ್ನುವುದು ರಾಜ್ಯಪಾಲರ ಆಕ್ಷೇಪಣೆ.

ಪಂಚಾಬ್ ಪ್ರಕರಣ: ಪಂಜಾಬ್ ಲೋಕಸೇವಾ ಆಯೋಗಕ್ಕೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸಿರುವುದಕ್ಕೆ ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ವಿರೋಧ ವ್ಯಕ್ತಪಡಿಸಿತ್ತು. ಸುಪ್ರೀಂ ಕೋರ್ಟ್ ಕೂಡ ಇದಕ್ಕೆ ಅನುಮೋದನೆ ಸೂಚಿಸಿ ನೇಮಕವನ್ನು ಕಾನೂನು ಬಾಹಿರ ಎಂದು ಘೋಷಿಸಿದೆ. ಸಾಂವಿಧಾನಿಕ ಸಂಸ್ಥೆಗಳಿಗೆ ಕೇವಲ ರಾಜಕೀಯ ಹಿತಾಸಕ್ತಿ ಆಧರಿಸಿ ನೇಮಕ ಮಾಡುವುದು ಅಸಿಂಧು ಎನ್ನುವುದು ಕೋರ್ಟ್ ಅಭಿಮತ.

ಇದಲ್ಲದೇ ಎರಡನೇ ಆಡಳಿತ ಸುಧಾರಣೆ ಆಯೋಗದ ವರದಿಯಲ್ಲೂ ಈ ಸಂಬಂಧ ಸ್ಪಷ್ಟ ಉಲ್ಲೇಖ ಮಾಡಲಾಗಿದೆ. ಈ ಸಂಬಂಧ ಸುಪ್ರೀಂ ಕೋರ್ಟ್ ಆದೇಶ ಆಧರಿಸಿ ಕೇಂದ್ರ ಸರ್ಕಾರವು 2007ರಲ್ಲಿ ಒಂದು ಮಾರ್ಗಸೂಚಿ ಹೊರಡಿಸಿದೆ. ಇವೆಲ್ಲವನ್ನೂ ರಾಜ್ಯಪಾಲರು ತಮ್ಮ 4 ಪುಟಗಳ ಪತ್ರದಲ್ಲಿ ತಿಳಿಸಿದ್ದಾರೆ.

-ರಾಜೀವ ಹೆಗಡೆ

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com