ನಿತ್ಯಾ ಭಕ್ತೆ ನಿಗೂಢ ಸಾವು ತನಿಖೆಗೆ ಒತ್ತಾಯ

ಹೊಸದಾಗಿ ಶವಪರೀಕ್ಷೆ ನಡೆಸಿ, ಆ ವರದಿ ಆಧಾರದ ಮೇಲೆ ತನಿಖೆಯಾಗಬೇಕು...
ಸಂಗೀತಾಳ ತಾಯಿ ಝಾನ್ಸಿರಾಣಿ
ಸಂಗೀತಾಳ ತಾಯಿ ಝಾನ್ಸಿರಾಣಿ

ಬೆಂಗಳೂರು: ಬಿಡದಿ ನಿತ್ಯಾನಂದ ಆಶ್ರಮದ ಸ್ವಯಂ ಸೇವಕಿಯಾಗಿದ್ದ ಸಂಗೀತಾಳ ನಿಗೂಢ ಸಾವಿನ ಬಗ್ಗೆ ಸೂಕ್ತ ತನಿಖೆಯಾಗಬೇಕು ಎಂದು ಸಂಗೀತಾಳ ತಾಯಿ ಝಾನ್ಸಿರಾಣಿ ಒತ್ತಾಯಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಮಾತನಾಡಿದ ಅವರು, ಸಂಗೀತಾಳದ್ದು ಅಸಹಜ ಸಾವು. ಈ ಸಂಬಂಧವಾಗಿ ಈಗಾಗಲೇ ರಾಮನಗರ ಎಸ್ಪಿಗೆ ದೂರು ನೀಡಲಾಗಿದೆ. ಹೂತಿರುವ ಶವ ಹೊರತೆಗೆದು ಹೊಸದಾಗಿ ಶವಪರೀಕ್ಷೆ ನಡೆಸಿ, ಆ ವರದಿ ಆಧಾರದ ಮೇಲೆ ತನಿಖೆಯಾಗಬೇಕು ಎಂದು ತಮಿಳುನಾಡಿನ ತಿರುಚಿ ಮೂಲದ ಝಾನ್ಸಿ ಒತ್ತಾಯಿಸಿದರು.

ಕಳೆದ ನಾಲ್ಕು ವರ್ಷಗಳಿಂದ ತಮ್ಮ ಇಡೀ ಕುಟುಂಬವೇ ನಿತ್ಯಾನಂದನ ಭಕ್ತರಾಗಿತ್ತು. ಬ್ಯಾಚುಲರ್ ಆಫ್ ಕಂಪ್ಯೂಟರ್ ಅಪ್ಲಿಕೇಷನ್ ಮುಗಿಸಿದ್ದ ಸಂಗೀತಾ ಆಶ್ರಮ ಸೇರಿದಳು. ಅಲ್ಲಿ ಆಕೆಗೆ ಮಾ ನಿತ್ಯಾ ತುರಿಯತೀತಾನಂದ ಸ್ವಾಮಿನಿ ಎಂದು ಹೆಸರಿಟ್ಟು ಕಂಪ್ಯೂಟರ್ ವಿಭಾಗದ ಮುಖ್ಯಸ್ಥೆಯನ್ನಾಗಿ ಮಾಡಲಾಗಿತ್ತು.

2013ರಲ್ಲಿ ನಾನು ಆಶ್ರಮಕ್ಕೆ ಭೇಟಿ ನೀಡಿದಾಗ ಸಂಗೀತಾಳ ಮೇಲೆ ರಂಜಿತಾ ಎಂಬವರು ಹಲ್ಲೆ ನಡೆಸಿದ್ದರು. ಹೀಗಾಗಿ, ಕೂಡಲೇ ಆಕೆಯನ್ನು ಸ್ವಂತ ಊರಿಗೆ ಕರೆದುಕೊಂಡು ಹೋಗಿದ್ದೆವು. ಆಗ ಸಂಗೀತಾ ಕಾಲಿಗೆ ಗಾಯಗಳಾಗಿದ್ದವು. ನಂತರ, ಆಕೆಗೆ ಆಶ್ರಮಕ್ಕೆ ಹಿಂದಿರುಗಬೇಡ ಎಂದಿದ್ದೆ. ಆದರೆ, ತಿರುಚಿಗೆ ಬಂದ ಮರುದಿನವೇ ಆಶ್ರಮದ ಹಂಸಾನಂದ ಎಂಬಾತ ಮನೆಗೆ ಬಂದು ಕೂಡಲೇ ಆಶ್ರಮಕ್ಕೆ ಮರಳುವಂತೆ ಸಂಗೀತಾಳಿಗೆ ಒತ್ತಾಯಿಸಿದ್ದ.

ಆಶ್ರಮದ ಲ್ಯಾಪ್‌ಟಾಪ್ ಹಾಗೂ ಕೆಲವು ಪೆನ್‌ಡ್ರೈವ್‌ಗಳನ್ನು ಸಂಗೀತಾ ಕದ್ದಿದ್ದಾಳೆ ಎಂದೂ ಹೇಳಿದ್ದ. ಆದರೆ, ಅವೆಲ್ಲವೂ ಸಂಗೀತಾಳದ್ದೆ ಆಗಿದ್ದವು. ನಿತ್ಯಾನಂದನಿಗೆ ಸೇರಿದ ಹಲವು ಫೋಟೊಗಳು ಹಾಗೂ ವಿಡಿಯೋಗಳಿವೆ ಎಂದು ಸಂಗೀತಾ ನನಗೆ ಹೇಳಿದ್ದಳು. ಹೀಗಾಗಿ, ಮಗಳನ್ನು ವಾಪಸ್ ಆಶ್ರಮಕ್ಕೆ ಕಳುಹಿಸಿಲು ನಿರ್ಧರಿಸಿದೆ.

ಆದರೆ, ಡಿ.28ರಂದು ಆಶ್ರಮದಿಂದ ಕರೆ ಮಾಡಿ, ಸಂಗೀತಾಳಿಗೆ ಹೃದಯಾಘಾತವಾಗಿದೆ. ಖಾಸಗಿ ಆಸ್ಪತ್ರೆ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ ಎಂದು ತಿಳಿಸಿದ್ದರು. ಅವರು ಇದನ್ನು ಸಹಜ ಸಾವೆಂದರೂ ಶವಪರೀಕ್ಷೆಗೆ ಒತ್ತಾಯಿಸಿದೆ.

ಆದರೆ, ಈಗಲೂ ಸಂಗೀತಾ ಸಾವಿನ ಕಾರಣ ನಿಗೂಢವಾಗಿಯೇ ಉಳಿದಿದೆ. ಸೂಕ್ತ ತನಿಖೆಯಾಗಿ ಸಾವಿಗೆ ನಿಖರ ಕಾರಣ ತಿಳಿಯಬೇಕೆಂದು ಒತ್ತಾಯಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com