ಪಾಕ್ ಪರ ಘೋಷಣೆ: ಲಾಠಿ ಚಾರ್ಜ್

ಪೊಲೀಸರ ಸೂಚನೆ ಧಿಕ್ಕರಿಸಿ ಪಾಕಿಸ್ತಾನ ಪರ ಘೋಷಣೆ ಕೂಗಿ ಪರಾರಿಯಾಗಲು ಯತ್ನಿಸಿದ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಳಗಾವಿ: ಪೊಲೀಸರ ಸೂಚನೆ ಧಿಕ್ಕರಿಸಿ ಪಾಕಿಸ್ತಾನ ಪರ ಘೋಷಣೆ ಕೂಗಿ ಪರಾರಿಯಾಗಲು ಯತ್ನಿಸಿದ ಯುವಕರ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದ ಘಟನೆ ನಗರದಲ್ಲಿ ಭಾನುವಾರ ನಡೆದಿದೆ.

ಈದ್ ಮಿಲಾದ್ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಧ್ಯಾಹ್ನ 3.30 ಗಂಟೆಗೆ ಬೈಕ್ ಮೇಲೆ ಮರಳುತ್ತಿದ್ದ ಸುಮಾರು 150 ಯುವಕರ ಸಮೂಹ ಬಡಕಲ್‌ಗಲ್ಲಿಯಲ್ಲಿ ಪಾಕ್ ಪರ ಘೋಷಣೆ ಕೂಗಿದೆ. ಹಾಗೆ ಮಾಡಬೇಡಿ ಎಂದು ಪೊಲೀಸರು ಎಚ್ಚರಿಸಿದರೂ ಘೋಷಣೆ ಮುಂದುವರಿಸಿದ್ದಾರೆ.

ಅವರನ್ನು ಚದುರಿಸಲು ಲಾಠಿ ಪ್ರಹಾರ ನಡೆಸುತ್ತಿದ್ದಂತೆ ಬೈಕ್‌ಗಳನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ. ಘಟನೆಯಿಂದಾಗಿ ಬಡಕಲ್‌ಗಲ್ಲಿ, ಖಂಜರಗಲ್ಲಿ, ಚಾಂದುಗಲ್ಲಿಗಳಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ. ಇದರ ಬೆನ್ನಲ್ಲಿಯೇ ದುಷ್ಕರ್ಮಿಗಳ ಗುಂಪೊಂದು ಶಿವಾಜಿನಗರದಲ್ಲಿ ಖಾಸಗಿ ಕಾರ್ ಮತ್ತು ಕೆಎಸ್‌ಆರ್‌ಪಿ ವಾಹನ ಮೇಲೆ ಕಲ್ಲು ತೂರಾಟ ನಡೆಸಿದೆ.

ಬಡಕಲ್‌ಗಲ್ಲಿಯಲ್ಲಿ 18 ಮತ್ತು ಶಿವಾಜಿ ನಗರದಲ್ಲಿ 8 ಬೈಕ್‌ಗಳನ್ನು ವಶಕ್ಕೆ ತೆಗೆದುಕೊಂಡಿರುವ ಮಾರ್ಕೆಟ್ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ.

ಬೈಕ್‌ಗಳ ಮಾಹಿತಿ ಆಧಾರದ ಮೇಲೆ ಐವತ್ತಕ್ಕೂ ಹೆಚ್ಚು ಜನರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾಗುವುದು. ಗಲಭೆ ಪೀಡಿತ ಪ್ರದೇಶಗಳೂ ಸೇರಿದಂತೆ ಕೆಲವೆಡೆ ಸಿಸಿಟಿವಿ ಕ್ಲಿಪಿಂಗ್‌ಗಳಲ್ಲಿ ಕೆಲವು ಮಾಹಿತಿ ಲಭ್ಯವಾಗಿದೆ' ಎಂದು ನಗರ ಪೊಲೀಸ್ ಆಯುಕ್ತ ರವಿ ಎಸ್. ತಿಳಿಸಿದ್ದಾರೆ.

ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದು ಎಂದು ಅವರು ಮನವಿ ಮಾಡಿದ್ದಾರೆ. ನಗರದೆಲ್ಲೆಡೆ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com