ತಪ್ಪಿತು ಉಗ್ರ ದುರಂತ

ದೇಶದಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಯ...
ತಪ್ಪಿತು ಉಗ್ರ ದುರಂತ

-ದೇಶಾದ್ಯಂತ ರೂಪುಗೊಳ್ಳುತ್ತಿದ್ದ ವಿಧ್ವಂಸಕ ಸಂಚು

ಕನ್ನಡಪ್ರಭ ವಾರ್ತೆ, ಬೆಂಗಳೂರು,ಜ.8:
ದೇಶದಲ್ಲಿ ಭಾರಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸುತ್ತಿದ್ದ ಇಂಡಿಯನ್ ಮುಜಾಹಿದೀನ್ ಸಂಘಟನೆಯ ಮೂವರು ಉಗ್ರರ ಬಂಧಿಸಿರುವ ಬೆಂಗಳೂರು ನಗರ ಪೊಲೀಸರು ಅಪಾರ ಪ್ರಮಾಣದ ಸ್ಫೋಟಕ ಸಾಮಗ್ರಿಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಮೂಲಕ ಭಾರಿ ವಿಧ್ವಂಸಕ ಕೃತ್ಯಕ್ಕೆ ತಡೆಹಾಕಿದ್ದಾರೆ.

'ದೊಡ್ಡ ಉಗ್ರರ' ಜಾಲವೊಂದರ ಭಾಗವಾಗಿ ವಿಧ್ವಂಸಕ ಕೃತ್ಯ ನಡೆಸಲು ಕೆಲಸ ಮಾಡುತ್ತಿದ್ದ ಉತ್ತರ ಕನ್ನಡ ಜಿಲ್ಲೆ ಭಟ್ಕಳ ಮೂಲದ ಸೈಯ್ಯದ್ ಇಸ್ಮಾಯಿಲ್ ಅಫಕ್(34), ಸದ್ದಾಂ ಹುಸೇನ್(35) ಹಾಗೂ ಅಬ್ದುಸ್ ಸುಬೂರ್(24) ಬಂಧಿತರು.

ಸೈಯ್ಯದ್ ಇಸ್ಮಾಯಿಲ್ ಹಾಗೂ ಸದ್ದಾಂ ಹುಸೇನ್ ಬೆಂಗಳೂರಿನ ಪುಲಕೇಶಿನಗರದ ಕಾಕ್ಸ್‌ಟೌನ್‌ನಲ್ಲಿ ವಾಸವಿದ್ದರು. ಅಬ್ದುಸ್ ಸುಬೂರ್ ಭಟ್ಕಳದಲ್ಲಿ ಮಾಸ್ಟರ್ ಆಫ್ ಬಿಸಿನೆಸ್ ಮ್ಯಾನೇಜ್‌ಮೆಂಟ್(ಎಂಬಿಎ) ವ್ಯಾಸಂಗ ಮಾಡುತ್ತಿದ್ದ. ನಗರ ಪೊಲೀಸರು ಹಾಗೂ ರಾಜ್ಯ ಆಂತರಿಕ ಭದ್ರತಾ ಘಟಕದ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ಇಬ್ಬರನ್ನು ಹಾಗೂ ಭಟ್ಕಳದಲ್ಲಿ ಓರ್ವನನ್ನು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳ ಬಗ್ಗೆ ಮಾಹಿತಿ ನೀಡುವ ಸಲುವಾಗಿ ಗುರುವಾರ ಸಂಜೆ ಬೆಂಗಳೂರು ಪೊಲೀಸ್ ಆಯುಕ್ತ ಎಂ.ಎನ್ ರೆಡ್ಡಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರೆಡ್ಡಿ ಬಂಧಿತರು ನಿಷೇಧಿತ ಉಗ್ರ ಸಂಘಟನೆ ಇಂಡಿಯನ್ ಮುಜಾಹಿದ್ದೀನ್ ಜತೆ ಸಂಪರ್ಕದಲ್ಲಿದ್ದರು ಎಂದು ಹೇಳಿದ್ದಾರೆ.  ದಾಳಿ ವೇಳೆ ಪೊಲೀಸರಿಗೆ ಭಟ್ಕಳದ ಮನೆಯಲ್ಲಿ ಜಿಲೆಟಿನ್, ಅಮೋನಿಯಂ ನೈಟ್ರೇಟ್, ಟೈಮರ್, ಲ್ಯಾಪ್‌ಟಾಪ್ ಹಾಗೂ ಸಂವಹನ ಸಾಮಗ್ರಿಗಳು ಸಿಕ್ಕಿವೆ. ಈ ಮೂವರು ಬೆಂಗಳೂರಿನಲ್ಲಿ ವಾಸವಿದ್ದು, ಬೇರೆಯವರ ಮಾರ್ಗದರ್ಶನದಲ್ಲಿ ಕೆಲಸ ಮಾಡುತ್ತಿದ್ದರು ಎಂದು ರೆಡ್ಡಿ ಹೇಳಿದ್ದಾರೆ. ಆದಾಗ್ಯೂ, ಬಂಧಿತ ಆರೋಪಿಗಳಿಗೂ ಚರ್ಚ್ ರಸ್ತೆಯಲ್ಲಿ ಸಂಭವಿಸಿದ ಸ್ಫೋಟಕ್ಕೆ ಮೇಲ್ನೋಟಕ್ಕೆ ಯಾವುದೇ ಸಂಬಂಧವಿಲ್ಲ ಅನಿಸುತ್ತಿದೆ. ಸ್ಫೋಟಕ್ಕೆ ಸಂಬಂಧವಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ ರೆಡ್ಡಿ ಬಂಧಿತ ಆರೋಪಿಗಳ ವಿರುದ್ಧ ಪುಲಿಕೇಶಿನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಹೇಳಿದ್ದಾರೆ.

ಗಣರಾಜ್ಯೋತ್ಸವ ಟಾರ್ಗೆಟ್?
ಪತ್ತೆಯಾಗಿರುವ ಸ್ಫೋಟಕಗಳು ಕೆಲವು ಕಚ್ಚಾ ಸ್ವರೂಪದಲ್ಲಿದ್ದರೆ ಮತ್ತೆ ಕೆಲವು ವಸ್ತುಗಳು ಸ್ಫೋಟಕ ರೂಪ ಪಡೆದುಕೊಳ್ಳುತ್ತಿದ್ದವು. ಅಂದರೆ, ಉಗ್ರರು ಈ ಎಲ್ಲಾ ಸಾಮಗ್ರಿಗಳನ್ನು ಬಳಸಿ ಭಾರಿ ಪ್ರಮಾಣದ ಬಾಂಬ್ ತಯಾರಿಸುವುದರಲ್ಲಿ ತೊಡಗಿರುವುದು ಕಂಡು ಬಂದಿದೆ. ಅಲ್ಲದೇ, ಮುಂಬರುವ ಗಣರಾಜ್ಯೋತ್ಸವದ ವೇಳೆ ಭಾರಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಎನ್ನುವ ಬಗ್ಗೆ ಅನುಮಾನವಿದ್ದು ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

ಭಾರಿ ಸ್ಫೋಟಕ ಪತ್ತೆ

3ಕೆಜಿ ಅಮೋನಿಯಂ ನೈಟ್ರೇಟ್, ಡಿಟೋನೇಟರ್‌ಗಳು, ಎಲೆಕ್ಟ್ರಾನಿಕ್ ಟೈಮರ್ ಡಿವೈಸ್, ಡಿಜಿಟಲ್ ಸರ್ಕಿಟ್, ಸರ್ಕಿಟ್ ಮಾಡಲು ಬೇಕಾಗುವ ಉಪಕರಣಗಳು, ಪಿವಿಸಿ ಪೈಪ್‌ಗಳು, ಜೈಲ್ ಆಧಾರಿತ ಸ್ಫೋಟ ಸಾಮಗ್ರಿಗಳು, ಇಂಧನ, ಆಯಿಲ್ ವಶಪಡಿಸಿಕೊಳ್ಳಲಾಗಿದೆ. ಸಿಕ್ಕಿರುವ ವಸ್ತುಗಳು ಪ್ರಬಲ ಬಾಂಬ್ ತಯಾರಿಸಲು ಬಳಸಬಹುದು.

ಮುಜೈಹಿದೀನ್ ಸಂಘಟನೆ ಸದಸ್ಯರು: ಬಂಧಿತ ಮೂವರು ನಿಷೇಧಿತ ಇಂಡಿಯನ್ ಮುಜಾಹಿದೀನ್ ಸಂಘಟನೆಯವರು. ಮೂವರು ಇತರ ಉಗ್ರ ಸಂಘಟನೆಗಳ ಸದಸ್ಯರೊಂದಿಗೆ ನಿರಂತರ ಸಂಪರ್ಕದಲ್ಲಿದರು ಎನ್ನುವುದು ತಿಳಿದು ಬಂದಿದೆ.



ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com