ಬೆಂಗಳೂರು: ಜೆಡಿಎಸ್ ಕಚೇರಿಯಲ್ಲಿ 'ಐರಾವತ' ಚಿತ್ರದ ಚಿತ್ರೀಕರಣ ನಡೆಸುತ್ತಿರುವುದಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ.
ಜನತಾ ದಳ (ಜ್ಯಾತ್ಯಾತೀತ) ಪಕ್ಷದ ಕಚೇರಿ ತಮ್ಮದೆಂದು ಕಾಂಗ್ರೆಸ್ ಹೇಳುತ್ತಿದ್ದು, ಈ ಬಗ್ಗೆ ನ್ಯಾಯಾಲಯ ಕೂಡ ಈಗಾಗಲೇ ತೀರ್ಪು ನೀಡಿದೆ. ಹೀಗಿರುವಾಗ ಅನುಮತಿಯಿಲ್ಲದೇ ಕಚೇರಿಯಲ್ಲಿ ಚಿತ್ರೀಕರಣಕ್ಕೆ ಅನುಮತಿ ನೀಡಿರುವುದು ತಪ್ಪು ಎಂದು ಕಾಂಗ್ರೆಸ್ ತನ್ನ ವಾದ ಮಂಡಿಸಿದೆ. ಆದರೆ ಈ ವಿವಾದದ ಬಗ್ಗೆ ಸ್ಪಷ್ಟನೆ ನೀಡಿರುವ 'ಐರಾವತ' ಚಿತ್ರದ ನಿರ್ಮಾಪಕ ಮತ್ತು ಜೆಡಿಎಸ್ ಎಂಎಲ್‌ಸಿ ಕೂಡ ಆಗಿರುವ ಸಂದೇಶ್ ನಾಗರಾಜ್ ಅವರು, ಕಚೇರಿಯಲ್ಲಿ ಚಿತ್ರೀಕರಣ ನಡೆಸುವ ಕುರಿತು ಜೆಡಿಎಸ್ ಮುಖಂಡ ಕುಮಾರ ಸ್ವಾಮಿ ಅವರಿಂದ ಅನುಮತಿ ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಆದರೆ ಈ ಬಗ್ಗೆಯೂ ಕಾಂಗ್ರೆಸ್ ತನ್ನ ಅಸಮಾಧಾನ ವ್ಯಕ್ತಪಡಿಸಿದ್ದು, ಸುಪ್ರೀಂಕೋರ್ಟ್‌ನ ಆದೇಶದಂತೆ ಜನವರಿ 1 ರಿಂದಲೇ ಕಚೇರಿಯು ಕೆಪಿಸಿಸಿ ಅಧೀನಕ್ಕೆ ಬಂದಿದೆ. ಹೀಗಾಗಿ ಕಚೇರಿ ಮೇಲೆ ಜೆಡಿಎಸ್‌ಗಾಗಲಿ ಅಥವಾ ಕುಮಾರಸ್ವಾಮಿ ಅವರಿಗಾಗಲೀ ಯಾವುದೇ ಅಧಿಕಾರ ಇಲ್ಲ. ಅಲ್ಲದೆ ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ ಡಿಸೆಂಬರ್ 31ರವರೆಗೆ ಮಾತ್ರ ಕಟ್ಟಡದಲ್ಲಿರಲು ಜನತಾದಳಕ್ಕೆ ಅವಕಾಶ ನೀಡಿದ್ದು, ಬಾಡಿಗೆಯನ್ನು ಕೆಪಿಸಿಸಿಗೆ ಪಾವತಿಸುವಂತೆ ಸೂಚಿಸಿದೆ. ಜನತಾದಳದವರು ಈ ವರೆಗೂ ತಾವಿದ್ದ ಅವಧಿಯ ಬಾಡಿಗೆಯನ್ನೂ ನೀಡಿಲ್ಲ. ಇದಾಗ್ಯೂ ಕಚೇರಿಯಲ್ಲಿ ನಿಯಮಬಾಹಿರವಾಗಿ ಚಿತ್ರೀಕರಣಕ್ಕೆ ಅನುಮತಿ ನೀಡಿದ್ದಾರೆ ಎಂದು ಖಾರವಾಗಿ ಹೇಳಿದೆ.
ಈ ಮಧ್ಯೆ ಕೆಪಿಸಿಸಿಯ ಕಾನೂನು ಘಟಕವು ಸುಪ್ರೀಂಕೋರ್ಟ್ ಗಡುವಿನ ನಂತರವೂ ಕಚೇರಿಯನ್ನು ತೆರವು ಮಾಡದೇ ಇರುವುದನ್ನು ಪ್ರಶ್ನಿಸಿ ಜೆಡಿಎಸ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿದೆ.
ಐರಾವತ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟಿಸುತ್ತಿದ್ದು, ಚಿತ್ರವನ್ನು ಅಂಬಾರಿ ಖ್ಯಾತಿಯ ಎಪಿ ಅರ್ಜುನ್ ನಿರ್ದೇಶಿಸುತ್ತಿದ್ದಾರೆ. ಚಿತ್ರಕ್ಕೆ ಜೆಡಿಎಸ್ ಎಂಎಲ್‌ಸಿ ಮತ್ತು ನಿರ್ಮಾಪಕ ಸಂದೇಶ್ ನಾಗರಾಜ್ ಅವರು ಬಂಡವಾಳ ಹೂಡಿದ್ದಾರೆ.
Advertisement