
ಬೆಂಗಳೂರು: ಮಂಗಳೂರು ವಿಮಾನ ನಿಲ್ದಾಣದಲ್ಲಿ ನಗರ ಅಪರಾಧ ವಿಭಾಗದ ಅಧಿಕಾರಿಗಳಿಂದ ಬಂಧಿತ ಶಂಕಿತ ಉಗ್ರ ರಿಯಾಜ್ ಅಹ್ಮದ್ ಸೈಯದಿಯನ್ನು ನಗರಕ್ಕೆ ಕರೆತಂದು ವಿಚಾರಣೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಎಂ.ಎನ್.ರೆಡ್ಡಿ ತಿಳಿಸಿದರು.
ರಿಯಾಜ್ ಅಹ್ಮದ್ ಹಾಗೂ ಈಗಾಗಲೇ ಬಂಧಿತ ಇಂಡಿನ್ ಮುಜಾಹಿದ್ದೀನ್(ಐಎಂ) ಸಂಘಟನೆಯ ಸೈಯದ್ ಇಸ್ಮಾಯಿಲ್ ಅಫಕ್, ಸದ್ದಾಂ ಹುಸೇನ್ ಹಾಗೂ ಅಬ್ದುಸ್ ಸಬೂರ್ ಜತೆ ನಂಟು ಹೊಂದಿದ್ದ.
ಆತ ಕೂಡ ಐಎಂ ಸದಸ್ಯನೇ ಆಗಿದ್ದು, ಬಂಧಿತ ಮೂವರೊಂದಿಗೆ ಉಗ್ರ ಚಟುವಟಿಕೆಗಳನ್ನು ನಡೆಸುತ್ತಿದ್ದ ಎನ್ನಲಾಗಿದೆ. ಆದರೆ, ಈತನ ಪಾತ್ರ ಏನಾಗಿತ್ತು ಎನ್ನುವುದನ್ನು ಖಚಿತವಾಗಿಲ್ಲ. ವಿಚಾರಣೆ ಬಳಿಕವೇ ಮಾಹಿತ ಲಭ್ಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಂಧಿತ ಮೂವರು ಉಗ್ರರು ವಿಚಾರಣೆ ವೇಳೆ ನೀಡಿದ ಮಾಹಿತಿ ಹಾಗೂ ಆಂತರಿಕ ಭದ್ರತಾ ವಿಭಾಗದ ಅಧಿಕಾರಿಗಳು ನೀಡಿದ ಮಾಹಿತಿಗಳ ಆಧಾರದ ಮೇಲೆ ಶಂಕಿತನ ಬಂಧನ ಸಾಧ್ಯವಾಗಿದೆ ಎಂದು ತಿಳಿದು ಬಂದಿದೆ.
ನಾಲ್ವರೂ ಫೋನ್ ಮೂಲಕ ನಿರಂತರವಾಗಿ ಸಂಪರ್ಕದಲ್ಲಿದ್ದರು. ಆದರೆ, ಮೂವರ ಬಂಧನದ ನಂತರ ರಿಯಾಜ್ ಆಹ್ಮದ್ ಬಗ್ಗೆ ಸುಳಿವಿರಲಿಲ್ಲ. ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಎನ್ನುವ ಬಗ್ಗೆ ಮಾಹಿತಿ ಇತ್ತು.
ಹೀಗಾಗಿ, ರಾಜ್ಯದಲ್ಲಿ ತಲೆಮರೆಸಿಕೊಂಡು ವಿದೇಶಕ್ಕೆ ಹೋಗುವ ಸಾಧ್ಯತೆಗಳ ಹಿನ್ನೆಲೆಯಲ್ಲಿ ಆಂತರಿಕ ಭದ್ರತಾ ಅಧಿಕಾರಿಗಳು ದೇಶದ ನಾನಾ ವಿಮಾನ ನಿಲ್ದಾಣಗಳ ಮೇಲೆ ನಿಗಾ ಇರಿಸಿದ್ದರು ಎಂದು ತಿಳಿದು ಬಂದಿದೆ.
ಮೂವರ ಬಂಧನದ ಬಳಿಕ ತಾನು ಸಿಕ್ಕಿ ಬಿದ್ದೇ ಬೀಳುತ್ತನೇ ಎಂಬ ಭಯದಿಂದ ತಾರತುರಿಯಲ್ಲಿ ವಿಮಾನದ ಟಿಕೇಟ್ ಬುಕ್ ಮಾಡಿಕೊಂಡು ರಿಯಾಜ್ ಅಹ್ಮದ್ ದುಬೈಗೆ ತೆರಳುತ್ತಿದ್ದನಾ ಅಥವ ಮೂವರು ಶಂಕಿತರ ಬಂಧನಕ್ಕೆ ಮೊದಲೇ ಟಿಕೆಟ್ ಬುಕ್ ಮಾಡಿದ್ದನಾ ಎನ್ನುವುದನ್ನು ಖಚಿತಪಡಿಸಲು ಅಧಿಕಾರಿಗಳು ಲಭ್ಯರಾಗಿಲ್ಲ.
ಆದರೆ, ದುಬೈನ ಹಾರ್ಡ್‌ವೇರ್ ರಿಟೇಲ್‌ನಲ್ಲಿ ಕೆಲಸ ಮಾಡುತ್ತಿದ್ದ ರಿಯಾಜ್ ಅಹ್ಮದ್, ಬಹಳ ದಿನಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿಕೊಂಡಿದ್ದ ಎಂದು ಕುಟುಂಬ ಸದಸ್ಯರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
Advertisement