ನಿತ್ಯಾ ಪ್ರಕರಣ: ನ್ಯಾಯಾಲಯದಲ್ಲಿ ಗೌಪ್ಯ ವಿಚಾರಣೆ

ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ದಾಖಲಿಸಿರುವ ಹೇಳಿಕೆಗಳ ಬಗ್ಗೆ ಪ್ರತಿವಾದ ಮಂಡನೆ...
ಬಿಡದಿ ಧ್ಯಾನಪೀಠ ನಿತ್ಯಾನಂದ
ಬಿಡದಿ ಧ್ಯಾನಪೀಠ ನಿತ್ಯಾನಂದ

ರಾಮನಗರ: ಅತ್ಯಾಚಾರ, ಲೈಂಗಿಕ ಕಿರುಕುಳ ಸೇರಿದಂತೆ ವಿವಿಧ ಆರೋಪಗಳಡಿ ಬಿಡದಿ ಧ್ಯಾನಪೀಠದ ನಿತ್ಯಾನಂದ ವಿರುದ್ಧ ದಾಖಲಾಗಿರುವ ಪ್ರಕರಣ ಸಂಬಂಧ ಇಲ್ಲಿನ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಲ್ಲಿ ಸೋಮಾವಾರ ಗೌಪ್ಯ ವಿಚಾರಣೆ ನಡೆಯಿತು.

ನಿತ್ಯಾನಂದ ಪರವಕೀಲರು ನ.26ರ ವಿಚಾರಣೆ ವೇಳೆ ವಾದ ಮಂಡಿಸಿದ್ದರು. ಸೋಮವಾರದ ವಿಚಾರಣೆ ವೇಳೆ ಪ್ರತಿವಾದ ಮಂಡಿಸಿದ ಸಿಐಡಿ ಪರ ವಕೀಲ ವಡವಡಗಿ ಕೋರಿಕೆ ಮೇರೆಗೆ ನ್ಯಾಯಾಧೀಶರಾದ ಮಂಜುಳಾ ಅವರು ಗೌಪ್ಯ ವಿಚಾರಣೆಗೆ ಅವಕಾಶ ಕಲ್ಪಿಸಿದರು.

ದೋಷಾರೋಪಣಾ ಪಟ್ಟಿಯಲ್ಲಿ ಅನೈಸರ್ಗಿಕ ಲೈಂಗಿಕ ಕ್ರಿಯೆಗೆ ಸಂಬಂಧಿಸಿದಂತೆ ದಾಖಲಿಸಿರುವ ಹೇಳಿಕೆಗಳ ಬಗ್ಗೆ ಪ್ರತಿವಾದ ಮಂಡನೆ ಮಾಡುವ ಉದ್ದೇಶದಿಂದ ಗೌಪ್ಯ ವಿಚಾರಣೆ ಅಗತ್ಯ ಎನ್ನುವುದು ಸಿಐಡಿ ಪರ ವಕೀಲ ವಡವಡಗಿ ಮನವಿಯಾಗಿತ್ತು.

ಸುಮಾರು 25 ನಿಮಿಷ ತೆರೆದ ಕೋರ್ಟ್‌ನಲ್ಲೇ ಪ್ರತಿವಾದ ಮಂಡನೆ ನಡೆಯಿತು. ಅದಾದ ಬಳಿಕ ಪ್ರಕರಣಕ್ಕೆ ಸಂಬಂಧಿಸಿದ ವಕೀಲರ ಹೊರತಾಗಿ ಇತರೆ ವಕೀಲರು, ಸಿಬ್ಬಂದಿಯನ್ನು ಹೊರಗೆ ಕಳುಹಿಸಿ ಇನ್ ಕ್ಯಾಮೆರಾ ವಿಚಾರಣೆಯು 20 ನಿಮಿಷ ಮುಂದುವರೆಯಿತು.

ಪ್ರತಿವಾದ ಆಲಿಸಿದ ನ್ಯಾಯಾಧೀಶರು ಆರೋಪಿಗಳ ಪರವಾದ ಮಂಡನೆಗೆ ಜ.27ಕ್ಕೆ ವಿಚಾರಣೆ ನಿಗದಿಪಡಿಸಿದ್ದಾರೆ. ನಂತರದ ವಿಚಾರಣೆ ಫೆ.11ಕ್ಕೆ ನಿಗದಿಯಾಗಿದ್ದು, ಆಗ ನಿತ್ಯಾನಂದ ಮತ್ತು 5 ಆರೋಪಿಗಳ ಹಾಜರಿ ಕಡ್ಡಾಯವಾಗಿದೆ.

ಕಾದು ನಿಂತ ನಿತ್ಯಾ: ಇತರೆ ಆರೋಪಿಗಳಾದ ಶಿವವಲ್ಲಭ ನೇನಿ, ಗೋಪಾಲರೆಡ್ಡಿ ಶೀಲಂ, ಜಮುನಾರಾಣಿ, ರಾಗಿಣಿ, ಧನಶೇಖರನ್ ಹಾಗೂ ಅನುಯಾಯಿಗಳೊಂದಿಗೆ ಪ್ರಮುಖ ಆರೋಪಿ ನಿತ್ಯಾನಂದ ಬೆಳಗ್ಗೆ 11ಕ್ಕೆ ನ್ಯಾಯಾಲಯ ಆವರಣಕ್ಕೆ ತನ್ನ ಐಶಾರಾಮಿ ಕಾರಿನಲ್ಲಿ ಬಂದಿಳಿದರು.

ಮಧ್ಯಾಹ್ನ 12ಕ್ಕೆ ಪ್ರಕರಣದ ವಿಚಾರಣೆ ಪ್ರಾರಂಭಗೊಂಡಿತು. ವಿಚಾರಣೆ ಮುಗಿಸಿ ತನ್ನ ಖಾಸಗಿ ಬೆಂಗಾವಲಿನಲ್ಲಿ ಕಾರು ಹತ್ತಿ ಧ್ಯಾನಪೀಠದ ಕಡೆ ಪಯಣ ಬೆಳೆಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com