ಬಿಬಿಎಂಪಿ ಮಳಿಗೆಗಳ ಅಕ್ರಮ ಮಾರಾಟ?

ಸುಮಾರು ರೂ.350 ಕೋಟಿ ಮೌಲ್ಯದ ಅಕ್ರಮ ಮಾರಾಟ ದಂಧೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಬಿಬಿಎಂಪಿಯ ಕೆಂಪೇಗೌಡ ಮಹಾರಾಜ ಮಾಲ್‌ನಲ್ಲಿ ಮಳಿಗೆಗಳ ಅಕ್ರಮ ಮಾರಾಟವಾಗಿದ್ದು, ಸುಮಾರು ರೂ.350 ಕೋಟಿ ಮೌಲ್ಯದ ಅಕ್ರಮ ಮಾರಾಟ ದಂಧೆ ನಡೆದಿದೆ ಎಂದು ಬಿಬಿಎಂಪಿ ಆಡಳಿತ ಪಕ್ಷ ನಾಯಕ ಎನ್.ಆರ್.ರಮೇಶ್ ಆರೋಪಿಸಿದ್ದಾರೆ.

ಈ ಅಕ್ರದಲ್ಲಿ ಕೆಇಆರ್‌ಸಿ ಅಧ್ಯಕ್ಷ ಎಂ.ಆರ್.ಶ್ರೀನಿವಾಸ್‌ಮೂರ್ತಿ, ಮಾಜಿ ಸಂಸದ ಕೆ.ಸಿ.ಕೊಂಡಯ್ಯ ಭಾಗಿಯಾಗಿದ್ದು, ಈ ಬಗ್ಗೆ ಬಿಎಂಟಿಎಫ್‌ಗೆ ದೂರು ಸಲ್ಲಿಸಲಾಗಿದೆ ಎಂದು ಅವರು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

ಈ ಅಕ್ರಮದಲ್ಲಿ ಜನಪ್ರತಿನಿಧಿಗಳ ಹೆಸರಿನಲ್ಲಿರುವ ದೊಡ್ಡ ರಾಜಕಾರಣಿಗಳೇ ಭಾಗಿಯಾಗಿರುವುದರಿಂದ ಇದನ್ನು ಜಾರಿ ನಿರ್ದೇಶನಾಲಯ ತನಿಖೆಗೆ ಒಪ್ಪಿಸಬೇಕು. ಹಾಗಯೇ ಬಿಬಿಎಂಪಿ ಆಯುಕ್ತರು ಪಾಲಿಕೆಯ ಆಸ್ತಿ ಉಳಿಸಿಕೊಳ್ಳಲು ಕಾನೂನು ಹೋರಾಟ ನಡೆಸಬೇಕು. ಇಲ್ಲದಿದ್ದರೆ ಪಾಲಿಕೆ ಆಯುಕ್ತರ ವಿರುದ್ಧವೇ ಹೋರಾಟ ನಡೆಸಲಾಗುವುದು ಎಂದು ಅವರು ಎಚ್ಚರಿಸಿದರು.

ಬಿವಿಕೆ ಅಯ್ಯಂಗಾರ್ ರಸ್ತೆಯಲ್ಲಿರುವ ಪಾಲಿಕೆಯ ಜಾಗದಲ್ಲಿ ಬಹುಮಹಡಿ ವಾಣಿಜ್ಯ ಮಳಿಗೆಗಳು ಮತ್ತು ವಾಹನ ನಿಲ್ದಾಣ ಸಂಕೀರ್ಣ ನಿರ್ಮಿಸಲು 1999ರಲ್ಲಿ ಅಂದಿನ ಆಯುಕ್ತರು ತೀರ್ಮಾನಿಸಿದ್ದರು. ಅವರು ಸಲ್ಲಿಸಿದ ಪ್ರಸ್ತಾಪಕ್ಕೆ ಅಂದಿನ ಕಾಂಗ್ರೆಸ್ ಸರ್ಕಾರ 2001ರಲ್ಲಿ ಅನುಮೋದನೆಯನ್ನೂ ನೀಡಿತ್ತು.

ಬಳಿಕ ಮಹಾರಾಜ ಬಿಲ್ಡ್ ಟೆಕ್ ಅಂಡ್ ಡೆವೆಲಪರ್ ಸಂಸ್ಥೆಯ ಸಹಭಾಗಿತ್ವದಲ್ಲಿ ಕಟ್ಟಡ ನಿರ್ಮಾಣ ಕರಾರು ಮಾಡಿಕೊಳ್ಳಲಾಯಿತು. ಅಂದರೆ ಸುಮಾರು 45,043 ಚ.ಅಡಿ ವಿಸ್ತೀರ್ಣದ ಈ ಜಾಗದಲ್ಲಿ ಮಹಾರಾಜ ಬಿಲ್ಡ್ ಟೆಕ್ ಸಂಸ್ಥೆ ಸಂಕೀರ್ಣ ನಿರ್ಮಿಸಿದರೆ, ಆ ಸಂಸ್ಥೆಗೆ ನಿರ್ಮಿತ ಪ್ರದೇಶದಲ್ಲಿ ಶೇ.17ರಷ್ಟು ಪಾಲು ನೀಡಲು ತೀರ್ಮಾನಿಸಲಾಗಿತ್ತು.

ಹೀಗಾಗಿ 83:17ರ ಅನುಪಾತದಲ್ಲಿ ಆಸ್ತಿ ಹಂಚಿಕೊಳ್ಳುವ ಕರಾರು ಪತ್ರದಲ್ಲಿ ಪಾಲಿಕೆ ಪರವಾಗಿ ಅಂದಿನ ಆಯುಕ್ತ ಅಶೋಕ್ ದಳವಾಯಿ ಸಹಿ ಮಾಡಿದ್ದರೆ, ಮಹಾರಾಜ ಬಿಲ್ಡ್ ಟೆಕ್ ಸಂಸ್ಥೆ ಪರವಾಗಿ ಮಾಜಿ ಸಂಸದ, ಕಾಂಗ್ರೆಸ್ ಮುಖಂಡ ಕೆ.ಸಿ.ಕೊಂಡಯ್ಯ ಹಾಗೂ ಭವರ್ ಲಾಲ್ ಎಂಬುವರು ಸಹಿ ಮಾಡಿದ್ದಾರೆ ಎಂದು ಎನ್.ಆರ್.ರಮೇಶ್ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com