
ಬೆಂಗಳೂರು: ವೇಶ್ಯಾವಾಟಿಕೆ ಅಡ್ಡೆಗಳಿಂದ ರಕ್ಷಿಸಿ ಮಹಿಳಾ ಮತ್ತು ಮಕ್ಕಳ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಲಾಗಿದ್ದ 10 ಮಹಿಳೆಯರು ವಾರ್ಡನ್ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ.
ಈ ಪೈಕಿ ಇಬ್ಬರನ್ನು ಪತ್ತೆಹಚ್ಚಿ ವಶಕ್ಕೆ ಪಡೆದಿರುವ ಪೊಲೀಸರು ಪುನಃ ಕೇಂದ್ರಕ್ಕೆ ಕಳುಹಿಸಿದ್ದಾರೆ.
ಕಳೆದ ಮೂರ್ನಾಲ್ಕು ತಿಂಗಳಿಂದ ನಗರದ ವಿವಿಧೆಡೆ ನಡೆಯುತ್ತಿದ್ದ ವೇಶ್ಯಾವಾಟಿಕೆ ಅಡ್ಡೆಗಳ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು ಮಹಿಳೆಯರ ರಕ್ಷಿಸಿ ಮನಃಪರಿವರ್ತನೆಗಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಳಾಖೆಯ ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಈ ಮಹಿಳೆಯರು ಪ್ಲಾನ್ ಮಾಡಿ ಶುಕ್ರವಾರ ರಾತ್ರಿ 10.30ರ ಸುಮಾರಿಗೆ ಕೇಂದ್ರದ ವಾರ್ಡನ್ ಶ್ರುತಿ ಅವರ ಮೇಲೆ ಹಲ್ಲೆ ನಡೆಸಿ, ಬಲವಂತವಾಗಿ ಕೀ ಕಸಿದು ಮುಖ್ಯದ್ವಾರದಿಂದಲೇ ಪರಾರಿಯಾಗಿದ್ದಾರೆ.
ಸಿಬ್ಬಂದಿ ಹಿಡಿಯಲು ಯತ್ನಿಸಿದರಾದರೂ ಸಾಧ್ಯವಾಗಲಿಲ್ಲ. ಕೊನೆಗೆ ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು.
ಸ್ಥಳಕ್ಕೆ ತೆರಳಿದ ವಿಲ್ಸನ್ ಗಾರ್ಡನ್ ಪೊಲೀಸರು ಮಡಿವಾಳದಲ್ಲಿ ಒಬ್ಬ ಮಹಿಳೆಯನ್ನು ಪತ್ತೆ ಹಚ್ಚಿದ್ದರೆ, ಮತ್ತೊಬ್ಬರು ಹುಳಿಮಾವು ಠಾಣೆಗೆ ತೆರಳಿ ಶರಣಾಗಿದ್ದಾಳೆ. ಪುನರ್ವಸತಿ ಕೇಂದ್ರ ವಾರ್ಡನ್ ವಿಲ್ಸನ್ ಗಾರ್ಡನ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಕೇಂದ್ರ ವಿಭಾಗ ಡಿಸಿಪಿ ಸಂದೀಪ್ ಪಾಟೀಲ್ ಪುನರ್ವಸತಿ ಕೇಂದ್ರಕ್ಕೆ ಭೇಟಿ ನೀಡಿ ಸಿಬ್ಬಂದಿಯಿಂದ ಘಟನೆ ಬಗ್ಗೆ ಮಾಹಿತಿ ಪಡೆದರು.
ಸಿಬ್ಬಂದಿ ಕಿರುಕುಳ?: ಪುನರ್ವಸತಿ ಕೇಂದ್ರದಲ್ಲಿ ಊಟ, ವಸತಿ ಸೇರಿದಂತೆ ಸರಿಯಾದ ಮೂಲ ಸೌಕರ್ಯಗಳಿಲ್ಲ. ಅಲ್ಲದೇ ಸಿಬ್ಬಂದಿ ಕಿರುಕುಳ ತಾಳಲಾರದೆ ವಾರ್ಡನ್ ಮೇಲೆ ಹಲ್ಲೆ ನಡೆಸಿ, ಪರಾರಿಯಾಗಿದ್ದಾಗಿ ಸಿಕ್ಕಿಬಿದ್ದ ಇಬ್ಬರು ಮಹಿಳೆಯರು ವಿಚಾರಣೆ ವೇಳೆ ಹೇಳಿಕೆ ಕೊಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಪರಾರಿಯಾಗಿರುವ ಮಹಿಳೆಯರು ಬಿಹಾರ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್ ಮೂಲದವರು. ನಗರದ ಎಲ್ಲ ಠಾಣೆಗಳಿಗೆ ಈಗಾಗಲೇ ಇವರ ಮಾಹಿತಿ ರವಾನಿಸಲಾಗಿದ್ದು, ಶೋಧಕಾರ್ಯ ಮುಂದುವರಿದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಅಲ್ಲಿಗೆ ವಾಪಸ್!: ಈ ಹಿಂದೆ ವೇಶ್ಯಾವಾಟಿಕೆ ಅಡ್ಡೆಯಿಂದ ಯುವತಿಯೊಬ್ಬಳನ್ನು ರಕ್ಷಿಸಿದ್ದ ಸಿಸಿಬಿ ಪೊಲೀಸರು ಪುನರ್ವಸತಿ ಕೇಂದ್ರಕ್ಕೆ ಬಿಟ್ಟಿದ್ದರು. ಅಲ್ಲಿಂದ ಬಿಡುಗಡೆಗೊಂಡ ಯುವತಿ ಕೋರಮಂಗಲದ ಮತ್ತೊಂದು ವೇಶ್ಯಾವಾಟಿಕೆ ಜಾಲದಲ್ಲಿ ಸಿಲುಕಿದ್ದಳು. ಆ ಅಡ್ಡೆ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಆಕೆಯನ್ನು ರಕ್ಷಿಸಿದ್ದರು.
Advertisement