ಹಾಲಿವುಡ್‌ಗೂ ಬಾಲಿವುಡ್‌ಗೆ ಹೋಲಿಕೆ ಬೇಡ
ಧಾರವಾಡ: ಕಲಾವಿದನಿಗೆ ಆತನ ಭಾವವೇ ಭಾಷೆ. ಹೀಗಾಗಿ ಯಾವುದೇ ಭಾಷೆಯಲ್ಲಿ ನಟಿಸಬಲ್ಲ. ಒಬ್ಬ ನಟ ತನ್ನ ಮಾತೃಭಾಷೆಯ ಸಂವೇದನಾಶೀಲತೆ ಅರಿತುಕೊಂಡರೆ ಬೇರೆ ಭಾಷೆಗಳಲ್ಲಿಯೂ ಲೀಲಾಜಾಲವಾಗಿ ನಟಿಸಬಲ್ಲ. ಭಾರತೀಯ ಚಿತ್ರಗಳನ್ನು ಹಾಲಿವುಡ್ ಮಟ್ಟಕ್ಕೆ ಏಕೆ ಹೋಲಿಸಬೇಕು? ಹಾಲಿವುಡ್‌ನವರೇ ಭಾರತಕ್ಕೆ ಬಂದು ಸಿನಿಮಾ ಮಾಡಲಿ. ಇಲ್ಲಿಯ ನಟರಿಗೆ ಆಸ್ಕರ್ ಬೇಕಾಗಿಲ್ಲ. ಪ್ರೇಕ್ಷಕರ ಮೆಚ್ಚುಗೆಯೇ ಆಸ್ಕರ್‌ಗಿಂತ ದೊಡ್ಡದು.
ಇಂಥದ್ದೊಂದು ಭಾವಾಭಿನಯದ ಸಂವಾದ ಮೂಡಿಬಂದಿದ್ದು ನಟ, ನಿರ್ದೇಶಕ, ಲೇಖಕ ಗಿರೀಶ್ ಕಾರ್ನಾಡ್ ಹಾಗೂ ನಟ, ನಿರ್ದೇಶಕ ಪ್ರಕಾಶ್ ರೈ ಮಧ್ಯೆ. ರಂಗಭೂಮಿ, ಸಿನಿಮಾ ಜಗತ್ತಿನ ದಿಗ್ಗಜರಿಬ್ಬರ ಸಮಾಗಮಕ್ಕೆ ಸಾಕ್ಷಿಯಾಗಿದ್ದು, ಧಾರವಾಡ ಸಾಹಿತ್ಯ ಸಂಭ್ರಮದ ಭಾಷೆ ಮತ್ತು ಅಭಿನಯಗೋಷ್ಠಿ.
ಗಿರೀಶ್ ಕಾರ್ನಾಡ್ ಹಾಗೂ ಪ್ರಕಾಶ್ ರೈ ವೇದಿಕೆ ಮೆಟ್ಟಿಲುಗಳನ್ನು ಏರುತ್ತಿದ್ದಂತೆಯೇ, ಧಾರವಾಡದವರಾದ ತಾವೇ ಈ ಗೋಷ್ಠಿ ನಿರ್ದೇಶಿಸುವುದಾಗಿ ಗಿರೀಶ್ ಕಾರ್ನಾಡ್ ಹೇಳಿಕೊಂಡರು. ಇಬ್ಬರೂ ಕಲಾವಿದರು ತಾವು ನಟನೆ ಆಯ್ತುಕೊಂಡಿದ್ದೇಕೆಂದು ತಿಳಿಸಿದರು. ಕಾಮರ್ಸ್ ಅಭ್ಯಾಸ ತಲೆಗೆ ಹತ್ತದೆ ನಾಟಕದೆಡೆಗೆ ವಾಲಿದ್ದಾಗಿ ಹೇಳಿದ ಪ್ರಕಾಶ್ ರೈ, ಅಭಿನಯದಿಂದ ಜೀವನ ಸಾಗಿಸಬಹುದೆಂಬ ಅರಿವು ಮೂಡಿತು. ಧಾರವಾಹಿಗಳಿಗೆ ಕಾಲಿಟ್ಟ ಬಳಿಕ ಒಂದೊಂದೇ ಹೆಜ್ಜೆ ಚಿತ್ರರಂಗದತ್ತ ಹಾಕಿ, ಸದ್ಯ ಹಲವಾರು ಭಾಷೆಗಳಲ್ಲಿ ನಟಿಸುತ್ತಿರುವೆ.
ಕಮರ್ಷಿಯಲ್ ಸಿನಿಮಾಗಳಿಂದಾಗಿ ಹಣ ಗಳಿಸಲು ಸಾಧ್ಯವಾಯಿತು. ಉತ್ತಮ ಮನೆ, ಒಳ್ಳೆಯ ಕಾರು ಖರೀದಿಸಿ ಚೆನ್ನಾಗಿ ಬದುಕಲು ಸಹಾಯವಾಯಿತು. ನಟನಾದವನು ಎಲ್ಲ ಪಾತ್ರಗಳನ್ನೂ ಮಾಡಬೇಕು. ಪ್ರತಿ ಬಾರಿಯೂ ದೊಡ್ಡ ಪಾತ್ರ ಸಿಗುತ್ತದೆ ಹಾಗೂ ಎಲ್ಲ ಪಾತ್ರಗಳೂ ಯಶಸ್ಸು ಕಾಣುತ್ತದೆ ಎಂಬ ನಿರೀಕ್ಷೆ ಸರಿಯಲ್ಲ. ನಟನಾದವನು ಓದು, ಸಾಹಿತ್ಯ. ಚಟುವಟಿಕೆಯಲ್ಲೂ ತೊಡಗಿಸಿಕೊಳ್ಳಬೇಕು ಎಂದರು.
ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿದ್ದಾಗ ನಾಟಕದಲ್ಲಿ ಪಾತ್ರ ಮಾಡುತ್ತಿದ್ದೆನಷ್ಟೇ. ಆಗ ನಟನಾಗುವ ಯಾವುದೇ ಕನಸು ಇದ್ದಿಲ್ಲ. ತಾವು ನಟನೆ ಆಯ್ದುಕೊಂಡಿದ್ದು ಹೊಟ್ಟೆಪಾಡಿಗಾಗಿ ಎಂಬುದನ್ನು ಕಾರ್ನಾಡ್ ಮುಲಾಜಿಲ್ಲದೆ ಹೇಳಿಕೊಂಡರು. ಸಿನಿಮಾ ಪೇಟಿಂಗ್ ಇದ್ದಂತೆ. ಅಲ್ಲಿ ನಿರ್ದೇಶಕನೇ ಪೇಂಟರ್. ನಟ ಕೇವಲ ಒಂದು ಬಣ್ಣವಷ್ಟೇ. ನಿರ್ದೇಶಕನ ಕನಸಿಗೆ ನ್ಯಾಯ ಒದಗಿಸುವುದೇ ನಟನ ಕರ್ತವ್ಯವೆಂಬ ಅಭಿಪ್ರಾಯ ಕಾರ್ನಾಡ್ ಹಾಗೂ ಪ್ರಕಾಶ್ ರೈ ಅವರಿಂದ ಬಂತು.
ಕನ್ನಡದಲ್ಲಿ ಸಂಭಾಷಣೆ ಸರಿಪಡಿಸಿಕೊಂಡು ಹೇಳಬಹುದು. ಬೇರೆ ಭಾಷೆಗಳ ಆಳವಾದ ಅರಿವಿಲ್ಲದಿದ್ದಾಗ ಸಂಭಾಷಣೆಕಾರ ಹಾಗೂ ನಿರ್ದೇಶಕ ಸೂಚಿಸಿದ್ದನ್ನಷ್ಟೇ ಒಪ್ಪಿಸಬೇಕಾಗುತ್ತದೆ. ತಮಗೆ ಹಿಂದಿಯ ಏಕ್ ಥಾ ಟೈಗರ್ ಚಿತ್ರದ ಅಭಿನಯ ತೃಪ್ತಿ ತಂದಿದೆ. ಆ ಚಿತ್ರದಿಂದ ಹಣ ಹಾಗೂ ಹೆಸರು ಲಭಿಸಿವೆ.
-ಗಿರೀಶ್ ಕಾರ್ನಾಡ್, ನಟ ನಿರ್ದೇಶಕ
ನಟನ ಭಾಷೆ ದೊಡ್ಡದು. ಅಭಿನಯದ ಲಯ ಗೊತ್ತಿರುವುದರಿಂದಲೇ ತಮಗೆ ಹಲವಾರು ಭಾಷೆಗಳ ಚಿತ್ರಗಳಲ್ಲಿ ನಟಿಸಲು ಸಾಧ್ಯವಾಯಿತೆಂದು ತಿಳಿಸಿದ ಪ್ರಕಾಶ್ ರೈ, ಪ್ರತಿ ಭಾಷೆಗೂ ವಿಶಿಷ್ಟ ಲಯವಿರುತ್ತದೆ. ಸಂಭಾಷಣೆಗಳ ಒಳಾರ್ಥಗಳನ್ನು ನಟ ಮೊದಲು ಅರಿಯಬೇಕು, ಅವುಗಳ ಅನುಭವ ಪಡೆದುಕೊಳ್ಳಬೇಕು. ಅಂದಾಗ ಮಾತ್ರ ಸಂಭಾಷಣೆಗಳನ್ನು ಸರಿಯಾಗಿ ಒಪ್ಪಿಸಲು ಸಾಧ್ಯ. ನಟ ಮೊದಲು ಉತ್ತಮ ಮನುಷ್ಯನಾಗಿರಬೇಕು. ಸೂಕ್ಷ್ಮ ಸಂವೇದನೆ ಬೆಳೆಸಿಕೊಳ್ಳಬೇಕು.
-ಪ್ರಕಾಶ್ ರೈ
ಬಹುಭಾಷೆ ನಟ, ನಿರ್ದೇಶಕ


