ಆರ್‌ಟಿಇ: ಗೋಳು ಆನ್‌ಲೈನ್, ಇಲಾಖೆ ಆಫ್‌ಲೈನ್

ಅನಧಿಕೃತ ಶಾಲೆಗಳಿಗೂ ಮಣೆ, ನೆರೆಹೊರೆ ಶಾಲೆಗಳ ಗೊಂದಲ ಹಾಗೂ ಆನ್‌ಲೈನ್ ಅರ್ಜಿಯ ಅವ್ಯವಸ್ಥೆ.... ಇದು ಶಿಕ್ಷಣ ಹಕ್ಕು ಕಾಯಿದೆ ಅರ್ಜಿ ಸಲ್ಲಿಕೆಯಲ್ಲಿನ ಗೋಳು...
ಆರ್‌ಟಿಇ: ಗೋಳು ಆನ್‌ಲೈನ್, ಇಲಾಖೆ ಆಫ್‌ಲೈನ್

ಬೆಂಗಳೂರು: ಅನಧಿಕೃತ ಶಾಲೆಗಳಿಗೂ ಮಣೆ, ನೆರೆಹೊರೆ ಶಾಲೆಗಳ ಗೊಂದಲ ಹಾಗೂ ಆನ್‌ಲೈನ್ ಅರ್ಜಿಯ ಅವ್ಯವಸ್ಥೆ.... ಇದು ಶಿಕ್ಷಣ ಹಕ್ಕು ಕಾಯಿದೆ ಅರ್ಜಿ ಸಲ್ಲಿಕೆಯಲ್ಲಿನ ಗೋಳು!

ಇದೇ ಮೊದಲ ಬಾರಿಗೆ ಶಿಕ್ಷಣ ಹಕ್ಕು ಕಾಯಿದೆಯ ಶೇ.25ರ ಮೀಸಲು ಸೀಟುಗಳಿಗೆ ಆನ್‌ಲೈನ್ ಮೂಲಕ ಅರ್ಜಿ ಸ್ವೀಕರಿಸಲಾಗುತ್ತಿದೆ. ಆದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಗೊಂದಲದಿಂದ ಪಾಲಕರು ಹಾಗೂ ವಿದ್ಯಾರ್ಥಿಗಳು ಅನಾನುಕೂಲಕ್ಕೆ ಒಳಗಾಗಿದ್ದಾರೆ.

ಶಿಕ್ಷಣ ಇಲಾಖೆ ಅಧಿಕಾರಿಗಳೂ ನೆಪ ಮಾತ್ರಕ್ಕೆ ಸ್ಪಷ್ಟೀಕರಣ ನೀಡಿ ಸುಮ್ಮನಾಗುತ್ತಿದ್ದಾರೆ. ಇದರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಉತ್ತಮ ತಂತ್ರಾಂಶ ರೂಪಿಸಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅದರ ಲಾಭ ಸಾರ್ವಜನಿಕರಿಗೆ ಸಿಗುತ್ತಿಲ್ಲ. ಮತ್ತೊಂದೆಡೆ ತಂತ್ರಾಂಶವನ್ನು ಸಾರ್ವಜನಿಕ ಉಪಯೋಗಕ್ಕೆ ಬಿಡುವ ಮೊದಲು ಪ್ರಾಯೋಗಿಕವಾಗಿ ಪರೀಕ್ಷೆ ನಡೆಸದಿರುವುದು ಸಮಸ್ಯೆಗೆ ಕಾರಣವಾಗಿದೆ. ಇವನ್ನೆಲ್ಲ ಹೇಳಿಕೊಳ್ಳಲು ಶಿಕ್ಷಣ ಇಳಾಖೆ ನೀಡಿದ ಸಹಾಯವಾಣಿಗಳೂ ಸಹಕರಿಸುತ್ತಿಲ್ಲ.

ಅನಧಿಕೃತ ಶಾಲೆಗಳ ಗೊಂದಲ: ಶಿಕ್ಷಣ ಇಲಾಖೆ ಹೊರಡಿಸಿರುವ ಅನಧಿಕೃತ ಶಾಲೆಗಳಪಟ್ಟಿಯಲ್ಲಿ ಬೆಂಗಳೂರು ಉತ್ತರ ಹಾಗೂ ದಕ್ಷಿಣ ಜಿಲ್ಲೆಗಳ 1307 ಶಾಲೆಗಳಿವೆ. ಉಳಿದ 32 ಶೈಕ್ಷಣಿಕ ಜಿಲ್ಲೆಗಳ ಅನಧಿಕೃತ ಶಾಲೆಗಳ ಪಟ್ಟಿಯನ್ನೇ ಇಲಾಖೆ ಇನ್ನೂ ತಯಾರಿಸಿಲ್ಲ. ಸಾರ್ವಜನಿಕ ಶಿಕ್ಷಣ ಇಲಾಖೆ ಉಳಿದ ಶಾಲೆಗಳ ಪಟ್ಟಿಯನ್ನು ಶೀಘ್ರದಲ್ಲಿಯೇ ವೈಬ್‌ಸೈಟ್‌ಗೆ ಹಾಕುತ್ತೇವೆ ಎಂದು ಕಳೆದ ಒಂದೂವರೆ ತಿಂಗಳಿಂದಲೂ ಹೇಳುತ್ತಿದ್ದಾರೆ. ಈಗ ಈ ಅನಧಿಕೃತ ಶಾಲೆಗಳು ಶಿಕ್ಷಣ ಇಲಾಖೆಯ ಆರ್‌ಟಿಇ ಅರ್ಜಿಯಲ್ಲಿ ಸೇರಿಕೊಂಡಿವೆ. ಇಲಾಖೆ ಪ್ರಕಟಿಸಿರುವ 1307 ಶಾಲೆಗಳಲ್ಲಿ ಕೆಲವು ಶಾಲೆಗಳ ಹೆಸರು ಆನ್‌ಲೈನ್ ಅರ್ಜಿಯಲ್ಲಿ ಸಿಗುತ್ತಿವೆ.

ಒಂದೆಡೆ ಅನಧಿಕೃತ ಶಾಲೆಗಳೆಂದು ಇಲಾಖೆಯೇ ಘೋಷಿಸಿದರೆ, ಮತ್ತೊಂದೆಡೆ ಪ್ರವೇಶಕ್ಕೆ ಇಲಾಖೆ ಅಧಿಕಾರಿಗಳೇ ಹಸಿರು ನಿಶಾನೆ ತೋರುತ್ತಿದ್ದಾರೆ. ಆರ್ಕಿಡ್ಸ್ ಅಂತಾರಾಷ್ಟ್ರೀಯ ಶಾಲೆಯ ಉದಾಹರಣೆ ಎಲ್ಲರೆದುರು ಇರುವಾಗ ಪಾಲಕರ ಗೊಂದಲ ದ್ವಿಗುಣ ಗೊಂಡಿದೆ.

ಒಂದೊಮ್ಮೆ ಈ ಶಾಲೆಗಳಲ್ಲಿ ಪ್ರವೇಶ ಪಡೆಯಬಹುದು ಎಂದಾದರೆ ಅನಧಿಕೃತ ಶಾಲೆ ಎಂದು ಪಟ್ಟಿ ಹೊರಡಿಸುವ ಅಗತ್ಯವೇನಿತ್ತು? ಪಾಲಕರನ್ನು ಕತ್ತಲಿನಲ್ಲಿಟ್ಟು ಆರ್‌ಟಿಇ ಮೀಸಲು ಸೀಟುಗಳಿಗೆ ಅರ್ಜಿ ಆಹ್ವಾನಿಸಲಾಗುತ್ತಿದೆ.

ಬಗೆಹರಿಯದ ನೆರೆಹೊರೆ ಸಮಸ್ಯೆ: ಈ ಶೈಕ್ಷಣಿಕ ವರ್ಷದಿಂದ ನೆರೆಹೊರೆ ಶಾಲೆಗಳಿಗೆ ಸಂಬಂಧಿಸಿ ಕಠಿಣ ನಿಯಮ ರೂಪಿಸಲಾಗಿದೆ. ಯಾವುದೇ ವಿದ್ಯಾರ್ಥಿಯು 5ಕ್ಕಿಂತ ಹೆಚ್ಚು ಶಾಲೆಗಳಿಗೆ ಅರ್ಜಿ ಸಲ್ಲಿಸುವಂತಿಲ್ಲ. ಆದರೆ ಕೆಲವು ಪ್ರದೇಶಗಳಲ್ಲಿ ನೆರೆಹೊರೆ ಶಾಲೆಗಳ ನಿಯಮದಂತೆ ಒಂದೂ ಶಾಲೆಯೂ ಇಲ್ಲ.

ಕೆಲವೆಡೆ ಐದಕ್ಕಿಂತ ಕಡಿಮೆಯಿವೆ. ಒಂದೂ ಶಾಲೆಯಿರದ ಕಡೆ ಪಕ್ಕದ ಹಳ್ಳಿ ಅಥವಾ ವಾರ್ಡ್‌ನಲ್ಲಿ ನೆರೆಹೊರೆ ಶಾಲೆಗಳ ಪಟ್ಟಿ ಗಮನಿಸಿ ಅರ್ಜಿ ಸಲ್ಲಿಸಬಹುದು ಎಂದು ಶಿಕ್ಷಣ ಇಲಾಖೆ ಹೇಳಿದೆ. ಈ ಸಂಬಂಧ ಆನ್‌ಲೈನ್‌ನಲ್ಲಿ ಅವಕಾಶವನ್ನೂ ಮಾಡಿ ಕೊಟ್ಟಿದೆ. ಆದರೆ ಆ ಲಿಂಕ್‌ನಲ್ಲಿ ಪಕ್ಕದ ವಾರ್ಡ್‌ಗಳ ಶಾಲೆಯ ಪಟ್ಟಿ ಸಿಗುತ್ತಿಲ್ಲ. ಶಿಕ್ಷಣ ಇಲಾಖೆಯ ಸುತ್ತೋಲೆ ಹೊರ ಬಿದ್ದಿದ್ದರೂ ಅದು ಕಡತಕ್ಕೆ ಸೀಮಿತವಾಗಿದೆ. ಕೇವಲ ಆಫ್‌ಲೈನ್ ಅರ್ಜಿಗಳಲ್ಲಿ ಮಾತ್ರ ಈ ಅವಕಾಶ ಸಿಗುತ್ತಿದೆ.

ಈ ಗೊಂದಲದ ಮಧ್ಯೆ ಕೆಲವು ಶಾಲೆಗಳು ಆನ್‌ಲೈನ್ ಅರ್ಜಿ ಸ್ವೀಕರಿಸುತ್ತಿಲ್ಲ ಹಾಗೂ ಮತ್ತೆ ಕೆಲವು ಆಫ್‌ಲೈನ್ ಅರ್ಜಿ ಸ್ವೀಕರಿಸುತ್ತಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈ ಸಂಬಂಧ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಶಿಕ್ಷಣ ಹಕ್ಕು ಕಾರ್ಯಪಡೆಯ ನಾಗಸಿಂಹ ರಾವ್ ತಿಳಿಸಿದ್ದಾರೆ.

ಇನ್ನು ವಿದ್ಯಾರ್ಥಿಗಳು ಶಾಲೆಗಳ ಆಯ್ಕೆ ಮಾಡಿದ ಬಳಿಕ ಲಾಟರಿ ವ್ಯವಸ್ಥೆ ಮೂಲಕ ಸೀಟು ಹಂಚಲಾಗುವುದು ಎಂದು ಇಲಾಖೆ ತಿಳಿಸಿದೆ. ಇದೂ ಆನ್‌ಲೈನ್‌ನಲ್ಲಿಯೇ ನಡೆಯುತ್ತದೆ, ಆದರೆ ಅದರ ಪ್ರಕ್ರಿಯೆ ವಿವರವನ್ನು ಇಲಾಖೆ ಸ್ಪಷ್ಟಪಡಿಸಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com