ಲಂಚಕ್ಕೆ ಕೈ ಚಾಚಿದ ಪೊಲೀಸರ ಬಂಧನ

ಲಂಚ ಕೇಳಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಪೊಲೀಸರ ಕಥೆ ಇದು...
ಲಂಚಕ್ಕೆ ಕೈ ಚಾಚಿದ ಪೊಲೀಸರ ಬಂಧನ

ಬೆಂಗಳೂರು: ಲಂಚ ಕೇಳಿ ಲೋಕಾಯುಕ್ತ ಪೊಲೀಸರ ಕೈಗೆ ಸಿಕ್ಕಿ ಬಿದ್ದ ಪೊಲೀಸರ ಕಥೆ ಇದು!

ಮೈಕೋ ಲೇಔಟ್‌ನ ಇಬ್ಬರು ಪೊಲೀಸ್ ಪೇದೆಗಳು ಲಂಚ ಪಡೆಯುವಾಗಲೇ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಬಿಟಿಎಂ ಲೇಔಟ್‌ನ ಗೋಕುಲ್ ಹೋಟೆಲ್ ಬಳಿ ರು.50 ಸಾವಿರ ಲಂಚ ಪಡೆಯುವಾಗ ದಾಳಿ ನಡೆಸಿದ ಲೋಕಾ ಪೊಲೀಸರು ಮುಖ್ಯಪೇದೆ ಶಿವಮಾದು ಮತ್ತು ಪೇದೆ ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ.

ಜತೆಗೆ ಠಾಣೆಯ ಇನ್ಸ್‌ಪೆಕ್ಟರ್ ಮಂಜುನಾಥ್ ಸರ್ವಿಸ್ ರಿವಾಲ್ವರ್ ಸಮೇತ ತಲೆಮರೆಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಈ ಬಗ್ಗೆ ಇನ್ನೂ ಖಚಿತವಾಗಿಲ್ಲ.

ಆಗಿದ್ದಿಷ್ಟು-ಮೈಕೋ ಲೇ ಔಟ್‌ನ ಬ್ಯೂಟಿಪಾರ್ಲರ್‌ವೊಂದರ ಮೇಲೆ ಏಖಾಏಕಿ ದಾಳಿ ನಡೆಸಿದ್ದ ಸ್ಥಳೀಯ ಪೊಲೀಸರು, ಅಲ್ಲಿನ ಸಿಸಿಟಿವಿ ಕ್ಯಾಮೆರಾ ಒಡೆದುಹಾಕಿದ್ದರು. ಇದಷ್ಟೇ ಅಲ್ಲ, ಸುಳ್ಳೇ ಸುಳ್ಳು ದೂರು ದಾಖಲಿಸಿ, ರು.2 ಲಕ್ಷ ಲಂಚ ಕೊಡುವಂತೆಯೂ ಬೆದರಿಕೆ ಹಾಕಿದ್ದರು. ಈ ಬ್ಯೂಟಿಪಾರ್ಲರ್‌ನ ಮಾಲೀಕ ಅನಂತ್‌ಕುಮಾರ್‌ಗೆ ಲಂಚ ಕೊಡಲು ಇಷ್ಟವಿರಲಿಲ್ಲ. ಹೀಗಾಗಿ ಲೋಕಾಯುಕ್ತರ ಮೊರೆ ಹೋಗಿದ್ದರು.

ಮೊದಲೇ ಮಾಹಿತಿ ಇಟ್ಟುಕೊಂಡಿದ್ದ ಲೋಕಾಯುಕ್ತ ಪೊಲೀಸರು ಲಂಚ ಪಡೆಯುವಾಗಲೇ ಇಬ್ಬರನ್ನೂ ಬಂಧಿಸಿದ್ದಾರೆ. ಲಂಚಕ್ಕೆ ಕುಮ್ಮಕ್ಕು ನೀಡಿದ ಆರೋಪದ ಮೇಲೆ ಇನ್ಸ್‌ಪೆಕ್ಟರ್ ಮಂಜುನಾಥ್ ಮೇಲೂ ಎಫ್‌ಐಆರ್ ದಾಖಲಿಸಿದ್ದಾರೆ. ಆದರೆ ಇವರನ್ನು ಇನ್ನೂ ಬಂಧಿಸಿಲ್ಲ. ವಿಚಾರಣೆ ಬಳಿಕ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಲೋಕಾಯುಕ್ತ ಪೊಲೀಸರು ಹೇಳಿದ್ದಾರೆ.

ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲೋಕಾಯುಕ್ತ ಪೊಲೀಸ್ ವರಿಷ್ಠಾಧಿಕಾರಿ ಸೋನಿಯಾ ನಾರಂಗ್ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com