ಜಾರಕಿಹೊಳಿ ಸಂಧಾನ ಇಂದು

ಸತೀಶ್ ಜಾರಕಿಹೊಳಿ ರಾಜಿನಾಮೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತುಸು ಮೆತ್ತಗಾಗುವ ಲಕ್ಷಣ ವಿದ್ದು, ಶುಕ್ರವಾರ ...
ಸತೀಶ್ ಜಾರಕಿಹೊಳಿ
ಸತೀಶ್ ಜಾರಕಿಹೊಳಿ
Updated on

ಬೆಂಗಳೂರು : ಸತೀಶ್ ಜಾರಕಿಹೊಳಿ ರಾಜಿನಾಮೆ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ತುಸು ಮೆತ್ತಗಾಗುವ ಲಕ್ಷಣ ವಿದ್ದು, ಶುಕ್ರವಾರ ಸಂಧಾನ ಸಭೆ ನಡೆಯುವ ಸಾಧ್ಯತೆ ಇದೆ. ಏತನ್ಮಧ್ಯೆ, ಜಾರಕಿಹೊಳಿ ಪರ ಬೆಳಗಾವಿ ಮುಖಂಡರ ನಿಯೋಗ ಗುರುವಾರ ತಡರಾತ್ರಿ ಮುಖ್ಯಮಂತ್ರಿ ಅವರ ಜತೆ ಮಾತುಕತೆ ನಡೆಸಿದೆ.
ಜಾರಕಿಹೊಳಿ ರಾಜಿನಾಮೆ ವಿಚಾರ ಸಚಿವ ಸಂಪುಟ ಸಭೆಯಲ್ಲೂ ಪ್ರಸ್ತಾಪವಾಗಿದೆ. ಸಂಪುಟದ ಎಲ್ಲ ಸದಸ್ಯರೂ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಿದ್ದರಾಮಯ್ಯಅವರಿಗೆ ಸಲಹೆ ನೀಡಿದ್ದಾರೆ. ಆದರೆ ವೈಯಕ್ತಿಕವಾಗಿ ಅಂತರ ಕಾಯ್ದುಕೊಳ್ಳುವ ನಿಲುವಿಗೆ ಸಚಿವರು ಜಾರಿದ್ದು, `ಅವರಿಬ್ರೇ ಬಗೆ ಹರಿಸಿಕೊಳ್ಳುತ್ತಾರೆ ಬಿಡಿ' ಎಂಬ ಧೋರಣೆ ಪ್ರದರ್ಶಿಸುತ್ತಿದ್ದಾರೆ. ಈ ಮಧ್ಯೆ ಬೆಳಗಾವಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ  ಹೆಬ್ಬಾಳ್ಕರ್, ಶಾಸಕ ಫಿರೋಜ್ ಶೇಠ್ ನೇತೃತ್ವದಲ್ಲಿ ಜಾರಕಿಹೊಳಿ ಬೆಂಬಲಿಗರು ಪೂರ್ವಭಾವಿ ಸಂಧಾನಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದು, ಸಿಎಂ ಸಿದ್ದರಾಮಯ್ಯಅವರ ಜತೆ ಚರ್ಚೆ ನಡೆಸಲು ಸಮಯ ಕೋರಿದ್ದರು. ಆದರೆ ತುಮಕೂರು ಪ್ರವಾಸ ಮತ್ತು ಸಚಿವ ಸಂಪುಟ ಸಭೆಯ ಹಿನ್ನೆಲೆಯಲ್ಲಿ ರಾತ್ರಿ 9 ಗಂಟೆಯವರೆಗೂ ಈ ನಿಯೋಗದ ಜತೆ ಚರ್ಚೆ ನಡೆಸುವುದಕ್ಕೆ ಸಿದ್ದರಾಮಯ್ಯಅವರಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಬೆಂಬಲಿಗರು ಲೋಕೋಪಯೋ ಗಿ ಸಚಿವ ಮಹಾದೇವಪ್ಪ ಅವರ ಮನೆಯಲ್ಲಿ ಕಾಯುವ ಸ್ಥಿತಿ ನಿರ್ಮಾಣವಾಗಿತ್ತು.

ಕರೆ ಮಾಡಿದರೆ ಸಿಎಂ? : ಈ ಮಧ್ಯೆ ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ನೇರವಾಗಿ ಸಿದ್ದರಾಮಯ್ಯ ಅವರ ಬಳಿ ಈ ವಿಚಾರ ಪ್ರಸ್ತಾಪಿಸಿ ದರು. ಜಾರಕಿಹೊಳಿ ಪ್ರಬಲ ಸಮುದಾಯದ ಮುಖಂಡರಾಗಿರುವುದರಿಂದ ಪಕ್ಷದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಮೇಲಾಗಿ ಪ್ರತಿಪಕ್ಷಗಳಿಗೆ ಇನ್ನೊಂದು ಅಸ್ತ್ರ  ನೀಡಿದಂತಾಗುತ್ತದೆ ಎಂದು ಕಿವಿ ಮಾತು ಹೇಳಿದರು. ಇದನ್ನು ಒಪ್ಪಿದ ಸಿದ್ದರಾಮಯ್ಯ, ಜಾರಕಿಹೊಳಿ ತುಸು ಭಾವನಾತ್ಮಕ ವ್ಯಕ್ತಿ. ನಾನು ಅವರ ಜತೆ ಚರ್ಚೆ ನಡೆಸುತ್ತೇನೆ ಎಂದು ಸಚಿವರಿಗೆ ಭರವಸೆ ನೀಡಿದರು ಎಂದು ತಿಳಿದು ಬಂದಿದೆ.

ಸಿಎಂ ಸಿದ್ದರಾಮಯ್ಯ ಆಪ್ತ ವರ್ಗದ ಪ್ರಕಾರ ಘಟನೆ ನಡೆದ ನಂತರ ಸಿಎಂ ಎರಡು ಬಾರಿ ಜಾರಕಿಹೊಳಿ ಜತೆ ದೂರವಾಣಿ ಮೂಲಕ ಚರ್ಚಿಸಿರುವುದು ಮಾತ್ರವಲ್ಲ,ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ.

ದೂರ: ಜಾರಕಿಹೊಳಿ ತಮ್ಮ ನಿಲುವಿನಿಂದ ಹಿಂದೆ ಸರಿಯುತ್ತಾರೆ ಎಂಬ ದೃಢ ನಿಲುವಿಗೆ ಸಿಎಂ ಬಣ ಬಂದಿದೆ. ಇನ್ನೆರಡು ದಿನದಲ್ಲಿ ಎಲ್ಲವೂ ಸರಿ ಹೋಗುತ್ತದೆ.ಶುಕ್ರವಾರ, ಸಿದ್ದರಾಮಯ್ಯ ಅವರನ್ನು ಭೇಟಿ ಮಾಡುವುದಕ್ಕೆ ಜಾರಕಿಹೊಳಿ ಬಂದೇ ಬರುತ್ತಾರೆ ಎಂಬ ವಿಶ್ವಾಸ ವ್ಯಕ್ತವಾಗಿದೆ. ಆದರೆ ಬೆಳಗಾವಿ ಕಾಂಗ್ರೆಸ್ ಮೂಲಗಳ ಪ್ರಕಾರ ಜಾರಕಿಹೊಳಿ ತಮ್ಮ ನಿಲುವಿನಿಂದ ಹಿಂದೆ ಸರಿಯುವ ಸಾಧ್ಯತೆ ಇಲ್ಲ. ಖಾತೆ ಬದಲಾವಣೆಗಾಗಿ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸಿದೆ ಎಂಬ ಅಪಖ್ಯಾತಿಗೆ ಗುರಿಯಾಗಬೇಕಾಗುತ್ತದೆ ಎಂಬ ಕಾರಣಕ್ಕೆ ರಾಜಿನಾಮೆ ವಾಪಾಸ್ ಪಡೆಯಲಾರರು. ಅಷ್ಟಕ್ಕೂ ಗುರುವಾರ ರಾತ್ರಿ ಸಿದ್ದರಾಮಯ್ಯ ನೀಡುವ ಭರವಸೆ ಅವರ ಮುಂದಿನ ನಡೆಯನ್ನು ನಿರ್ಧರಿಸಲಿದೆ ಎಂದು ತಿಳಿದು ಬಂದಿದೆ. ಸಮನ್ವಯ ಸಭೆಯಲ್ಲಿ ಪ್ರಸ್ತಾಪ: ಈ ಮಧ್ಯೆ ಜಾರಕಿಹೊಳಿ ಪ್ರಕರಣ ಶುಕ್ರವಾರದಿಂದ ಆರಂಭವಾಗುವ ರಾಜ್ಯ ಕಾಂಗ್ರೆಸ್ ಸಮನ್ವಯ ಸಭೆಯಲ್ಲಿ ಪ್ರಸ್ತಾಪವಾಗುವ ಸಾಧ್ಯತೆ ಇದೆ. ಅರ್ಕಾವತಿ ಮತ್ತು ಜಾರಕಿಹೊಳಿ ಪ್ರಕರಣದ ಬಗ್ಗೆ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಸಮ್ಮುಖದಲ್ಲಿ ಪ್ರಕರಣದ ಬಗ್ಗೆಎಐಸಿಸಿ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್  ಸಿಂಗ್ ವಿವರಣೆ ಪಡೆಯಲಿದ್ದಾರೆ ಎಂದು ತಿಳಿದು ಬಂದಿದೆ.



ಸಂಪುಟ ಪುನಾರಚನೆ ಪ್ರಸ್ತಾಪಕ್ಕೆ ಮತ್ತೆ ಧ್ವನಿ
ಜಾರಕಿಹೊಳಿ ರಾಜಿನಾಮೆ ಪ್ರಕರಣ ರಾಜ್ಯ ಸಚಿವ ಸಂಪುಟ ಪುನಾರಚನೆ ಪ್ರಸ್ತಾಪಕ್ಕೆ ಮತ್ತೆ ಚಾಲನೆ ನೀಡಿದೆ. ಒಂದೊಮ್ಮೆ ಜಾರಕಿಹೊಳಿ ಬೇಡಿಕೆಗೆ ಸಿಎಂ ಸಿದ್ದರಾಮಯ್ಯ ಒಪ್ಪಿದರೂ ಅದು ಅನುಷ್ಠಾನಕ್ಕೆ ಬರುವುದು ಬಜೆಟ್ ಅಧಿವೇಶನದ ನಂತರವೇ. ಅಲ್ಲಿ ಯವರೆಗೆ ಅವರು ಕಾಯುವುದು ಅನಿವಾರ್ಯವಾಗುತ್ತದೆ. ಆ ಬಳಿಕ ಸಿದ್ದರಾಮಯ್ಯ ಇಡಿ ಸಂಪುಟವನ್ನು ಪುನಾರಚಿಸಿ ಕೆಲಅಸಮರ್ಥರನ್ನು ಕೈ ಬಿಟ್ಟು, ಇನ್ನು ಕೆಲವರಿಗೆ ಆಯ್ಕೆಯ ಖಾತೆ ನೀಡುವ ಸಾಧ್ಯತೆ ಇದೆ.



ಇದರ ಬಗ್ಗೆ ನಾನು ಏನೂ ಹೇಳೊಲ್ಲ. ನನಗೆ ಏನೂ ಗೊತ್ತಿಲ್ಲ. ಅವರಿಬ್ಬರೂ ತುಂಬಾ ಕಿತ್  & ಕಿನ್ . ಅವರೇ ಸರಿ ಮಾಡಿಕೊಳ್ಳುತ್ತಾರೆ. ಉಳಿದ ಸಚಿವರು ರಾಜಿನಾಮೆ ಕೊಡಲ್ಲ. ಮಂತ್ರಿಯಾಗಿ ರಾಜಿನಾಮೆ ಕೊಡೋಕೆ ಅವರಿಗೇನು ಹುಚ್ಚಾ ? ನನ್ನ ವಿಚಾರ ದಿನಾ ಓಡಾಡ್ತಾ ಇರ್ತದೆ.
-ಅಂಬರೀಷ್, ವಸತಿ ಸಚಿವ


ಜಾರಕಿಹೊಳಿ ನಮ್ಮ ಕುಟುಂಬದ ಸದಸ್ಯರಿದ್ದಂತೆ. ಅವರು ಸಚಿವ ಸ್ಥಾನದಲ್ಲಿ ಮುಂದುವರಿಯುತ್ತಾರೆ.
 -ಎಚ್.ಸಿ.ಮಹದೇವಪ್ಪ, ಲೋಕೋಪಯೋಗಿ ಸಚಿವ

ಎಲ್ಲ ಸುಳ್ಳಪ್ಪ. ಬೇರೆ ಸಚಿವರು ರಾಜಿನಾಮೆ ನೀಡುವುದಿಲ್ಲ.ಅದೆಲ್ಲ ನಿಮ್ಮ ಊಹೆ. ಎಲ್ಲ ಸುಳ್ಳಪ್ಪ, ಎಲ್ಲ ಸುಳ್ಳು.
- ಶಾಮನೂರು ಶಿವಶಂಕರಪ್ಪ, ತೋಟಗಾರಿಕಾ ಸಚಿವರು

ಜಾರಕಿಹೊಳಿ ಪಕ್ಷದ ಹಿರಿಯ ನಾಯಕರು. ರಾಜಿನಾಮೆ ಯನ್ನು ಸಿಎಂ ಅಂಗೀಕರಿಸಿಲ್ಲ. ಸಿಎಂ- ಸಚಿವರಿಗೆ
ಆ ವಿಚಾರ ಬಿಡೋಣ. ನಾವ್ಯಾಕೆ ವಿಚಾರಮಾಡ್ಬೇಕು.
- ಆರ್.ವಿ.ದೇಶಪಾಂಡೆ, ಉನ್ನತ ಶಿಕ್ಷಣ ಸಚಿವರು.

ಜಾರಕಿಹೊಳಿ ಆತ್ಮೀಯ ಸ್ನೇಹಿತರು. ಖಾತೆ ಬದಲಾವಣೆಗೆಪ್ರಸ್ತಾಪಿಸಿದ್ದು ನಿಜ. ಎಲ್ಲವೂ ಸರಿ ಹೋಗುತ್ತದೆ.
-ಎಚ್.ಎಸ್.ಮಹಾದೇವಪ್ರಸಾದ್, ಸಹಕಾರ ಸಚಿವರು

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com