ನಕಲಿ ಮತದಾರರ ಸೃಷ್ಟಿ, ಬಿಜೆಪಿ ಪ್ರತಿಭಟನೆ

ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಕಲಿ ಮತದಾರರನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು...
ನಕಲಿ ಮತದಾರರ ಸೃಷ್ಟಿ, ಬಿಜೆಪಿ ಪ್ರತಿಭಟನೆ (ಸಾಂದರ್ಭಿಕ ಚಿತ್ರ)
ನಕಲಿ ಮತದಾರರ ಸೃಷ್ಟಿ, ಬಿಜೆಪಿ ಪ್ರತಿಭಟನೆ (ಸಾಂದರ್ಭಿಕ ಚಿತ್ರ)

ಕೆ.ಆರ್.ಪುರ:  ಬಿಬಿಎಂಪಿ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಕಲಿ ಮತದಾರರನ್ನು ಸೃಷ್ಟಿಸಲಾಗುತ್ತಿದೆ ಎಂದು ಆರೋಪಿಸಿ ಮಾಜಿ ಶಾಸಕ ನಂದೀಶ್ ರೆಡ್ಡಿ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಬಿಬಿಎಂಪಿ ಮುಂದೆ ಬುಧವಾರ ಪ್ರತಿಭಟಿಸಿದ ಪಕ್ಷದ ಕಾರ್ಯಕರ್ತರು, ಕಚೇರಿಗೆ ಬೀಗ ಹಾಕಿದರು. ನಂತರ ನಂದೀಶ್ ರೆಡ್ಡಿ ಮಾತನಾಡಿ, ಕೇವಲ 8 ದಿನಗಳಲ್ಲಿ 30 ಸಾವಿರ ಮತದಾರರನ್ನು ಸೇರ್ಪಡೆಗೊಳಿಸಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಯಾವುದೇ ದಾಖಲೆಗಳಿಲ್ಲದೆ, ಕೇವಲ ಭಾವಚಿತ್ರ ಪಡೆದು ಮತದಾರರ ಪಟ್ಟಿಗೆ ನಕಲಿ ಹೆಸರು ಸೇರ್ಪಡೆ ಮಾಡಲಾಗಿದೆ. ಯಾವುದೇ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸುವ ಗೋಜಿಗೆ ಹೋಗಿಲ್ಲ. ಏಪ್ರಿಲ್ ಬಳಿಕ ಸೇರ್ಪಡೆ ಯಾವ ಮತದಾರರ ದಾಖಲೆಗಳನ್ನು ಪರಿಶೀಲಿಸಿ, ನಕಲಿ ಮತದಾರರನ್ನು ಪಟ್ಟಿಯಿಂದ ಕೈ ಬಿಡಬೇಕು. ನಕಲಿ ಹೆಸರು ಸೇರಿಸಲು ಕಾರಣರಾದ ಪ್ರಭಾವಿಗಳ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈ ಗೊಳ್ಳಬೇಕು ಎಂದು ಆಗ್ರಹಿಸಿದರು.

ಭೈರತಿ ವಿರುದ್ಧ ಆರೋಪ: ಪಾಲಿಕೆ ಮಾಜಿ ಸದಸ್ಯ ಕಲ್ಕೆರೆ ಶ್ರೀನಿವಾಸ್ ಮಾತನಾಡಿ, ಸ್ಥಳೀಯರಾದ ಶಾಸಕ ಭೈರತಿ ಬಸವರಾಜು ನಕಲಿ ಮತದಾರರನ್ನು ಸೃಷ್ಟಿಸಲು ಕಾರಣರಾಗಿದ್ದು,ಅಕ್ರಕ್ಕೆ ಮೂಲ  ಕಾರಣರಾಗಿದ್ದಾರೆ. ತಮ್ಮ ಪಕ್ಷದ ಅಭ್ಯರ್ಥಿಗಳು ಸೋಲುವ ಭೀತಿಯಿಂದ ಹೊರ ಜಿಲ್ಲೆಗಳ ಮತ್ತು ರಾಜ್ಯಗಳ ಜನರನ್ನು ಮತದಾರರ ಪಟ್ಟಿಗೆ ಸೇರಿಸಲಾಗುತ್ತಿದೆ. ಚುನಾವಣೆಯಲ್ಲಿ ಗೆಲ್ಲಲೇಬೇಕು ಎಂಬ ಉದ್ದೇಶದಿಂದ ಇಂತಹ ಕುತಂತ್ರ ರೂಪಿಸಲಾಗಿದೆ ಎಂದು ದೂರಿದರು.

ಪ್ರತಿಭಟನೆ ವೇಳೆ ಕಾರ್ಯಕರ್ತರು, ನೂತನವಾಗಿ ಸೇರ್ಪಡೆಗೆಂದು ನೀಡಿದ್ದ ಸಾವಿರಾರು ಅರ್ಜಿಗಳನ್ನು ಕಚೇರಿ ಮುಂದೆ ಹರಿದು ಬಿಸಾಡಿದರು. ಈ ಸಂದರ್ಭ ಕಚೇರಿಗೆ ಆಗಮಿಸಿದ ಅಧಿಕಾರಿ ವಸಂತ ಲಕ್ಷ್ಮಿ ಅವರಿಗೆ ಮುತ್ತಿಗೆ ಹಾಕಿ, ಅವ್ಯವಹಾರದ ಬಗ್ಗೆ ಮಾಹಿತಿ ನೀಡುವಂತೆ ಒತ್ತಾಯಿಸಿದರು. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಲು ಪ್ರಯತ್ನಿಸಿದರೂ, ಪ್ರತಿಭಟನಾಕಾರರು ಹಿಂದೆ ಸರಿಯಲಿಲ್ಲ.

ಜಂಟಿ ಆಯುಕ್ತರ ಸ್ಪಷ್ಟನೆ: ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೊಳಿಸುವ ಜವಾಬ್ದಾರಿ ಆರ್‍ಓ ಮತ್ತು ಎಆರ್‍ಓಗಳಿಗೆ ಸೇರಿದೆ. ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದರೆ ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಬಿಬಿಎಂಪಿ ಜಂಟಿ ಆಯುಕ್ತ ಉಮಾನಂದ ರೈ ಸ್ಪಷ್ಟನೆ ನೀಡಿದರು. ಪೂರ್ಣಿಮಾ, ಮಂಜುಳಾದೇವಿ, ವೀರಣ್ಣ, ಶೀಗೇಹಳ್ಳಿ ಸುಂದರ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com