

ಬೆಂಗಳೂರು: ದ್ವಿತೀಯ ಪಿಯುಸಿ ದೃಢೀಕೃತ ಅಂಕಪಟ್ಟಿ ತಾರದೇ ಎಂಜಿನಿಯರಿಂಗ್ ಸೀಟು ಹಂಚಿಕೆ ಸಾಧ್ಯವಿಲ್ಲ ಎಂದು ಕಾಮೆಡ್-ಕೆ ಆದೇಶ ಹೊರಡಿಸಿದ್ದರಿಂದಾಗಿ ವಿದ್ಯಾರ್ಥಿ-ಪೋಷಕರಲ್ಲಿ ಗೊಂದಲ ನಿರ್ಮಾಣವಾಗಿತ್ತು. ಈ ಮಧ್ಯೆ ಪದವಿಪೂರ್ವ ಶಿಕ್ಷಣ ಇಲಾಖೆ ಸಮಸ್ಯೆಗೆ ತೆರೆ ಎಳೆದಿದೆ.
ಕಾಮೆಡ್-ಕೆ ಯಿಂದ ಹಂಚಿಕೆಯಾಗುತ್ತಿರುವ ಇಂಜಿನಿಯರಿಂಗ್ ಸೀಟುಗಳಿಗೆ ಸಂಬಂಧಪಟ್ಟ ಕಾಲೇಜು ಪ್ರಾಂಶುಪಾಲರಿಂದ ದೃಢೀಕೃತ ದ್ವಿತೀಯ ಪಿಯುಸಿ ತಾತ್ಕಾಲಿಕ ಅಂಕಪಟ್ಟಿಯನ್ನು ಮಾತ್ರ ತರುವಂತೆ ಎಲ್ಲಾ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ. ಆದರೆ ತಾತ್ಕಾಲಿಕ ಅಂಕಪಟ್ಟಿಯಲ್ಲಿ ಲೋಪದೋಷ ಕಂಡುಬಂದಿದ್ದರಿಂದ ಮೂಲ ಅಂಕಪಟ್ಟಿಯನ್ನು ಅಥವಾ ದೃಢೀಕೃತ ಅಂಕಪಟ್ಟಿಯನ್ನು ಮಾತ್ರ ತರುವಂತೆ ಎಲ್ಲಾ ವಿದ್ಯಾರ್ಥಿಗಳಿಗೂ ಸೂಚಿಸಿತು. ಇದರಿಂದ ಗೊಂದಲಮಯ ವಾತಾವರಣ ಸೃಷ್ಟಿಯಾಗಿತ್ತು. ಇದನ್ನು ಅರಿತ ಇಲಾಖೆ ತಕ್ಷಣ ಪರಿಹಾರಕ್ಕೆ ಮುಂದಾಗಿದ್ದು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಮತ್ತು ಬೆಂಗಳುರಿನಲ್ಲಿ ಜಂಟಿ ನಿರ್ದೇಶಕರ ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದೆ.
ದೋಷಪೂರಿತ ಅಂಕಪಟ್ಟಿಯ ಆಧಾರದ ಮೇಲೆ ಸೀಟು ಹಂಚಿಕೆ ಮಾಡುವುದಕ್ಕೆ ಸಾಧ್ಯವಿಲ್ಲ. ಅಲ್ಲದೆ ಜುಲೈ ಎರಡನೇ ವಾರದಲ್ಲಿ ಆರಂಭವಾಗುವ ಮೆಡಿಕಲ್ ಸೀಟು ಹಂಚಿಕೆಯಲ್ಲಿ ಈ ರೀತಿ ಗೊಂದಲವಾಗಬಾರದು. ಹೀಗಾಗಿ ಇಲಾಖೆ ದೃಢೀಕರಿಸಿದ ಅಂಕಪಟ್ಟಿಯನ್ನೇ ತರಬೇಕೆಂದು ಸೂಚಿಸಲಾಗಿದೆ ಎಂದು ಕಾಮೆಡ್-ಕೆ ಅಧಿಕಾರಿಗಳು ವಿವರಿಸಿದರು.