ರೈತರಿಗೆ ರು.5000 ಕೋಟಿ ಹೆಚ್ಚು ಅನುದಾನ: ಸಿಎಂ

ರಾಜ್ಯದ ಮಳೆಯಾಶ್ರಿತ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ರೈತರಿಗೆ ಉತ್ತೇಜನ ನೀಡಲು ರು.5 ಸಾವಿರ ಕೋಟಿ ಹೆಚ್ಚುವರಿ ಹಣ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು...
ಮುಖ್ಯಮಂತ್ರಿ ಸಿದ್ದರಾಮಯ್ಯ
ಮುಖ್ಯಮಂತ್ರಿ ಸಿದ್ದರಾಮಯ್ಯ
Updated on

ಬಳ್ಳಾರಿ:  ರಾಜ್ಯದ ಮಳೆಯಾಶ್ರಿತ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಹೀಗಾಗಿ ರೈತರಿಗೆ ಉತ್ತೇಜನ ನೀಡಲು ರು.5 ಸಾವಿರ ಕೋಟಿ ಹೆಚ್ಚುವರಿ ಹಣ ಮೀಸಲಿಡುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಮಳೆ ಅಭಾವ ಹಾಗೂ ಇತರೆ ಕಾರಣಗಳಿಂದಾಗಿ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಶೇ.80ರಷ್ಟು ಜನ ಕೃಷಿ ಅವಲಂಬಿಸಿದ್ದು, ಈ ಪ್ರಮಾಣ ಶೇ.60ಕ್ಕೆ ಇಳಿಯಲಿದೆ. ಇದರಿಂದಾಗಿ ಮಳೆಯಾಶ್ರಿತ ಪ್ರದೇಶಗಳ ಕೃಷಿ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ ಎಂದರು.

ತೋರಣಗಲ್ ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಶನಿವಾರ ಜಿಂದಾಲ್ ವತಿಯಿಂದ ನಡೆದ ನಾನಾ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. ಎಂತಹ ಪರಿಸ್ಥಿತಿಯಲ್ಲಿದ್ದರೂ ರೈತರು ಆತ್ಮಹತ್ಯೆ ನಿರ್ಧಾರ ತೆಗೆದುಕೊಳ್ಳಬಾರದು. ಬಿಜೆಪಿ ಸರ್ಕಾರದ ಅವಧಿಯಲ್ಲಿ ಹೆಚ್ಚಿನ ಆತ್ಮಹತ್ಯೆಗಳಾಗಿವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಸಾವಿನ ಸಂಖ್ಯೆ ಗಣನೀಯ ಇಳಿಕೆಯಾಗಿದೆ. ಇದಕ್ಕೆ ಎರಡು ಸರ್ಕಾರದ ಅವಧಿಯಲ್ಲಾಗಿರುವ ಪ್ರಕರಣಗಳ ಅಂಕಿ-ಅಂಶಗಳೇ ಸ್ಪಷ್ಟಪಡಿಸುತ್ತವೆ ಎಂದರು.

ಕಳೆದ ತಿಂಗಳಲ್ಲಿ ರಾಜ್ಯದಲ್ಲಿ ಒಟ್ಟು 20 ರೈತರ ಆತ್ಮಹತ್ಯೆ ಪ್ರಕರಣಗಳಲ್ಲಿ ಮೂವರು ಕಬ್ಬು ಬೆಳೆಗಾರರಿದ್ದಾರೆ. ಉಳಿದವರು ನಾನಾ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಖಾಸಗಿಯಲ್ಲಿ ಸಾಲ ಪಡೆದಿದ್ದರೂ ಭಯ ಪಡಬೇಕಾಗಿಲ್ಲ. ರೈತರಿಗೆ ಕಿರುಕುಳ ನೀಡಿದರೆ ಕ್ರಮ ಕೈಗೊಳ್ಳಬೇಕೆಂದು ಎಸ್ ಪಿ ಮತ್ತು ಡಿಸಿಯವರಿಗೆ ಸೂಚಿಸಲಾಗಿದೆ. ಬಿಜೆಪಿಗೆ ರೈತರ ಬಗ್ಗೆ ಹಿತಾಸಕ್ತಿ ಇಲ್ಲವಾಗಿದೆ. ರು.2,500 ಕೋಟಿ ಸಾಲಮನ್ನಾ ಮಾಡುವುದಾಗಿ ಅದು ಘೋಷಣೆ ಮಾಡಿತ್ತು. ಆದರೆ, ನಾವು ಸಾಲಮನ್ನಾ ಮಾಡಿದ್ದೇವೆ. ನಮ್ಮದು ಅಹಿಂದ ಸರ್ಕಾರವಾಗಿದೆ.

ಈ ರೀತಿ ಹೇಳಿಕೊಳ್ಳುವುದಕ್ಕೆ ಅಂಜಿಕೆ ಇಲ್ಲ. ಪುಕ್ಕಟೆ ಅಕ್ಕಿ ವಿತರಣೆ ಬಗ್ಗೆ ಟೀಕೆಗಳಿಗೆ ಹೆದರುವುದಿಲ್ಲ ಎಂದರು. ಶೇ.3ಬಡ್ಡಿ ದರದ ಸಾಲದ ಉಪಯೋಗವನ್ನು ಶೇ.16ರಷ್ಟು ರೈತರು ಮಾತ್ರ ಪಡೆಯುತ್ತಿದ್ದಾರೆ. ಎಲ್ಲ ರೈತರು ಮಾತ್ರ ವ್ಯವಸಾಯ ಸೇವಾ ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆದಾಗ ಮಾತ್ರ ಕಡಿಮೆ ಬಡ್ಡಿಯಲ್ಲಿ ಸಾಲ ಸಿಗಲು ಸಾಧ್ಯ. ರೈತರು ಸಹಕಾರ ಸಂಘಗಳಲ್ಲಿ ಸದಸ್ಯತ್ವ ಪಡೆಯಲು ಶೇರು ಹಣವನ್ನು ಸರ್ಕಾರವೇ ಭರಿಸಲಿದೆ.

ಹಾಲು ಉತ್ಪಾದಕರಿಗೆ ರು.4 ಪ್ರೋತ್ಸಾಹಧನ ನೀಡುತ್ತಿದ್ದು, ಪ್ರತಿದಿನ 72 ಲಕ್ಷ ಲೀಟರ್ ಹಾಲು ಶೇಖರಣೆಯಾಗುತ್ತಿದೆ. ಶಾಲಾ ಮಕ್ಕಳಿಗೆ ವಾರದಲ್ಲಿ 5 ದಿನ ಕ್ಷೀರಭಾಗ್ಯ ನೀಡಲು ತೀರ್ಮಾನಿಸಲಾಗಿದೆ ಎಂದರು. ಸುಪ್ರೀಂ ಆದೇಶ ಅಂತಿಮ: ಜಿಲ್ಲೆಯ ಗಣಿ ಪ್ರದೇಶದಲ್ಲಿ ಸರ್ಕಾರ ಜಂಟಿ ಸರ್ವೆ ಮಾಡುತ್ತಿದೆ. ಆದರೆ, ಲೀಸ್ ಕೊಡುವುದಕ್ಕಲ್ಲ.

ಈ ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶದಂತೆ ನಡೆಯುತ್ತೇವೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಅಕ್ರಮ ಗಣಿಗಾರಿಕೆ ನಿಲ್ಲಿಸುವುದಾಗಿ ಹೇಳಿದ್ದೇವೆ. ಆದರೆ, ಗಣಿಗಾರಿಕೆಯನ್ನಲ್ಲ ಎಂಬುದನ್ನು ತಿಳಿದುಕೊಳ್ಳಬೇಕು. ಸಿ ಕೆಟಗರಿಯಲ್ಲಿ ಬರುವ 15 ಗಣಿ ಗುತ್ತಿಗೆ ಹರಾಜಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರಕ್ಕೆ ವರದಿ ಕಳಿಸಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com