
ಬೆಂಗಳೂರು: ಲೋಕಾಯುಕ್ತ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ರೂ.1 ಕೋಟಿ ಲಂಚ ಹಗರಣದ ಬಗ್ಗೆ ಯಾವುದೇ ರೀತಿಯ ತನಿಖೆ ಹಾಗೂ ಕಾನೂನು ಹೋರಾಟ ನಡೆಸಬಾರದೆಂದು ಸಂಸ್ಥೆಯ ಕಾನೂನು ಘಟಕ ತನ್ನ ಪೊಲೀಸರಿಗೆ ಅಧಿಕೃತವಾಗಿ ತಿಳಿಸಿದೆ.
ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಉಪಲೋಕಾಯುಕ್ತ ನ್ಯಾ. ಸುಭಾಷ್ ಬಿ. ಅಡಿ ಅವರು ನೀಡಿದ ನಿರ್ದೇಶನಕ್ಕೆ ಹೈಕೋರ್ಟ್ ತಡೆ ನೀಡಿದೆ. ಆದರೆ ಜಿಲ್ಲಾಪಂಚಾಯತ್ ಕಾರ್ಯನಿರ್ವಾಹಕ ಎಂಜಿನಿಯರ್ ಕೃಷ್ಣಮೂರ್ತಿ ನೀಡಿದ ದೂರಿನ ಆಧಾರದ ಮೇಲೆ ಎಫ್.ಐ.ಆರ್ ದಾಖಲಿಸಿಕೊಳ್ಳಲಾಗಿದೆ. ಅದಕ್ಕೆ ಯಾವುದೇ ರೀತಿಯ ತಡೆ ನೀಡಿಲ್ಲ. ಹೀಗಾಗಿ ತನಿಖೆ ಮುಂದುವರೆಸಬಹುದೇ ಎಂಬುದರ ಬಗ್ಗೆ ಸಲಹೆ ನೀಡುವಂತೆ ಲೋಕಾಯುಕ್ತ ಪೊಲೀಸ್ ವಿಭಾಗ, ಕಾನೂನು ಘಟಕಕ್ಕೆ ಪತ್ರ ಬರೆದಿತ್ತು. ಅಲ್ಲದೇ ಹೈಕೋರ್ಟ್ ಗೆ ಮೇಲ್ಮನವಿ ಸಲ್ಲಿಕೆ ಬಗ್ಗೆಯೂ ಸಲಹೆ ಕೋರಲಾಗಿತ್ತು.
ಈ ಬಗ್ಗೆ ಪರಿಶೀಲನೆ ನಡೆಸಿದ ಕಾನೂನು ಘಟಕ, ಯಾವುದೇ ರೀತಿಯ ತನಿಖೆಯನ್ನಾಗಲಿ ಅಥವಾ ಕಾನೂನು ಹೋರಾಟ ನಡೆಸದಂತೆ ಅಧಿಕೃತವಾಗಿ ಪತ್ರ ಬರೆದಿದೆ ಎಂದು ಮೂಲಗಳು ಹೇಳಿವೆ. ರಾಜ್ಯ ಸರ್ಕಾರ ನೇಮಿಸಿರುವ ವಿಶೇಷ ತನಿಖಾ ತಂಡ ವರದಿ ಸಲ್ಲಿಸುವವರೆಗೂ ಲೋಕಾಯುಕ್ತರಾಗಲಿ ಅಥವಾ ಉಪಲೋಕಾಯುಕ್ತರಾಗಲಿ ಪ್ರಕರಣವನ್ನು ಲೋಕಯುಕ್ತ ಸಂಸ್ಥೆಯ ಆಂತರಿಕ ತನಿಖೆಗೆ ಆದೇಶಿಸಬಾರದು ಮತ್ತು ವಿಶೇಷ ತನಿಖಾ ತಂಡದವರದಿಗೆ ಕಾಯಬೇಕು ಎಂದು ಹೈಕೋರ್ಟ್ ನಿರ್ದೇಶನ ನೀಡಿದೆ. ಒಂದು ವೇಳೆ ತನಿಖೆ ನಡೆಸಿದರೆ ನ್ಯಾಯಾಂಗ ನಿಂದನೆ ಎದುರಿಸಬೇಕಾಗುತ್ತದೆ ಎಂಬ ಸಲಹೆಯನ್ನು ಪತ್ರದಲ್ಲಿ ನೀಡಲಾಗಿದೆ. ಕಾನೂನು ಘಟಕದ ಈ ಸಲಹೆ ಲೋಕಾಯುಕ್ತ ನ್ಯಾ.ವೈ ಭಾಸ್ಕರ್ ರಾವ್ ಅವರ ಸೂಚನೆ ಮೇರೆಗೆ ಆಗಿದೆ ಎಂದು ಹೇಳಲಾಗುತ್ತಿದೆ.
Advertisement