
ಬೆಂಗಳೂರು: ಲೋಕಾಯುಕ್ತ ನ್ಯಾ.ಭಾಸ್ಕರ್ ರಾವ್ ರಾಜಿನಾಮೆಗೆ ಇನ್ನಷ್ಟು ಒತ್ತಡ ಹೆಚ್ಚಿದೆ. ಒಂದೆಡೆ ರಾಜಿನಾಮೆಗೆ ಆಗ್ರಹಿಸಿ ಸಾರ್ವಜನಿಕರು ಬೀದಿಗಿಳಿದು ಹೋರಾಟ ನಡೆಸಿದರೆ
ಮತ್ತೊಂದೆಡೆ ವಿಧಾನಮಂಡಲದ ಉಭಯಸದನಗಳಲ್ಲೂ ಇದೇ ಕೂಗು ಕೇಳಿ ಬಂದಿದೆ. ಈ ಮಧ್ಯೆ ಹೈಕೋರ್ಟ್ ಸಹ ಲೋಕಾಯುಕ್ತ ಸಂಸ್ಥೆಯ ಆಡಳಿತ ವೈಖರಿಗೆ ಮತ್ತೆ ಚಾಟಿ ಬೀಸಿದೆ. ಈ ಬೆಳವಣಿಗೆಗಳಿಂದಾಗಿ ರಾಜ್ಯ ಸರ್ಕಾರ ಎಲ್ಲಾ ದಿಕ್ಕುಗಳಿಂದಲೂ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದೆ. ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕುವ ಪ್ರತಿಭಟನೆಯ ನೇತೃತ್ವವಹಿಸಿದ್ದ ಪ್ರಮುಖರಲ್ಲಿ ಒಬ್ಬರಾದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಅವರು ಈ ಅಧಿವೇಶನದಲ್ಲಿ ಭಾಸ್ಕರ್‍ರಾವ್ ರಾಜಿನಾಮೆಗೆ ಸಭಾಧ್ಯಕ್ಷರು ಸ್ಪಷ್ಟ ನಿರ್ಣಯ ತೆಗೆದುಕೊಳ್ಳದಿದ್ದರೆ ಲೋಕಾ ಯುಕ್ತ ಕಚೇರಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಸಿದ್ದಾರೆ. ಅಷ್ಟೇ ಅಲ್ಲ, ಲೋಕಾಯುಕ್ತಕ್ಕೆ ಭಾಸ್ಕರ್‍ರಾವ್ ಅಗತ್ಯವಿಲ್ಲ. ತಕ್ಷಣವೇ ಕುರ್ಚಿಯಿಂದ ಕೆಳಗಿಳಿದು ತನಿಖೆ ಎದುರಿಸಲು ಸಿದ್ಧರಾಗ ಬೇಕೆಂದು ಆಗ್ರಹಿಸುವ ಮೂಲಕ ಸರ್ಕಾರ, ಲೋಕಾಯುಕ್ತರ ಮೇಲೆ ಗುಡುಗಿದ್ದಾರೆ. ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟಾಚಾ ರಕ್ಕೆ ಕಾರಣವಾಗಿರುವ ನ್ಯಾ. ಭಾಸ್ಕರ್‍ರಾವ್ ರಾಜಿನಾಮೆ ನೀಡಬೇಕು ಹಾಗೂ ಅಶ್ವಿನ್ ರಾವ್ ಬಂಧನಕ್ಕೆ ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಾಜಧಾನಿ ಯಲ್ಲಿ ಬುಧವಾರ ಬೃಹತ್ ಜಾಥಾ ನಡೆಯಿತು. ಜತೆಗೆ ಲೋಕಾಯುಕ್ತ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಪ್ರತಿಭಟನಕಾರರನ್ನು ಪೊಲೀಸರು ಬಂಧಿಸಿ ನಂತರ ಬಿಡುಗಡೆ ಮಾಡಿದರು.
ಭೂ ಕಬಳಿಕೆ ವಿರೋಧಿ ಹೋರಾಟ ಸಮಿತಿ ಹಮ್ಮಿಕೊಂಡಿದ್ದಆಂದೋಲನ ದಲ್ಲಿ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್. ದೊರೆಸ್ವಾಮಿ, ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ ಹಾಗೂ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ನೇತೃತ್ವದಲ್ಲಿ ವಿವಿಧ ಸಂಘಟನೆಗಳ ಸದಸ್ಯರು ಭಾಸ್ಕರ್‍ರಾವ್ ರಾಜಿನಾಮೆಗೆ ಒಕ್ಕೊರಲಿನ ದನಿಗೂಡಿಸಿದವು.
ಸದನದಲ್ಲೂ ಪ್ರತಿಧ್ವನಿ: ಇತ್ತ ವಿಧಾನಮಂಡಲದ ಉಭಯ ಸದನಗಳಲ್ಲೂ ಲೋಕಾಯುಕ್ತ ಪ್ರಕರಣ ಪ್ರತಿಧ್ವನಿಸಿತು. ಸರ್ಕಾರ ಮತ್ತು ಲೋಕಾಯುಕ್ತರು ಪರಸ್ಪರ ರಕ್ಷಣೆ ಸೂತ್ರಕ್ಕೆ
ಅಂಟಿಕೊಂಡಿದ್ದಾರೆ ಎಂದು ಪ್ರತಿಪಕ್ಷ ಬಿಜೆಪಿ ಗಂಭೀರ ಆರೋಪ ಮಾಡಿದೆ. ವಿಧಾನಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಪರಿಷ್ಕೃತ ರೂಪದಲ್ಲಿ ಲೋಕಾಯುಕ್ತ ಭ್ರಷ್ಟಾಚಾರದ ಬಗ್ಗೆ ಚರ್ಚಿಸಲು ಅವಕಾಶ ನೀಡಿದರು. ನ್ಯಾ.ಭಾಸ್ಕರ್ ರಾವ್ ಪುತ್ರ ಅಶ್ವಿನ್ ರಾವ್ ಅವರನ್ನು ಬಂಧಿಸದೇ ಸರ್ಕಾರ ರಕ್ಷಿಸುತ್ತಿದೆ. ಲೋಕಾಯುಕ್ತ ಸಂಸ್ಥೆಯ ಹೆಸರು ಬಳಸಿಕೊಂಡು ಅಧಿಕಾರಿಗಳಿಂದ ರು. 200 ಕೋಟಿ ಅಕ್ರಮ ಹಣ ಸಂಗ್ರಹಿಸಲಾಗಿದೆ ಎಂದು ಬಿಜೆಪಿ ಆರೋಪಿಸಿದೆ. ವಿಧಾನಪರಿಷತ್ತಿನಲ್ಲಿ ಯೂ ಚರ್ಚೆಗೆ ಅವಕಾಶ ಕೊಡಬೇಕೆಂದು ಪ್ರತಿಪಕ್ಷಗಳು ಆಗ್ರಹಿಸಿದವು.
ಹೈಕೋರ್ಟ್‍ನಿಂದಲೂ ಚಾಟಿ: ಲೋಕಾಯುಕ್ತ ಸಂಸ್ಥೆಯಲ್ಲಿ ಒಳಒಪ್ಪಂದ ವ್ಯವಹಾರಗಳು ನಡೆಯುತ್ತಿದ್ದು, ಸಂಸ್ಥೆಯಲ್ಲಿನ ಲೋಪಗಳು ಬೆಳಕಿಗೆ ಬಂದಿದೆ. ಈಗಲಾದರೂ ಸಂಸ್ಥೆ ಕಣ್ಣು ತೆರೆಯದಿದ್ದರೆ ಹೇಗೆ ಎಂದು ಹೈಕೋರ್ಟ್ ಲೋಕಾಯುಕ್ತ ಸಂಸ್ಥೆ ವಿರುದ್ಧ ಕಿಡಿಕಾರಿದೆ. ಲೋಕಾಯುಕ್ತ ಸಂಸ್ಥೆಯಿಂದ ಸಮಾಜಕ್ಕೆ ಒಳ್ಳೆಯದಾಗಬೇಕು. ಅದನ್ನೇ ಸಮಾಜ ಕೂಡ ಬಯಸುತ್ತದೆ. ಈ ಕಾರಣಕ್ಕಾಗಿ ಮೊದಲು ಸಾರ್ವ ಜನಿಕರಿಗೆ ಪ್ರಾಮಾಣಿಕವಾ ಗಿರುವಂತೆ ಬದ್ಧತೆಯನ್ನು ಲೋಕ ಸಂಸ್ಥೆ ಪ್ರದರ್ಶಿಸಬೇಕು ಎಂದು ಹೈಕೋರ್ಟ್ ಬೋಧನೆ ಮಾಡಿದೆ. ಅಕ್ರಮವಾಗಿ ಅಧಿಕಾರಿಗಳು ಸಂಪಾದಿಸಿದ ಸಂಪತ್ತು ಸಕ್ರಮಗೊಳಿಸುವ ಕಾರ್ಯ ಲೋಕಾಯುಕ್ತ ಸಂಸ್ಥೆಯಿಂದಲೇ ನಡೆಯುತ್ತಿದೆ ಎಂದು ಸಂಸ್ಥೆ ಮತ್ತು ಸರ್ಕಾರದ ವಿರುದ್ಧ ಹೈಕೋರ್ಟ್ ಕೆಂಡಕಾರಿದೆ.
Advertisement