ಮುಂದುವರಿದ ಬಿಬಿಎಂಪಿ ನೌಕರರ ಧರಣಿ

ಬಿಬಿಎಂಪಿ ನೌಕರರ ಹಾಗೂ ಅಧಿಕಾರಿಗಳ ಸಂಘದ ಬೇಡಿಕೆ ಈಡೇರದ ಕಾರಣ ಪ್ರತಿಭಟನೆ ಮುಂದುವರಿಸಲು ಸಂಘದ ಮುಖಂಡರು ನಿರ್ಧರಿಸಿದ್ದಾರೆ. 12 ಅಧಿಕಾರಿಗಳನ್ನು ಆಡಳಿತಾಧಿಕಾರಿ ವಿಜಯಭಾಸ್ಕರ್ ಅಮಾನತು ಮಾಡಿದ್ದು, ಆ ಆದೇಶ ವಾಪಸ್ ಪಡೆಯುವುದು...
ಟಿ.ಎಂ. ವಿಜಯಭಾಸ್ಕರ್
ಟಿ.ಎಂ. ವಿಜಯಭಾಸ್ಕರ್
Updated on

ಬೆಂಗಳೂರು: ಬಿಬಿಎಂಪಿ ನೌಕರರ ಹಾಗೂ ಅಧಿಕಾರಿಗಳ ಸಂಘದ ಬೇಡಿಕೆ ಈಡೇರದ ಕಾರಣ ಪ್ರತಿಭಟನೆ ಮುಂದುವರಿಸಲು ಸಂಘದ ಮುಖಂಡರು ನಿರ್ಧರಿಸಿದ್ದಾರೆ. 12 ಅಧಿಕಾರಿಗಳನ್ನು ಆಡಳಿತಾಧಿಕಾರಿ ವಿಜಯಭಾಸ್ಕರ್ ಅಮಾನತು ಮಾಡಿದ್ದು, ಆ ಆದೇಶ ವಾಪಸ್ ಪಡೆಯುವುದು ಸೇರಿದಂತೆ ಹಲವು ಬೇಡಿಕೆಗಳಿಗೆ ಆಗ್ರಹಿಸಿ ಸಂಘ ಪ್ರತಿಭಟನೆ ನಡೆಸುತ್ತಿದೆ.

ಕರ್ತವ್ಯಲೋಪ ತೋರಿದ ಅಧಿಕಾರಿಗಳನ್ನು ಮಾತೃ ಇಲಾಖೆಗೆ ಕಳುಹಿಸಲಾಗಿದೆ. 4 ಮಂದಿ ಅಧಿಕಾರಿಗಳನ್ನು ಮಾತ್ರ ಅಮಾನತು ಮಾಡಲಾಗಿದೆ ಎಂದು ಆಡಳಿತಾಧಿಕಾರಿಗಳು ತಿಳಿಸಿದ್ದರೂ, ಪ್ರತಿಭಟನೆ ಹಿಂತೆಗೆದುಕೊಂಡಿಲ್ಲ. ಗುರುವಾರ ಮತ್ತೆ ಪ್ರತಿಭಟನೆ ಆರಂಭವಾದಾಗ ಸಂಧಾನ ನಡೆಸಲು ಪ್ರಯತ್ನಿಸಿದ್ದರೂ ಪ್ರಯೋಜನವಾಗಿಲ್ಲ. ಶುಕ್ರವಾರ ಸಂಘದ ಮುಖಂಡರನ್ನು ಸಭೆಗೆ ಕರೆದಿದ್ದು, ಚರ್ಚಿಸಿ ಸಮಸ್ಯೆ ಪರಿಹರಿಸಿಕೊಳ್ಳುವಂತೆ ಆಡಳಿತಾಧಿಕಾರಿ ವಿಜಯಭಾಸ್ಕರ್ ಸೂಚಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ದಯಾನಂದ, ನೌಕರರಿಗೆ ಒತ್ತಡ ಹೆಚ್ಚಿದ್ದು, ಕೆಲಸ ಮಾಡಲು ಸಾಧ್ಯ ವಾಗುತ್ತಿಲ್ಲ ಎಂದು ದೂರುಗಳು ಬಂದಿವೆ. ಹಿರಿಯ ಅಧಿಕಾರಿಗಳು ಹಣಕ್ಕಾಗಿ ಖಾತೆ ಮಾಡಿಕೊಡುವ ಚಟುವಟಿಕೆ ನಡೆಸುತ್ತಿದ್ದಾರೆ. ಜಾಹಿರಾತು ವಿಭಾಗದಲ್ಲಿ ಅಕ್ರಮ ನಡೆದಿದ್ದು, ನೌಕರರ ಹಾಗೂ ಅಧಿಕಾರಿಗಳ ಮೇಲೆ ಆರೋಪ ಮಾಡಲಾಗಿದೆ. ನೌಕರರ ವೇತನ, ಕೆಲಸ ಒತ್ತಡಕ್ಕೆ ಸಂಬಂಧಿಸಿದಂತೆ ಸಮಸ್ಯೆ ಪರಿಹರಿಸಲು ಸೂಚಿಸಿದ್ದರೂ, ಪ್ರಯೋಜನವಾಗಿಲ್ಲ. ಜಾಹಿರಾತು ವಿಭಾಗದ ಸಹಾಯಕ ಆಯುಕ್ತ ಮಥಾಯ್ ಸುಳ್ಳು ವರದಿ ನೀಡಿದ್ದು, ಅವರನ್ನು ಮಾರುಕಟ್ಟೆ ವಿಭಾಗಕ್ಕೆ ಕಳುಹಿಸಬೇಕು ಎಂದು ಒತ್ತಾಯಿಸಿದರು.

ಕೆಲವು ಬಾರಿ ಕಠಿಣ ಕ್ರಮ ಅಗತ್ಯ: ಕೆಲಸದ ವಿಚಾರದಲ್ಲಿ ಕೆಲವು ಬಾರಿ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಆದರೆ, ಇದನ್ನು ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು ಎಂದು ಆಡಳಿತಾಧಿಕಾರಿ ವಿಜಯಭಾಸ್ಕರ್ ಸ್ಪಷ್ಟಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ತವ್ಯಲೋಪ ತೋರಿದಾಗ ಕೆಲವು ವೇಳೆ ಕಠಿಣ ಕ್ರಮ ಕೈಗೊಳ್ಳಬೇಕಾಗುತ್ತದೆ. ಇದರಿಂದ ಕೆಲವರಿಗೆ ನೋವಾಗಬಹುದು. ಆದರೆ, ಇದನ್ನೇ ವೈಯಕ್ತಿಕವಾಗಿ ತೆಗೆದುಕೊಳ್ಳಬಾರದು. ಕೆಲಸದ ವಿಚಾರದಲ್ಲಿ ಕ್ರಮ ಕೈಗೊಂಡಿದ್ದೇನೆಯೇ ಹೊರತು ವೈಯಕ್ತಿಕ ದ್ವೇಷ ಸಾಧಿಸಿಲ್ಲ. ಇದುವರೆಗೆ ಕರ್ತವ್ಯಲೋಪ ತೋರಿದ 4 ಅಧಿಕಾರಿಗಳನ್ನು ಮಾತ್ರ ಅಮಾನತಿನಲ್ಲಿಡಲಾಗಿದೆ. ಇದನ್ನು ಸರ್ಕಾರಿ ಇಲಾಖೆ ಎಂದು ಪರಿಗಣಿಸದೆ ಬಿಬಿಎಂಪಿ ಎಂದು ಪರಿಗಣಿಸಬೇಕು.

ನೌಕರರಲ್ಲಿ ಕೆಲವರು 10-15 ವರ್ಷಗಳಿಂದ ಪ್ರೊಬೆಷನರಿ ಹಂತದಲ್ಲೇ ಇದ್ದು, ಬಡ್ತಿ ದೊರೆತಿಲ್ಲ. ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ನೇಮಕ ನಡೆಯಬೇಕಿದೆ. ಆದರೆ, ಹೈದರಾಬಾದ್ ಮೀಸಲು ವಿಚಾರದಲ್ಲಿ ತಾಂತ್ರಿಕ ಕಾರಣಗಳಿರುವುದರಿಂದ ಹೊಸ ನೇಮಕ ಸಾಧ್ಯವಾಗಿಲ್ಲ ಎಂದರು. ಜಾಹಿರಾತು ವಿಭಾಗದ ಮಥಾಯ್ ಅವರ ವರದಿ ಅತಿಶಯೋಕ್ತಿಯಾಗಿದೆ. ಮುಂಬೈ ಮಹಾನಗರ ಪಾಲಿಕೆಯಲ್ಲಿ ಪ್ರತಿ ವರ್ಷ ಜಾಹಿರಾತು ವಿಭಾಗದಿಂದ ರು.105 ಕೋಟಿ ಸಂಗ್ರಹವಾಗುತ್ತಿದ್ದು, ಬಿಬಿಎಂಪಿ ಜಾಹಿರಾತು ವಿಭಾಗದಲ್ಲಿ ಇಷ್ಟು ಮೊತ್ತದ ವಹಿವಾಟು ನಡೆಯುತ್ತಿಲ್ಲ. ಆದರೆ, ಬಿಬಿಎಂಪಿಯಲ್ಲಿ ರು.2 ಸಾವಿರ ಕೋಟಿ ಮೊತ್ತದ ಬೃಹತ್ ಅಕ್ರಮ ನಡೆದಿದೆ ಎಂದು ಅತಿರೇಕದ ವರದಿ ನೀಡಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com