ಹೈಕೋರ್ಟ್ ಮಹತ್ವದ ತೀರ್ಪು: ಕೆಎಎಸ್ ಪ್ರಕರಣದಲ್ಲಿ 5 ಅಧಿಕಾರಿಗಳು ನಿರ್ದೋಷಿ

1998ನೇ ಸಾಲಿನ ಗೆಜೆಟೆಡ್ ಪ್ರೋಬೆಷನರಿ ನೇಮಕಾತಿ ವೇಳೆ ಸುಳ್ಳು ಜಾತಿ ಹಾಗೂ ಆದಾಯದ ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪ ಹೊತ್ತಿದ್ದ...
ಹೈಕೋರ್ಟ್
ಹೈಕೋರ್ಟ್

ಬೆಂಗಳೂರು: 1998ನೇ ಸಾಲಿನ ಗೆಜೆಟೆಡ್ ಪ್ರೋಬೆಷನರಿ ನೇಮಕಾತಿ ವೇಳೆ ಸುಳ್ಳು ಜಾತಿ ಹಾಗೂ ಆದಾಯದ ಪ್ರಮಾಣ ಪತ್ರ ಸಲ್ಲಿಸಿದ್ದ ಆರೋಪ ಹೊತ್ತಿದ್ದ ಅಧಿಕಾರಿಗಳಾದ ಆಶಾ ಪರ್ವಿನ್, ಸಲ್ಮಾ ಫಿರ್ದೋಸ್, ಎಂ.ಬಿ. ಬಣಕಾರ್, ಪಿ.ಗೋಪಾಲಕೃಷ್ಣ ಮತ್ತು ಕೆ.ನರಸಿಂಹ ಅವರು ನಿರ್ದೋಷಿಗಳೆಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಕೆಪಿಎಸ್‍ಸಿ ನೇಮಕದಲ್ಲಿನ ಅಕ್ರಮ ಕುರಿತು ತಮ್ಮ ವಿರುದ್ಧ ಸಿಐಡಿ ದಾಖಲಿಸಿದ್ದ ಎಫ್ಐಆರ್, ದೋಷಾರೋಪ ಪಟ್ಟಿ ಮತ್ತು ಅಧೀನ ನ್ಯಾಯಾಲಯದ ವಿಚಾರಣೆ ರದ್ದು ಕೋರಿ ಈ ಐವರು ಅಧಿಕಾರಿಗಳು ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾ.ಎಲ್.ನಾರಾಯಣಸ್ವಾಮಿ ಅವರಿದ್ದ ಏಕಸದಸ್ಯ ಪೀಠವು, ಈ ಐವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿದೆ.

ಅಲ್ಲದೇ ಈವರೆಗೂ ಅಮಾನತಿನಲ್ಲಿದ್ದ ಈ ಐವರು ಮತ್ತೊಮ್ಮೆ ತಮ್ಮ ಅಧಿಕಾರ ಪುನಃ ಸ್ಥಾಪಿಸಿಕೊಳ್ಳಬಹುದೆಂದು ಹೈಕೋರ್ಟ್ ಆದೇಶಿಸಿದೆ. ಆಶಾ ಪರ್ವಿನ್ ಮತ್ತು ಸಲ್ಮಾ ಫಿರ್ದೋಸ್ ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಪರ್ವಿನ್ ಕೆಪಿಎಸ್‍ಸಿ ನೇಮಕವಾಗುವ ಮುನ್ನ 2ಬಿ ಕೆಟಗರಿಯ ಜಾತಿ ಪ್ರಮಾಣಪತ್ರ ಸಲ್ಲಿಸಿ ಪೊಲೀಸ್ ಇನ್ಸ್‍ಪೆಕ್ಟರ್ ಹುದ್ದೆಗೆ ಸೇರಿದ್ದರು. ಅದೇ ರೀತಿ ಫಿರ್ದೋಷ್ 2 ಬಿ ಕೆಟಗರಿಯ ಜಾತಿ ಪ್ರಮಾಣಪತ್ರ ಸಲ್ಲಿಸಿ ಶಿಕ್ಷಕರ ಹುದ್ದೆಗೆ ನೇಮಕಗೊಂಡಿದ್ದರು.

ನಂತರ ಇಬ್ಬರೂ ಕೆಪಿಎಸ್‍ಸಿ ನೇಮಕಾತಿಯಲ್ಲೂ 2ಬಿ ಕೆಟಗರಿಯಲ್ಲಿ ಜಾತಿ ಪ್ರಮಾಣಪತ್ರ ಸಲ್ಲಿಸಿ ಗೆಜೆಟೆಡ್ ಪ್ರೋಬೆಷನರಿ ಹುದ್ದೆಗಳಿಗೆ ನೇಮಕಗೊಂಡಿದ್ದಾರೆ. ಅಂದರೆ ಇವರು ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸುವ ಪ್ರಮೇಯವೇ ಬರುವುದಿಲ್ಲ ಮತ್ತು ಜಾತಿ ಪ್ರಮಾಣಪತ್ರ ಸಲ್ಲಿಕೆಯಲ್ಲಿ ಅಕ್ರಮ ಎಸಗಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಆಶಾ ಪರ್ವಿನ್ ಮತ್ತು ಸಲ್ಮಾ ಫಿರ್ದೋಸ್ ಪರ ವಕೀಲ ರೆಹಮತುಲ್ಲಾ ಕೊತ್ವಾಲ್ ವಾದಿಸಿ, ತಮ್ಮ ಕಕ್ಷಿದಾರರು ತಹಶೀಲ್ದಾರ್ ಸಹಿ ಫೋರ್ಜರಿ ಮಾಡಿ ನಕಲಿ ಜಾತಿ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ಸಿಐಡಿ ತನಿಖೆ ಹೇಳುತ್ತದೆ.

ಆದರೆ, ಬೆಂಗಳೂರಿನ ವಿಧಿ ವಿಜ್ಞಾನ ಪ್ರಯೋಗಾಲಯ ವರದಿ ಈ ಇಬ್ಬರ ಜಾತಿ ಪ್ರಮಾಣ ಪತ್ರದ ಮೇಲಿನ ಸಹಿ ನಕಲಿ ಅಲ್ಲ. ಬದಲಾಗಿ ತಹಶೀಲ್ದಾರ್ ನೈಜ ಸಹಿ ಎಂದು ಹೇಳುತ್ತದೆ. ಇನ್ನೊಂದೆಡೆ ಸಿಐಡಿ ತನಿಖೆಯಲ್ಲಿ ಈ ಇಬ್ಬರ ಜಾತಿ ಪ್ರಮಾಣಪತ್ರಕ್ಕೆ ತಾವು ಸಹಿ ಮಾಡಿಲ್ಲ ಎಂದು ತಹಶೀಲ್ದಾರ್ ಹೇಳಿದರೆ, ಇಲಾಖಾವಾರು ತನಿಖೆಯಲ್ಲಿ ತಾವೇ ಸಹಿ ಮಾಡಿದ್ದೆವು ಎಂದು ಒಪ್ಪಿಕೊಳ್ಳುತ್ತಾರೆ. ಸಿಐಡಿ ದಾಖಲಿಸಿದ ಎಫ್ಆರ್, ದೋಷಾರೋಪಗಳ ಪಟ್ಟಿಯ ಅಂಶಗಳಿಗೂ ತಹಶೀಲ್ದಾರ್ ಹೇಳಿಕೆಗಳು ತದ್ವಿರುದ್ಧವಾಗಿವೆ ಎಂದು ವಾದಿಸಿದರು.

ಇದನ್ನು ಪರಿಗಣಿಸಿದ ನ್ಯಾಯಾಯ ಅವರ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದುಗೊಳಿಸಿ ಐವರನ್ನು ಖುಲಾಸೆಗೊಳಿಸಿದೆ. ಆದರೆ, ಕೆಪಿಎಸ್‍ಸಿಯ ಅಂದಿನ ಅಧ್ಯಕ್ಷ ಎಚ್.ಎನ್.ಕೃಷ್ಣ ಅವರ ವಿರುದಟಛಿದ ಪ್ರಕರಣ ಮಾತ್ರ ಇನ್ನೂ ಹೈಕೋರ್ಟ್‍ನಲ್ಲಿ ಬಾಕಿ ಉಳಿದಿದೆ. ಅರ್ಜಿದಾರರ ಪರ ರೆಹಮತುಲ್ಲಾ ಕೊತ್ವಾಲ್ ಮತ್ತು ಪಿ.ಎನ್. ಹೆಗಡೆವಾದ ಮಂಡಿಸಿದರು.

ಏನಿದು ಪ್ರಕರಣ?
ಆಶಾ ಪರ್ವಿನ್ ಮತ್ತು ಸಲ್ಮಾ ಫಿರ್ದೋಸ್ ನೇಮಕಾತಿ ವೇಳೆ 2ಬಿ ಕೆಟಗರಿಯಲ್ಲಿ ಸುಳ್ಳು ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ಸಲ್ಲಿಸಿ ಉದ್ಯೋಗ ಗಿಟ್ಟಿಸಿಕೊಂಡಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಾಗಿತ್ತು.

ಅಲ್ಲದೆ, ಮೀಸಲು ಕೋಟಾದ ಬದಲಾಗಿ ಸಾಮಾನ್ಯ ಕೋಟಾದಲ್ಲಿ ಉದ್ಯೋಗ ನೀಡುವಂತೆ ಕೆಪಿಎಸ್‍ಸಿ ಮುಖ್ಯಸ್ಥರಿಗೆ ಪತ್ರ ಬರೆಯಲು ಅಭ್ಯರ್ಥಿಯೊಬ್ಬನಿಗೆ ಒತ್ತಡ ಹೇರಿದ ಆರೋಪ ಸಂಬಂಧ ಅಧಿಕಾರಿಗಳಾದ ಎಂ. ಬಿ.ಬಣಕಾರ್, ಪಿ.ಗೋಪಾಲಕೃಷ್ಣ ಮತ್ತು ಕೆ. ನರಸಿಂಹ ವಿರುದಟಛಿ ಪ್ರಕರಣ ದಾಖಲಾಗಿತ್ತು. ಇದಕ್ಕೆ ಸಂಬಂ„ಸಿದಂತೆ ಸಿಐಡಿ ಪೊಲೀಸರು 2011ರಲ್ಲಿ ಎಫ್ಐಆರ್ ದಾಖಲಿಸಿದ್ದರು.

2012ರಲ್ಲಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಕೆಳ ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸುತ್ತಿತ್ತು. ಇದನ್ನು ಪ್ರಶ್ನಿಸಿ ಐವರು ಹೈಕೋರ್ಟ್‍ಗೆ ಅರ್ಜಿ ಸಲ್ಲಿಸಿದ್ದರು. ಸದ್ಯ ಈ ಐವರ ವಿರುದ್ಧ ಅಧೀನ ನ್ಯಾಯಾಲಯದ ವಿಚಾರಣೆಯನ್ನೂ ಹೈಕೋರ್ಟ್ ಇದೇ ವೇಳೆ ರದ್ದುಪಡಿಸಿ ಆದೇಶಿಸಿದೆ.
ಪ್ರಕರಣ ದಾಖಲಿಸಲು ಸಿಐಡಿಗೆ ದೊರೆತ ಆಧಾರ: ಸುಳ್ಳು ಜಾತಿ ಪ್ರಮಾಣ ಪತ್ರ ಸಲ್ಲಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಸಿದಾಗ ವಿಧಿ ವಿಜ್ಞಾನ ಪ್ರಯೋಗಾಲಯ ನೇಮಕಾತಿ ವೇಳೆ ಅರ್ಜಿದಾರರು ನೀಡಿದ್ದ ಪ್ರಮಾಣ ಪತ್ರದಲ್ಲಿರುವ ಸಹಿ ಹಾಗೂ ಅದನ್ನು ವಿತರಿಸಿದ ಸಕ್ಷಮ ಪ್ರಾಧಿಕಾರದ ಅಧಿಕಾರಿಗಳ ಸಹಿ ಒಂದೇ ಆಗಿರುವುದಾಗಿ ವರದಿ ನೀಡಿತ್ತು. ಇದರಿಂದ ತೃಪ್ತಿಗೊಳ್ಳದ ಸಿಐಡಿ ಅಧಿಕಾರಿಗಳು ಹೈದರಾಬಾದ್ ನಲ್ಲಿರುವ ಖಾಸಗಿ ಸಂಸ್ಥೆಯಾದ ಟ್ರೂತ್ ಫೌಂಡೇಷನ್ ಲ್ಯಾಬ್‍ಗೆ ಸಹಿ ಪರೀಕ್ಷೆಗೆ ಕಳುಹಿಸಿದ್ದರು. ಖಾಸಗಿ ಸಂಸ್ಥೆಯಾದ ಟ್ರೂತ್ ಫೌಂಡೇಷನ್ ಸಹಿ ನಕಲು ಎಂದು ವರದಿ ನೀಡಿತ್ತು. ಖಾಸಗಿ ಸಂಸ್ಥೆ ನೀಡಿದ್ದ ಈ ವರದಿ ಆಧಾರದಲ್ಲಿ ಸಿಐಡಿ ಎಫ್ಐಆರ್ ದಾಖಲಿಸಿತ್ತು.

ಪ್ರಕರಣದ ನಡೆದು ಬಂದ ದಾರಿ

  • 1998 ಮಾ.9ರಂದು ರಾಜ್ಯ ಸರ್ಕಾರ ಕೆಪಿಎಸ್‍ಸಿ ಗೆಜೆಟೆಡ್ ಪ್ರೊಬೆಷನರಿ ಎ ಮತ್ತು ಬಿ ವೃಂದ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿತ್ತು.
  • 1998 ಮಾ.23 ಮತ್ತು 27ರಂದು ಅರ್ಜಿದಾರರ ತಮಗೆ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡುವಂತೆ ಸಲ್ಲಿಸಿದ ಮನವಿಗೆ ಸಂಬಂಧಪಟ್ಟ ತಹಸೀಲ್ದಾರ್ ಜಾತಿ ಹಾಗೂ ಆದಾಯ ಪ್ರಮಾಣ ಪತ್ರ ನೀಡಿದ್ದರು.
  • 2006 ರಲ್ಲಿ ಅವರೆಲ್ಲರೂ ಕೆಪಿಎಸ್‍ಸಿ ಮೂಲಕ ಗೆಜೆಡೆಟ್ ಪ್ರೊಬೆಷನರಿ ಎ ಮತ್ತು ಬಿ ವೃಂದದ ಅಧಿಕಾರಿಗಳಾಗಿ ಆಯ್ಕೆಯಾಗಿ ನೇಮಕಗೊಂಡರು.
  • 2006 ಫೆ.21ರಂದು ಆಯ್ಕೆಗೊಂಡ ಅಧಿಕಾರಿಗಳಿಗೆ ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗ ಇಲಾಖೆ ಆಯುಕ್ತರು ಮತ್ತು ಜಿಲ್ಲಾಧಿಕಾರಿ ಸಿಂಧುತ್ವ ಪ್ರಮಾಣ ಪತ್ರವನ್ನು ಅಧಿಕಾರಿಗಳು ದಾಖಲಿಸಿದ್ದರು
  • 2006 ಮಾ.27ರಂದು ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರ ನೀಡಿದ ಸಿಂಧುತ್ವ ಪತ್ರವನ್ನು ಅಧಿಕಾರಿಗಳು ದಾಖಲಿಸಿದ್ದರು.
  • 2008-2009ರಲ್ಲಿ ಆಯ್ಕೆ ಆಗದ ಕೆಲವು ಅಭ್ಯರ್ಥಿಗಳು ನೇಮಕದಲ್ಲಿ ಅಕ್ರಮ ನಡೆದಿದ್ದು, ತನಿಖೆ ಸಿಐಡಿಗೆ ವಹಿಸಬೇಕು ಎಂದು ಹೈಕೋರ್ಟ್‍ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದರು.
  • 2011 ಆ.9-ವಿಚಾರಣೆ ನಡೆಸಿದ್ದ ಹೈಕೋರ್ಟ್1998, 99 ಮತ್ತು 2004ರ ನೇಮಕಾತಿ ಕುರಿತು ಸಿಐಡಿಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು. ಅಲ್ಲದೇ ಪ್ರಕರಣ ಕುರಿತು ಸಿಐಡಿ ತನಿಖೆ ಮೇಲ್ವಿಚಾರಣೆಯನ್ನು ನಿವೃತ್ತ ಹೈಕೋರ್ಟ್‍ನ ನ್ಯಾ. ಮೊಹಮದ್ ಅನ್ವರ್ ಅವರಿಗೆ ವಹಿಸಿತ್ತು.
  • 2011 ಆ. 11- ವಿಧಾನ ಸೌಧ ಪೊಲೀಸ್ ಠಾಣೆಯಲ್ಲಿ ಸಿಐಡಿ ಪ್ರಕರಣ ದಾಖಲಿಸಿ ಎಫ್ಐಆರ್ ದಾಖಲಿಸಿತ್ತು. ನಂತರ ಸಿಐಡಿ ತನ್ನ ವರದಿಯಲ್ಲಿ ಈ ಐವರು ತಪ್ಪಿತಸ್ಥರೆಂದು ವರದಿ ನೀಡಿತ್ತು. ನಂತರ ಆರೋಪಿಗಳನ್ನು ಅಮಾನತಿನಲ್ಲಿಡಲಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com