ಸಂಗೊಳ್ಳಿರಾಯಣ್ಣನ ಖಡ್ಗ ಭಗ್ನಗೊಳಿಸಿದ ದುಷ್ಕರ್ಮಿಗಳು

ಸಂಗೊಳ್ಳಿರಾಯಣ್ಣನ ಕಂಚಿನ ಪ್ರತಿಮೆಯ ಖಡ್ಗ ಕದಿಯಲು ಯತ್ನಿಸಿದ ದುಷ್ಕರ್ಮಿಗಳು ಅದನ್ನು ಭಗ್ನಗೊಳಿಸಿದ್ದಾರೆ.
ಭಗ್ನಗೊಂಡಿರುವ ರಾಯಣ್ಣನ ಖಡ್ಗ(ಕೆಪಿಎನ್ ಚಿತ್ರ)
ಭಗ್ನಗೊಂಡಿರುವ ರಾಯಣ್ಣನ ಖಡ್ಗ(ಕೆಪಿಎನ್ ಚಿತ್ರ)

ಬೆಂಗಳೂರು: ಸಂಗೊಳ್ಳಿರಾಯಣ್ಣ(ಖೋಡೆಸ್) ವೃತ್ತದಲ್ಲಿರುವ ಸಂಗೊಳ್ಳಿರಾಯಣ್ಣನ ಕಂಚಿನ ಪ್ರತಿಮೆಯ ಖಡ್ಗ ಕದಿಯಲು ಯತ್ನಿಸಿದ ದುಷ್ಕರ್ಮಿಗಳು ಅದನ್ನು ಭಗ್ನಗೊಳಿಸಿದ್ದಾರೆ. ತಡರಾತ್ರಿ ವೇಳೆ ಈ ಕೃತ್ಯ ಎಸಗಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸುದ್ದಿ ತಿಳಿದ ಕನ್ನಡಪರ ಅನೇಕ ಸಂಘಟನೆಗಳು ಹಾಗೂ ಸಂಗೊಳ್ಳಿ ರಾಯಣ್ಣ ಅಭಿಮಾನಿಗಳು ನೂರಾರು ಸಂಖ್ಯೆಯಲ್ಲಿ ಆಗಮಿಸಿ ಪ್ರತಿಭಟನೆ ನಡೆಸಿ ಕಿಡಿಗೇಡಿಗಳ ವಿರುದ್ಧ ಧಿಕ್ಕಾರ ಕೂಗಿದರು. ಪ್ರತಿಮೆ ಭಗ್ನಗೊಳಿಸಿದ ಆರೋಪವನ್ನು ಕೂಡಲೇ ಬಂಧಿಸಿ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ರಸ್ತೆಗೆ ಕುಳಿತು ಪ್ರತಿಭಟನೆ ನಡೆಸಿದರು.

ನೂರಾರು ಸಂಖ್ಯೆಯಲ್ಲಿ ಜನ ಸೇರುತ್ತಿದ್ದಂತೆ ಮುಂಜಾಗ್ರತಾ ಕ್ರಮವಾಗಿ ಹೆಚ್ಚಿನ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಆರೋಪಿಗಳನ್ನು 24 ಗಂಟೆಗಳೊಳಗೆ ಬಂಧಿಸಬೇಕು. ಇಲ್ಲದಿದ್ದರೆ ರಾಜ್ಯಾದ್ಯಂತ ಹೋರಾಟ ಮಾಡುವುದಾಗಿ ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದರು. ನಗರದ ಕೇಂದ್ರ ಭಾಗ, ಅದರಲ್ಲೂ ದಿನದ 24 ತಾಸುಗಳ ಕಾಲ ವಾಹನಗಳು ಸಂಚರಿಸುವ ಕೂಗಳತೆ ದೂರದಲ್ಲಿ ರೈಲು ಹಾಗೂ ಬಸ್ ನಿಲ್ದಾಣ ಹಾಗೂ ಪೊಲೀಸ್ ಠಾಣೆಗಳು ಇರುವ ಜಾಗದಲ್ಲೇ ಈ ರೀತಿಯಾಗಿದೆ. ಪೊಲೀಸರು ಸೂಕ್ತ ಭದ್ರತೆ ಒದಗಿಸುವಲ್ಲಿ ವಿಫಲರಾಗಿದ್ದಾರೆ. ರಾಯಣ್ಣ ಪ್ರತಿಮೆ ಭಗ್ನಗೊಳಿಸುವುದು ಕನ್ನಡಿಗರಿಗೆ ಅವಮಾನ ಮಾಡಿದಂತೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಸುಮಾರು 13 ಲಕ್ಷ ಮೌಲ್ಯದ ಪ್ರತಿಮೆಯನ್ನು 2010 ರಲ್ಲಿ ಅನಾವರಣಗೊಳಿಸಲಾಗಿತ್ತು. ಇದನ್ನು ಕದಿಯಲು ಯತ್ನಿಸಿರುವ ಖಡ್ಗದ ತೂಕವೇ 25 ಕೆಜಿಗಿಂತಲೂ ಹೆಚ್ಚಿದೆ. ಆದರೆ ಬಲಿಷ್ಠವಾಗಿ ನಿರ್ಮಿಸಿರುವುದರಿಂದ ಅದು ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ ಎಂದು ಕ್ರಾಂತಿವೀರ ಸಂಗೊಳ್ಳಿರಾಯಣ್ಣ ಪ್ರತಿಷ್ಠಾನದ ಅಧ್ಯಕ್ಷ ಕೃಷ್ಣಮೂರ್ತಿ ವಿವರಿಸಿದರು.

ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿದ್ದು ಶೀಘ್ರದಲ್ಲೇ ಬಂಧಿಸುವುದಾಗಿ ಪ್ರತಿಭಟನಾಕಾರರಿಗೆ ಪಶ್ಚಿಮ ವಿಭಾಗದ ಡಿಸಿಪಿ ಲಾಬೂರಾಮ್ ಭರವಸೆ ನೀಡಿದರು. ವೃತ್ತದಲ್ಲಿ ಸಂಚಾರ ಪೊಲೀಸರು ಅಳವಡಿಸಿರುವ ಕ್ಯಾಮರಾ ಇದೆ. ಆದರೆ ಪ್ರತಿಮೆಗೂ ಕ್ಯಾಮೆರಾಗು ಸಾಕಷ್ಟು ಅಂತರವಿದೆ. ಕ್ಯಾಮೆರಾದಲ್ಲಿ ದಾಖಲಾಗಿರುವ ವಿಡಿಯೋ ಪರಿಶೀಲಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com