
ಹುಬ್ಬಳ್ಳಿ: `ಉಪಲೋಕಾಯುಕ್ತ ಎಸ್.ಬಿ. ಮಜಗೆ ನಿವೃತ್ತಿಯ ಕಾಲಕ್ಕೆ ನನ್ನ ಮೇಲೆ ಯಾವ ಕಾರಣಕ್ಕೆ ಆರೋಪ ಮಾಡುತ್ತಿದ್ದಾರೆಂಬುದು ತಿಳಿಯುತ್ತಿಲ್ಲ. ನಾನು ಅಧಿಕಾರಕ್ಕೆ ಬಂದಾಗಿನಿಂದ ಲೋಕಾಯುಕ್ತಕ್ಕೆ ಬಂದಿರುವ ಎಲ್ಲ ಪತ್ರಗಳನ್ನು, ದಾಖಲೆಗಳನ್ನು ಜೋಪಾನವಾಗಿಟ್ಟಿದ್ದೇನೆ. ಮಜಗೆ ಸೇರಿದಂತೆ ಯಾರೇ ಬೇಕಾದರೂ ಕಡತಗಳನ್ನು ಪರಿಶೀಲಿಸಬಹುದು' ಎಂದು ಉಪಲೋಕಾಯುಕ್ತ ಸುಭಾಷ ಅಡಿ ಹೇಳಿದ್ದಾರೆ.
ಭಾನುವಾರ ಹುಬ್ಬಳ್ಳಿಯಲ್ಲಿ ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, `ನ್ಯಾಯಮೂರ್ತಿಯಾಗಿ ಮಾಧ್ಯಮದ ಮುಂದೆ ಹೋಗಿ ಮಾತನಾಡುವುದು ಸರಿಯಲ್ಲ. ಮಜಗೆಯವರು ಮಾಧ್ಯಮಕ್ಕೆ ಹೇಳಿಕೆ ನೀಡುವ ಬದಲು ನನ್ನ ಕಚೇರಿಗೆ ಬಂದು ಕಡತ ಪರಿಶೀಲನೆ ಮಾಡಲಿ' ಎಂದರು. ಡಾ. ಶೀಲಾ ಪಾಟೀಲ್ ಎಂಬವರ ಪ್ರಕರಣವನ್ನು ಮುಚ್ಚಿ ಹಾಕಿದ್ದೇನೆ ಎಂದು ಮಜಗೆ ಆರೋಪಿಸಿದ್ದಾರೆ.
ಇದಕ್ಕೆ ಸಂಬಂಧಪಟ್ಟ 2014ರ ಕಡತ ಮಾಯವಾಗಿದೆ ಎಂದು ದೂರಿದ್ದಾರೆ. ಒಂದು ವರ್ಷ ಕಾಲ ಮಜಗಿ ಯವರು ಸುಮ್ಮನೇ ಕುಳಿತುಕೊಂಡಿದ್ದು ಏಕೆ? ಇನ್ನೂ ಕಾಲ ಮಿಂಚಿಲ್ಲ, ಬೇಕಿದ್ದರೆ ಮಜಗಿ ಕಡತ ಪರಿಶೀಲಿಸಲಿ ಎಂದು ಸವಾಲು ಹಾಕಿದರು. ಲೋಕಾಯುಕ್ತ ಸಂಸ್ಥೆಯಲ್ಲಿ ಯಾರೇ ಭ್ರಷ್ಟಾಚಾರವೆಸಗಿದ ಮಾತ್ರಕ್ಕೆ ಸಂಸ್ಥೆಗೆ ಕೆಟ್ಟ ಹೆಸರು ಬರುವುದಿಲ್ಲ. ವ್ಯಕ್ತಿಗಿಂತ ಸಂಸ್ಥೆ ದೊಡ್ಡದು. ಲೋಕಾಯುಕ್ತ ಸಂಸ್ಥೆ ಯಾರೇ ಒಬ್ಬರಿಂದ ನಡೆಯುವುದೂ ಇಲ್ಲ. ಸಂಸ್ಥೆಯ ಹೆಸರು ಕೆಡಬಾರದು ಎನ್ನುವ ಕಳಕಳಿ ಅದರಡಿಯಲ್ಲಿ ಕೆಲಸ ಮಾಡುವ ಎಲ್ಲರಿಗೂ ಇರಬೇಕು. ಕೆಲಸದಲ್ಲಿ ಪಾರದರ್ಶಕತೆ ಕಾಯ್ದು ಕೊಳ್ಳಬೇಕು, ಪ್ರಾಮಾಣಿಕತೆ ತೋರ್ಪಡಿಸಬೇಕು. ಇದೀಗ ಕಪ್ಪು ಚುಕ್ಕೆ ಬಂದಿದ್ದು ವ್ಯಕ್ತಿಗೇ ಹೊರತು ಸಂಸ್ಥೆಗಲ್ಲ ಎಂದರು.
Advertisement