ರಾಯಣ್ಣನ ಖಡ್ಗ ಕದಿಯಲು ಯತ್ನಿಸಿದವ ಪೊಲೀಸ್ ಬಲೆಗೆ
ಬೆಂಗಳೂರು: ಮೆಜೆಸ್ಟಿಕ್ ಸಮೀಪದ ಸಂಗೊಳ್ಳಿ ರಾಯಣ್ಣ ಕಂಚಿನ ಪ್ರತಿಮೆಯಿಂದ ಖಡ್ಗ ಕಳವಿಗೆ ಯತ್ನಿಸಿದ ನೇಪಾಳ ಮೂಲದ ಬಸುದೇವ್ (26) ಎಂಬಾತನನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ.
ಮೆಜೆಸ್ಟಿಕ್ ಸಮೀಪದ ತುಳಸಿ ತೋಟದಲ್ಲಿ ಓಡಾಡುತ್ತಿದ್ದ ಆರೋಪಿಯನ್ನು ಕ್ಯಾಬ್ ಚಾಲಕರೊಬ್ಬರು ನೀಡಿದ ಮಾಹಿತಿ ಆಧರಿಸಿ ಭಾನುವಾರ ಬೆಳಗ್ಗೆ ಬಂಧಿಸಲಾಗಿದೆ. ಖಡ್ಗ ಕದಿಯಲು ಯತ್ನಿಸಿರುವ ಉದ್ದೇಶದ ಬಗ್ಗೆ ಆತ ಸ್ಪಷ್ಟವಾಗಿ ಹೇಳುತ್ತಿಲ್ಲ. ಆರೋಪಿ, ಮಾನಸಿಕವಾಗಿ ಸ್ಥಿಮಿತದಲ್ಲಿರುವವನಂತೆ ಕಂಡು ಬರುತ್ತಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶನಿವಾರ ಬೆಳಗ್ಗೆ 5.30ರ ಸುಮಾರಿಗೆ ಆರೋಪಿ, ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಖಡ್ಗ ಕಿತ್ತುಕೊಳ್ಳಲು ಪ್ರಯತ್ನಿಸುತ್ತಿದ್ದ. ಬಲವಾಗಿರುವ ಖಡ್ಗವನ್ನು ಜೋರಾಗಿ ಎಳೆದು, ಬಗ್ಗಿಸುತ್ತಿದ್ದ.
ಅದೇ ಸಮಯದಲ್ಲಿ ಮೆರು ಕ್ಯಾಬ್ ನಲ್ಲಿ ಕೆಲಸ ಮಾಡುವ ಚಾಲಕ ಹೊನ್ನೇಶ್ ಎಂಬುವರು ಓಕಳಿಪುರದಿಂದ ನಡೆದುಕೊಂಡು ಬಸ್ ಹಿಡಿಯಲು ಮೆಜೆಸ್ಟಿಕ್ ಕಡೆ ಬರುತ್ತಿದ್ದರು. ಪ್ರತಿಮೆ ಮುಂದೆ ನಡೆದುಕೊಂಡು ಹೋಗಿದ್ದಾರೆ. ಈ ವೇಳೆ ಆರೋಪಿ ಖಡ್ಗವನ್ನು ಬಗ್ಗಿಸಿರುವುದನ್ನು ಗಮನಿಸಿದ್ದಾರೆ. ಆದರೆ, ಪ್ರತಿಮೆ ಸಂಬಂಧಪಟ್ಟವರೇ ಏನೋ ಕೆಲಸ ಮಾಡುತ್ತಿರಬಹುದು ಎಂದು ಸುಮ್ಮನಾಗಿ ತಮ್ಮ ಪಾಡಿಗೆ ಹೋಗಿದ್ದಾರೆ.
ಆದರೆ, ರಾಯಣ್ಣ ಪ್ರತಿಮೆಯಿಂದ ಖಡ್ಗ ಕಳವಿಗೆ ಯತ್ನಿಸಿರುವ ಬಗ್ಗೆ ಭಾನುವಾರ ಬೆಳಗ್ಗೆ ದಿನಪತ್ರಿಕೆಗಳಲ್ಲಿ ವರದಿ ಗಮನಿಸಿದರು. ಕೂಡಲೇ, ಪೊಲೀಸ್ ನಿಯಂತ್ರಣ ಕೊಠಡಿಗೆ ಕರೆ ಮಾಡಿ ಕತ್ತಿನಲ್ಲಿ ಕೆಂಪು ಶಾಲು ಧರಿಸಿದ್ದ ವ್ಯಕ್ತಿ ಖಡ್ಗ ಬಾಗಿಸುತ್ತಿರುವುದನ್ನು ಗಮನಿಸಿದ್ದಾಗಿ ಮಾಹಿತಿ ನೀಡಿದ್ದರು.
ಈ ಹಿನ್ನೆಲೆಯಲ್ಲಿ ನಿಯಂತ್ರಣ ಕೊಠಡಿ ಸಿಬ್ಬಂದಿ ಕಾಟನ್ ಪೇಟೆ ಪೊಲೀಸರಿಗೆ ಮಾಹಿತಿ ವರ್ಗಾಯಿಸಿದ್ದರು. ಕೂಡಲೇ, ಹೊನ್ನೇಶ್ ಅವರನ್ನು ಪೊಲೀಸರು ಸಂಪರ್ಕಿಸಿದ್ದರು. ಈ ವೇಳೆ ಜೆಪಿ ನಗರದಲ್ಲಿ ಕೆಲಸದಲ್ಲಿದ್ದ ಹೊನ್ನೇಶ್, ಪೊಲೀಸರ ಕೋರಿಕೆ ಮೇರೆಗೆ ಠಾಣೆಗೆ ಆಗಮಿಸಿದ್ದರು.
ಆರೋಪಿ ಬಸುದೇವ್ ಮಾನಸಿಕ ಸ್ಥಿಮಿತದಲ್ಲಿರುವವನಂತೆ ಕಂಡುಬರುತ್ತಿಲ್ಲ. ಖಡ್ಗ ಕಿತ್ತುಕೊಳ್ಳಲು ಕಾರಣ ಏನೆಂಬುದನ್ನು ಸರಿಯಾಗಿ ಹೇಳುತ್ತಿಲ್ಲ. ಹೀಗಾಗಿ, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಅಲ್ಲದೇ. ನ್ಯಾಯಾಲಯದ ಮುಂದೆ ಹಾಜರುಪಡಿಸಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.
ಆರೋಪಿ ಬೇರೆ ಇದ್ದಾನೆ: ಆರೋಪಿಯನ್ನು ಪೊಲೀಸರು ಬಂಧಿಸಿರುವ ವ್ಯಕ್ತಿ ನಿಜವಾದ ಕೃತ್ಯ ಎಸಗಿದವನು ಅಲ್ಲ. ಒತ್ತಡಕ್ಕೆ ಮಣಿದು ಅಮಾಯಕ ವ್ಯಕ್ತಿಯನ್ನು ಬಂಧಿಸಿದ್ದಾರೆ. ನಿಜವಾದ ಆರೋಪಿ ಬೇರೆ ಆಗಿರುವ ಸಾಧ್ಯತೆಯಿದೆ. ಹಾಗಾಗಿ ಪೊಲೀಸರು ನಿಜ ಆರೋಪಿಯನ್ನು ಬಂಧಿಸಬೇಕು ಎಂದು ಕನ್ನಡ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ