ಹುಚ್ಚೆದ್ದು ಸುರಿದ ವರುಣ; ತುಂಬಿದ ನದಿಗಳು

ಹಲವು ದಿನಗಳ ಬಿಡುವು ಕೊಟ್ಟ ಮಳೆ ರಾಜ್ಯದ ಹಲವೆಡೆ ಭಾನುವಾರ ಮತ್ತೆ ಆರ್ಭಟಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಹುಚ್ಚೆದ್ದು ಸುರಿದಿದ್ದು, ಕೆಲವು ಕಡೆ ಪ್ರವಾಹ ಭೀತಿ ಎದುರಾಗಿದೆ...
ಹುಚ್ಚೆದ್ದು ಸುರಿದ ವರುಣ; ತುಂಬಿದ ನದಿಗಳು (ಸಾಂದರ್ಭಿಕ ಚಿತ್ರ)
ಹುಚ್ಚೆದ್ದು ಸುರಿದ ವರುಣ; ತುಂಬಿದ ನದಿಗಳು (ಸಾಂದರ್ಭಿಕ ಚಿತ್ರ)

ಬೆಂಗಳೂರು: ಹಲವು ದಿನಗಳ ಬಿಡುವು ಕೊಟ್ಟ ಮಳೆ ರಾಜ್ಯದ ಹಲವೆಡೆ ಭಾನುವಾರ ಮತ್ತೆ ಆರ್ಭಟಿಸಿದೆ. ದಕ್ಷಿಣ ಕನ್ನಡ, ಉಡುಪಿ, ಕೊಡಗು ಹಾಗೂ ಶಿವಮೊಗ್ಗದಲ್ಲಿ ಹುಚ್ಚೆದ್ದು ಸುರಿದಿದ್ದು, ಕೆಲವು ಕಡೆ ಪ್ರವಾಹ ಭೀತಿ ಎದುರಾಗಿದೆ.

ಮಡಿಕೇರಿಯ ಐದು ಕಡೆ ಗಂಜಿ ಕೇಂದ್ರ ತೆರೆಯಲಾಗಿದ್ದು, ಚಿಕ್ಕಮಗಳೂರಲ್ಲೂ ಭಾರಿ ಪ್ರಮಾಣದಲ್ಲಿ ವರ್ಷಧಾರೆಯಾಗಿದೆ. ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ತುಂತುರು ಮಳೆಯಾಗಿದೆ.
ದಕ್ಷಿಣ ಕನ್ನಡ, ಉಡುಪಿ ಹಾಗೂ ಕೊಡಗು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದ ಎರಡು ದಿನಗಳಿಂದ ಭಾರಿ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ಈ ಮೂರೂ ಜಿಲ್ಲೆಗಳ
ಪ್ರಮುಖ ನದಿಗಳು, ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಇದೇ ಪ್ರಮಾಣದಲ್ಲಿ ಮಳೆ ಮುಂದು ವರಿದರೆ ಪ್ರವಾಹ ಉಂಟಾಗಲಿದೆ. ಪ್ರಸಿದ್ಧ ಪುಣ್ಯಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯವನ್ನು ಸಂಪರ್ಕಿಸುವ ಕುಮಾರಧಾರಾ ಸೇತುವೆ ಶನಿವಾರ ರಾತ್ರಿಯಿಂದಲೇ ಜಲಾವೃತಗೊಂಡಿದ್ದು ಯಾತ್ರಿಗಳು ಪರದಾಡುವಂತಾಗಿದೆ.

ಬಂಟ್ವಾಳದ ರಾಷ್ಟ್ರೀಯ ಹೆದ್ದಾರಿ 75ರ ಕಲ್ಲಡ್ಕದ ನರಹರಿ ಪರ್ವತದ ಬಳಿ ಮರವೊಂದು ಉರುಳಿದ್ದರಿಂದ ಚಲಿಸುತ್ತಿದ್ದ ಬಸ್ ಹಾಗೂ ಕಾರು ಜಖಂಗೊಂಡಿದೆ. ಕಾರಿನಲ್ಲಿದ್ದ ನಾಲ್ವರಿಗೆ ಗಾಯಗಳಾಗಿದ್ದು, ಈ ಪೈಕಿ ಒಬ್ಬರ ಸ್ಥಿತಿ ಗಂಭೀರವಾಗಿದೆ. ಉಡುಪಿ ಜಿಲ್ಲಾದ್ಯಂತ ಭಾರಿ ಗಾಳಿ ಸಹಿತ ಮಳೆ ಸುರಿದಿದ್ದು, ಕುಂದಾಪುರ ತಾಲೂಕಿನ ಸೌಪರ್ಣಿಕಾ, ಚಕ್ರ ನದಿಗಳು, ಉಡುಪಿ ತಾಲೂಕಿನ ಉಪ್ಪಬರು, ಬಾರ್ಕೂರು, ಉದ್ಯಾವರ ನದಿಗಳು ತುಂಬಿ ಹರಿಯುತ್ತಿವೆ. ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳದಂತೆ ಮೀನುಗಾರರಿಗೆ ಹವಾಮಾನ ಇಲಾಖೆ ಮುನ್ನೆಚ್ಚೆರಿಕೆ ನೀಡಿದೆ.

ಕೊಡಗಿನಲ್ಲಿ ಭಾರಿ ಮಳೆಗೆ ಪ್ರವಾಹ ಭೀತಿ ಎದುರಾಗಿದ್ದು, ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ನೀರಿನ ಮಟ್ಟ ಏರುತ್ತಿದೆ. ಕೆಲವು ಕಡೆ ರಸ್ತೆ ಮತ್ತು ಕಾಲು ಸೇತುವೆಗಳು ಜಲಾವೃತಗೊಂಡಿವೆ. ಎತ್ತರದ ಪ್ರದೇಶಗಳಲ್ಲಿ ಮಳೆ ನೀರಿನ ತೇವಾಂಶ ಹೆಚ್ಚಾಗಿ ಮಣ್ಣು ಕುಸಿಯುತ್ತಿದ್ದು, ಈ ಭಾಗದ ಅನೇಕ ಮನೆಗಳು ಜಖಂಗೊಂಡಿವೆ.

ಶಿವಮೊಗ್ಗದಲ್ಲಿ ವ್ಯಾಪಕ: ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ವ್ಯಾಪಕವಾಗಿದ್ದು, 24 ಗಂಟೆಗಳಲ್ಲಿ ಬಿಡುವಿಲ್ಲದೆ ಸುರಿದಿದ್ದರ ಪರಿಣಾಮ ಜಲಾಶಯಗಳ ಒಳಹರಿವು ಹೆಚ್ಚಾಗಿದೆ. ಶೃಂಗೇರಿ, ಹೊರನಾಡು, ತೀರ್ಥಹಳ್ಳಿಯಲ್ಲಿ ಭಾರಿ ಮಳೆಯಾಗುತ್ತಿದ್ದು, ತುಂಗಾ ನದಿಯಲ್ಲಿ ಪ್ರವಾಹ ಮಟ್ಟ ಏರುತ್ತಿದೆ. ಭಾನುವಾರದ ಮಾಹಿತಿಯಂತೆ 50 ಸಾವಿರ ಕ್ಯುಸೆಕ್ ದಾಟಿದೆ. ತುಂಗಾ ಪ್ರವಾಹದಿಂದಾಗಿ ಮಂಡಗದ್ದೆ ಬಳಿ ರಸ್ತೆಯಲ್ಲಿ ನೀರು ಹರಿಯುತ್ತಿದ್ದು ಸಂಚಾರ ಅಸ್ತವ್ಯಸ್ತವಾಗಿತ್ತು. ಭದ್ರಾ ನದಿಯಲ್ಲಿಯೂ ಪ್ರವಾಹ ಹೆಚ್ಚಿದೆ. ಲಿಂಗನಮಕ್ಕಿಯಲ್ಲಿ ಜಲಾಶಯದ ಸಂಗ್ರಹ 1 ಅಡಿ ಹೆಚ್ಚಳವಾಗಿದ್ದು, ಜೋಗ ಮೈದುಂಬಿಕೊಳ್ಳುತ್ತಿದೆ. ತೀರ್ಥಹಳ್ಳಿಯಲ್ಲಿ ಶಾಲಾಕಾಲೇಜುಗಳಿಗೆ ರಜೆ ನೀಡಲಾಗಿದ್ದು, ಹೊಸನಗರ, ಸಾಗರ ಹಾಗೂ ಸೊರಬದಲ್ಲಿ ದಲ್ಲೂ ಭಾರಿ ಮಳೆಯಾಗಿದೆ.

ಚಿಕ್ಕಮಗಳೂರಲ್ಲೂ ಭಾರಿ ಮಳೆ: ಚಿಕ್ಕಮಗಳೂರು ಜಿಲ್ಲೆಯ ಬಯಲುಸೀಮೆಯಾದ ತರೀಕೆರೆ ಹಾಗೂ ಕಡೂರು ತಾಲೂಕುಗಳು ಹಾಗೂ ಜಿಲ್ಲೆಯ ಮಲೆನಾಡು ಭಾಗದ ತಾಲೂಕುಗಳಲ್ಲಿ ಬಿಡುವಿಲ್ಲದೆ ಮಳೆಯಾಗುತ್ತಿದೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳ ಪಾತ್ರದಲ್ಲಿ ಧಾರಾಕಾರವಾಗಿ ಸುರಿಯುತ್ತಿರುವುದರಿಂದ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ. ಇದೇ ಪ್ರಮಾಣದಲ್ಲಿ ಸುರಿದರೆ ನದಿ ಸಮೀಪದ ರಸ್ತೆಗಳ ಸಂಚಾರ ಕಡಿತಗೊಳ್ಳಲಿದೆ. ಮೂಡಿಗೆರೆ, ಶೃಂಗೇರಿ, ಕೊಪ್ಪ, ಎನ್. ಆರ್. ಪುರ ಹಾಗೂ ಚಿಕ್ಕಮಗಳೂರು ತಾಲೂಕುಗಳಲ್ಲಿ ಶನಿವಾರ ಆರಂಭಗೊಂಡ ಮಳೆ, ಭಾನುವಾರವೂ ಬಿಡುವಿಲ್ಲದೆ ಸುರಿಯಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com