ಬೆಂಗಳೂರು ಕ್ಲಬ್ ಸರ್ಕಾರದ ವಶಕ್ಕೆ

ಬೆಂಗಳೂರು ಕ್ಲಬ್‌ನ ಜಮೀನು ಮಾಲೀಕತ್ವ ವಿವಾದ ಅಂತ್ಯ ಕಂಡಿದ್ದು, ಇನ್ನು 7 ದಿನಗಳೊಳಗಾಗಿ 13 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ.
ಬೆಂಗಳೂರು ಕ್ಲಬ್
ಬೆಂಗಳೂರು ಕ್ಲಬ್
Updated on

ಬೆಂಗಳೂರು: ಬೆಂಗಳೂರು ಕ್ಲಬ್‌ನ ಜಮೀನು ಮಾಲೀಕತ್ವ ವಿವಾದ ಅಂತ್ಯ ಕಂಡಿದ್ದು, ಇನ್ನು 7 ದಿನಗಳೊಳಗಾಗಿ 13 ಎಕರೆ ಭೂಮಿಯನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆಯಲಿದೆ.

ನಗರದಲ್ಲೇ ಅತಿ ಹೆಚ್ಚು ಹಳೆಯ ಕ್ಲಬ್ ಎಂದು ಖ್ಯಾತಿ ಪಡೆದಿದ್ದ ಬೆಂಗಳೂರು ಕ್ಲಬ್ ಈ ಮೂಲಕ ತನ್ನ ಅಸ್ತಿತ್ವ ಕಳೆದುಕೊಳ್ಳಲಿದೆ. ವಿಧಾನಸಭೆಯ ಸದನ ಸಮಿತಿ ಸೂಚನೆಯಂತೆ ಸರ್ಕಾರದ ವಶಕ್ಕೆ ಭೂಮಿ ನೀಡುವಂತೆ ಉತ್ತರ ಉಪ ವಿಭಾಗಾಧಿಕಾರಿ ಮಹೇಶ್‌ಬಾಬು ಅವರು ಆದೇಶಿಸಿದ್ದಾರೆ. ಹೀಗಾಗಿ ಇನ್ನು ಒಂದು ವಾರದಲ್ಲಿ ಸಂಬಂಧಪಟ್ಟ ತಹಸೀಲ್ದಾರ್ ರೆಸಿಡೆನ್ಸಿ ರಸ್ತೆ ಬಳಿ ಇರುವ 13 ಎಕರೆ ಜಾಗವನ್ನು ವಶಕ್ಕೆ ಪಡೆದು ಸರ್ಕಾರಕ್ಕೆ ಒಪ್ಪಿಸಲಿದೆ.

ರಾಜ್ಯದಲ್ಲಿನ ಕ್ಲಬ್‌ಗಳ ಪರಿಶೀಲನೆಗೆ ಸಂಬಂಧಿಸಿದಂತೆ ಒಂದೂವರೆ ವರ್ಷಗಳ ಹಿಂದೆ ರಚನೆಯಾದ ವಿಧಾನಸಭೆ ಸದನ ಸಮಿತಿ ಸೂಚನೆ ಮೇರೆಗೆ ಈ ಆದೇಶ ಹೊರಡಿಸಲಾಗಿದೆ. ಜಮೀನು ಮಾಲೀಕತ್ವದ ಬಗ್ಗೆ ಸೂಕ್ತ ದಾಖಲೆ ಇಲ್ಲದಿರುವುದು ಹಾಗೂ 13 ಎಕರೆ ಸರ್ಕಾರಕ್ಕೆ ಸೇರಿರುವ ಕುರಿತ ದಾಖಲೆಗಳ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ.

ರೋಚಕ ಇತಿಹಾಸ: ಬ್ರಿಟಿಷ್ ಕಾಲದಲ್ಲಿ ಆರಂಭವಾಗಿದ್ದ ಕ್ಲಬ್ ನಂತರ ಮೈಸೂರು ಒಡೆಯರ ವಶಕ್ಕೆ ಸೇರಿತ್ತು. ಮೈಸೂರು ಅರಸರ ಆಳ್ವಿಕೆ ಹೋಗಿ ಸರ್ಕಾರ ರಚನೆಯಾದ ನಂತರ, ಕ್ಲಬ್ ವಶಕ್ಕೆ ಸರ್ಕಾರ ನಿರ್ಧರಿಸಿತ್ತು. ಆದರೆ, ಬೆಂಗಳೂರು ಕ್ಲಬ್ ಖಾಸಗಿ ಆಸ್ತಿ ಎಂದು ಕೆಲವು ಉದ್ಯಮಿಗಳು ವಾದಿಸಿದ್ದರು. ನಂತರ ಸರ್ಕಾರದ ವಶಕ್ಕೆ ಹೋಗದೆ ಖಾಸಗಿ ಕ್ಲಬ್ ಮಾದರಿಯಲ್ಲಿ ಉಳಿದಿತ್ತು.

ಕ್ಲಬ್‌ನ ನೀತಿ ನಿಯಮಗಳು ಹಲವಾರು ವಿವಾದಗಳನ್ನು ಹುಟ್ಟಿಸಿದ್ದವು. ಜನಪ್ರತಿ ನಿಧಿಗಳು ಹಾಗೂ ಹಿರಿಯ ಅಧಿಕಾರಿಗಳಿಗೂ ಶಿಸ್ತು, ವಸ್ತ್ರಸಂಹಿತೆ ಕಾರಣವಾಗಿ ಪ್ರವೇಶಕ್ಕೆ ಅಡ್ಡಿಪಡಿಸಿದ ಘಟನೆಗಳು ನಡೆದಿದ್ದವು. ಇತ್ತೀಚಿಗೆ ಅಬಕಾರಿ ಇಲಾಖೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿದಾಗ, ನಿಯಮ ಮೀರಿ ಅಲ್ಕೋಹಾಲ್ ಮಾರಾಟ ಮಾಡುತ್ತಿರುವುದು ಪತ್ತೆಯಾಗಿತ್ತು. ಹೀಗಾಗಿ ಒಂದು ತಿಂಗಳ ಕಾಲ ಆಲ್ಕೋಹಾಲ್ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು.

ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಕ್ಲಬ್‌ಗಳ ವಿವಿರ ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ವರ್ಷದ ಹಿಂದೆ ಸದನ ಸಮಿತಿ ರಚಿಸಲಾಯಿತು. ಕ್ಲಬ್‌ಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಒದಗಿಸುವಂತೆ ಮಾಲೀಕರಿಗೆ ಸೂಚಿಸಲಾಗಿತ್ತು.

19ನೇ ಶತಮಾನದಿಂದ ಆರಂಭವಾಗಿ ಇಲ್ಲಿಯವರೆಗಿನ ಹಳೆಯ ದಾಖಲೆಗಳನ್ನು ಹುಡುಕಿ ತಂದು ಇತ್ತೀಚೆಗೆಷ್ಟೇ ಸದನ ಸಮಿತಿಗೆ ನೀಡಲಾಗಿತ್ತು. ಆದರೆ ಈ ದಾಖಲೆಗಳು 13 ಎಕರೆ ಭೂಮಿ ಕ್ಲಬ್‌ಗೆ ಸೇರಿದೆ ಎಂಬುದನ್ನು ಸಾಬೀತುಪಡಿಸುವಲ್ಲಿ ವಿಫಲವಾಗಿವೆ.

ಅತಿ ಹಳೆಯ ಕ್ಲಬ್: 1868ರಲ್ಲಿ ಆರಂಭವಾದ ಬೆಂಗಳೂರು ಕ್ಲಬ್ ನಗರದ ಅತಿ ಹಳೆಯ ಕ್ಲಬ್ ಎಂಬ ಹೆಸರಿಗೆ ಪಾತ್ರವಾಗಿದೆ. ಇಂಗ್ಲೆಂಡ್ ಪ್ರಧಾನಿಯಾಗಿದ್ದ ವಿನ್ಸ್‌ಟನ್ ಚರ್ಚಿಲ್ ಹಾಗೂ ಮೈಸೂರು ಮಹಾರಾಜರು ಕ್ಲಬ್‌ನ ಸದಸ್ಯರಾಗಿದ್ದರು. ಮೊದಲಿಗೆ ಬ್ರಿಟಿಷರು, ಸ್ವಾತಂತ್ರ್ಯಾ ನಂತರ ಭಾರತೀಯ ಸೇನೆ ವಿವಿಧ ಉದ್ದೇಶಗಳಿಗೆ ಕ್ಲಬ್ ಬಳಸಿಕೊಂಡಿತ್ತು. ನಂತರ ಇದು ಸಾರ್ವಜನಿಕರ ಮನೋರಂಜನೆಗಾಗಿ ಬಳಕೆಯಾಗತೊಡಗಿತ್ತು. ರೆಸ್ಟೋರೆಂಟ್, ಬಾರ್, ಗ್ರಂಥಾಲಯ, ಬ್ಯಾಡ್ಮಿಂಟನ್, ಸ್ಕ್ವಾಶ್, ಬಿಲಿಯರ್ಡ್ಸ್, ಟೇಬಲ್ ಟೆನಿಸ್, ಸ್ವಿಮ್ಮಿಂಗ್ ಪೂಲ್, ಜಿಮ್ನಾಶಿಯಂ ಸೇರಿದಂತೆ ಹಲವು ಉತ್ತಮ ಸೌಲಭ್ಯಗಳು ಕ್ಲಬ್‌ನಲ್ಲಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com