ಬಿಂಗಿಪುರದಲ್ಲಿ ಎಂಟು ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ

ಬಿಂಗಿಪುರದ ಕಸ ಘಟಕಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್, ನಗರೋತ್ಥಾನ ಯೋಜನೆ ಅಡಿ ರು.8 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ...
ಬಿಬಿಎಂಪಿ ಕಚೇರಿ
ಬಿಬಿಎಂಪಿ ಕಚೇರಿ

ಬೆಂಗಳೂರು: ಬಿಂಗಿಪುರದ ಕಸ ಘಟಕಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಿಬಿಎಂಪಿ ಆಡಳಿತಾಧಿಕಾರಿ ಟಿ.ಎಂ.ವಿಜಯಭಾಸ್ಕರ್, ನಗರೋತ್ಥಾನ ಯೋಜನೆ ಅಡಿ ರು.8 ಕೋಟಿ ಮೊತ್ತದ ಅಭಿವೃದ್ಧಿ ಕಾಮಗಾರಿ ಆರಂಭಿಸಲು ಸೂಚನೆ ನೀಡಿದ್ದಾರೆ.

ಬಿಂಗಿಪುರದ ಕಸ ಘಟಕಕ್ಕೆ ತೆರಳುತ್ತಿದ್ದ ಕೆಲವು ಲಾರಿಗಳಿಗೆ ಮಂಗಳವಾರ ರಾತ್ರಿ ಗ್ರಾಮಸ್ಥರು ತಡೆ ಒಡ್ಡಿದ್ದರು. ಗ್ರಾಮದಲ್ಲಿ ಬಿಬಿಎಂಪಿ ಕಸ ಸುರಿಯುತ್ತಿದೆಯೇ ಹೊರತು ಗ್ರಾಮದ ಮೂಲಸೌಕರ್ಯಗಳ ಬೇಡಿಕೆ ಈಡೇರಿಸಿಲ್ಲ. ಗ್ರಾಮದ ಸಮಸ್ಯೆ ಪರಿಹರಿಸುವವರೆಗೂ ಲಾರಿಗಳನ್ನು ಒಳಕ್ಕೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರೊಂದಿಗೆ ಚರ್ಚೆ ನಡೆಸಿದ ವಿಜಯಭಾಸ್ಕರ್, ಕುಡಿಯುವ ನೀರು, ಪ್ರಾಥಮಿಕ ಆರೋಗ್ಯ, ಕೆರೆಗೆ ತಡೆಗೋಡೆ ಸೇರಿದಂತೆ ಗ್ರಾಮದ ಹಲವು ಸಮಸ್ಯೆ ಪರಿಹರಿಸುವುದಾಗಿ ಭರವಸೆ ನೀಡಿದರು.

ನಗರೋತ್ಥಾನದ ಅಡಿಯಲ್ಲಿ ರಾಜ್ಯ ಸರ್ಕಾರ ರು.8 ಕೋಟಿ ಬಿಡುಗಡೆ ಮಾಡಿದ್ದು, ಪಂಚಾಯಿತಿ ಮೂಲಕ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲಾಗುವುದು. ಜಲಮಂಡಳಿಯು ರು.1.85 ಕೋಟಿ ಅಂದಾಜು ವೆಚ್ಚದಲ್ಲಿ ಎಲೆಕ್ಟ್ರಾನಿಕ್ ಸಿಟಿ ಮೂಲಕ ಹಾದುಹೋಗುವ ಕುಡಿಯುವ ನೀರಿನ ಯೋಜನೆ ಕೈಗೊಂಡಿದ್ದು, ಇದನ್ನು ಗ್ರಾಮದ ಕಡೆಗೂ ವರ್ಗಾಯಿಸಿ, ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದರು.

ಕಾವೇರಿ ನೀರು: ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯಭಾಸ್ಕರ್, 4 ವರ್ಷಗಳಿಂದ ಬಿಂಗಿಪುರ ಘಟಕಕ್ಕೆ ಕಸ ವಿಲೇವಾರಿಯಾಗುತ್ತಿದೆ. ಇಲ್ಲಿನ ಬಿಂಗಿಪುರ, ಬೆಟ್ಟದಾಸನಪುರ ಹಾಗೂ ಪೋಡೂರು ಗ್ರಾಮಗಳ ಜನರಿಗೆ ಕುಡಿಯುವ ನೀರು, ಆರೋಗ್ಯ ಸೌಲಭ್ಯ ದೊರೆತಿಲ್ಲ. ಇದುವರೆಗೆ ಟ್ಯಾಂಕರ್ ಮೂಲಕ ಬೋರ್ ವೆಲ್ ನೀರು ಪೂರೈಸಲಾಗುತ್ತಿತ್ತು. ಗ್ರಾಮಸ್ಥರು ಕಾವೇರಿ ನೀರಿಗೆ ಬೇಡಿಕೆ ಇಟ್ಟಿದ್ದು, ಟ್ಯಾಂಕರ್‍ನಿಂದ ಕಾವೇರಿ ನೀರು ನೀಡುವುದಾಗಿ ತಿಳಿಸಲಾಗಿದೆ. ಸೊಳ್ಳೆ, ನೊಣ ಕಾಟ ಹೆಚ್ಚಿರುವುದರಿಂದ ಪ್ರತಿ ಬಾರಿ 500 ಸೊಳ್ಳೆಪರದೆ ನೀಡಲಾಗುತ್ತಿತ್ತು. ಇನ್ನು ಮುಂದೆ 1ಸಾವಿರ ಪರದೆ ನೀಡಲಾಗುವುದು. ಆ.1 ಕ್ಕೆ ಆರೋಗ್ಯ ಶಿಬಿರ ಏರ್ಪಡಿಸಿದ್ದು, ಚರ್ಮರೋಗ ತಜ್ಞರು, ಮಕ್ಕಳ ತಜ್ಞರನ್ನು ಕರೆಸಿ ತಪಾಸಣೆ ಮಾಡಲಾಗುವುದು ಎಂದರು. ಗ್ರಾಮಗಳಿಗೆ ಹೊಂದಿಕೊಂಡಂತೆ ಮೂರು ಕೆರೆಗಳಿದ್ದು, ಕಸದಿಂದ ಉತ್ಪತ್ತಿಯಾಗುವ ದ್ರವ ಕೆರೆಗೆ ಸೇರುತ್ತಿದೆ. ಇದು ಕೆರೆಗೆ ಸೇರದಂತೆ ತಡೆಗೋಡೆ ನಿರ್ಮಿಸುವ ಯೋಜನೆಗೆ ಚಾಲನೆ ನೀಡಲಾಗಿದೆ. ಕೆಲವೆಡೆ ಕ್ವಾರಿಯಲ್ಲಿ ಕಸದ ದ್ರವ ಸಂಗ್ರಹವಾಗುತ್ತಿದ್ದು, ಮದ್ದು ಹೊಡೆಸಿ ಶುದ್ಧೀಕರಿಸಲು ತೀರ್ಮಾನಿಸಲಾಗಿದೆ. ಹೊಸ ಕಸ ಸಂಸ್ಕರಣಾ ಘಟಕಗಳು 1 ಅಥವಾ 2 ತಿಂಗಳಲ್ಲಿ ಆರಂಭವಾದ ನಂತರ ಘಟಕಕ್ಕೆ ಕಸ ವಿಲೇವಾರಿ ಸ್ಥಗಿತಗೊಳಿಸಲಾಗುವುದು ಎಂದು ತಿಳಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com