29ರೊಳಗೆ ಲೋಕಾ ಖಾಲಿ ಹುದ್ದೆ ಭರ್ತಿ ಮಾಡಿ: ಹೈಕೋರ್ಟ್

ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಮುಂದಿನ ಬುಧವಾರದ (ಜು.29) ಒಳಗಾಗಿ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ...
ಹೈ ಕೋರ್ಟ್
ಹೈ ಕೋರ್ಟ್

ಬೆಂಗಳೂರು: ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇರೆಗೆ ಮುಂದಿನ ಬುಧವಾರದ (ಜು.29) ಒಳಗಾಗಿ ಭರ್ತಿ ಮಾಡುವಂತೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಆದೇಶಿಸಿದೆ.

ಲೋಕಾಯುಕ್ತದಲ್ಲಿ ಪ್ರಕರಣ ದಾಖಲಾಗಿ 18 ತಿಂಗಳಾದರೂ ತನಿಖೆ ಪೂರ್ಣಗೊಳಿಸದ ಹಿನ್ನೆಲೆಯಲ್ಲಿ ಮಂಡ್ಯ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಡಾ.ವಿ.ಎಲ್ ನಂದೀಶ್ ಹೈ ಕೋರ್ಟ್ ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಎ.ಎನ್.ವೇಣುಗೋಪಾಲ ಗೌಡ ಅವರಿದ್ದ ಪೀಠ, ಲೋಕಾಯುಕ್ತ ಪೊಲೀಸ್ ಇಲಾಖೆಯಲ್ಲಿರುವ ಹುದ್ದೆ ಶೀಘ್ರ ಭರ್ತಿ ಮಾಡಿ, ನಿಮಗಾಗದಿದ್ದಲ್ಲಿ ಅಧಿಕಾರಿಗಳ ಪಟ್ಟಿ ನೀಡಿದರೆ ನ್ಯಾಯಲಯವೇ ಆ ಹುದ್ದೆ ಭರ್ತಿ ಮಾಡಲು ಮುಂದಾಗುವುದಾಗಿ ಸರ್ಕಾರಕ್ಕೆ ಬಿಸಿ ಮುಟ್ಟಿಸಿದೆ.

ಸಂಸ್ಥೆಯಲ್ಲಿ ಕೈಕುಲುಕುವ ಕೆಲಸ ಕೇವಲ ಮುಂಭಾಗದಲ್ಲಿ ಮಾತ್ರವಲ್ಲದೇ ಬೆನ್ನ ಹಿಂದೆಯೂ ಕ್ರಿಯಾಶೀಲವಾಗಿ ನಡೆಯುತ್ತಿದೆ ಎಂದು ನ್ಯಾಯಮೂರ್ತಿಗಳು ಕುಟುಕಿದರು. ಸಂಸ್ಥೆಯನ್ನು ಸುಲಭವಾಗಿ ಕೆಡವಬಹುದು. ಕಟ್ಟಿ ಬೆಳಸುವುದು ಕಷ್ಟ. ಸಂಸ್ಥೆ ಮೇಲೆ ಸಾರ್ವಜನಿಕರಿಗೆ ನಂಬಿಕೆ ಬೆಳಸಬೇಕಾದಲ್ಲಿ ದಶಕಗಳೇ ಬೇಕಾದೀತು . ಈ ಮಾತನ್ನು ಹೇಳಲು ನನಗೂ ನೋವಾಗುತ್ತದೆ. ಜನರು ಸಮೀಪದಲ್ಲಿರುವ ಕಬ್ಬನ್ ಪಾರ್ಕ್‍ನಲ್ಲಿ ಜೀವನ ನಡೆಸುತ್ತಾರೆ. ಆದರೆ, ಸ್ಮಶಾನದಲ್ಲಿ ಬದುಕಲು ಇಷ್ಟಪಡುವುದಿಲ್ಲ ಎಂದು ಹೇಳುವ ಮೂಲಕ ಏಕಸದಸ್ಯ ಪೀಠ ಸಂಸ್ಥೆಗೆ ಬಿಸಿ ಮುಟ್ಟಿಸಿದೆ.

ಲೋಕಾಯುಕ್ತದಲ್ಲಿ ದಾಖಲಾಗುವ ಪ್ರಕರಣಗಳ ತನಿಖೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿರು ವುದರಿಂದ ಸಾಕಷ್ಟು ಪ್ರಕರಣಗಳು ವಜಾ ಗೊಳ್ಳುತ್ತಿದೆ. ಇದೇ ಹೈಕೋರ್ಟ್‍ನಲ್ಲಿ ಪ್ರಕರಣ ರದ್ದು ಕೋರಿ ದಾಖಲಾಗುವ ಅರ್ಜಿಗೆ ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸುತ್ತದೆ. ಹೈಕೋರ್ಟ್ ಮಧ್ಯಂತರ ಆದೇಶ ಹೊರಡಿಸಿ ವರ್ಷಗಳೇ ಕಳೆದರು ಅದನ್ನು ತೆರವುಗೊಳಿಸುವ ಕಾರ್ಯಕ್ಕೆ ಲೋಕಾಯುಕ್ತ ಸಂಸ್ಥೆ ಮುಂದೆ ಬರುವುದೇ ಇಲ್ಲ. ಸಂಸ್ಥೆಯಲ್ಲಿನ ಕಾನೂನು ಘಟಕ ಏನು ಮಾಡುತ್ತಿದೆ? ಇದರಿಂದ ಸಮಾಜಕ್ಕೆ ಯಾವ ರೀತಿ ಸಂದೇಶ ರವಾನೆಯಾಗುತ್ತಿದೆ ಎಂಬುದು ತಿಳಿದಿದೆಯೇ ಎಂದು ಪೀಠ ಲೋಕಾಯುಕ್ತ ಪರ ವಕೀಲರನ್ನು ಖಾರವಾಗಿ ಪ್ರಶ್ನಿಸಿತು.

ವಿಚಾರಣೆ ವೇಳೆ ಲೋಕಾಯುಕ್ತ ಪರ ವಕೀಲ ವೆಂಕಟೇಶ್ ಪಿ.ದಳವಾಯಿ ವಾದ ಮಂಡಿಸಿ, ಸಿಬಿಐ ಕೈಪಿಡಿಯಂತೆ ಲೋಕಾಯುಕ್ತಕ್ಕೂ ಕೈಪಿಡಿ ಮಾಡುವ ಕುರಿತು ನಾಲ್ಕು ವರ್ಷದ ಹಿಂದೆಯೇ ಕರಡು ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಆದರೆ, ಈ ವರೆಗೂ ಸರ್ಕಾರದಿಂದ ಯಾವುದೇ ರೀತಿ ಪ್ರತಿಕ್ರಿಯೆ ಬಂದಿಲ್ಲ. ಅಲ್ಲದೇ ಸಂಸ್ಥೆಯಲ್ಲಿ ಶೇ. 40ರಷ್ಟು ಹುದ್ದೆಗಳು ಖಾಲಿ ಇರುವ ಕಾರಣ ತನಿಖಾಧಿಕಾರಿಗಳು ತನಿಖೆಯನ್ನು ಪೂರ್ಣ ಗೊಳಿಸಲು ಸಾಧ್ಯವಾಗುತ್ತಿಲ್ಲ ಎಂದರು.

ಆದೇಶವೇನು?:
ತನಿಖೆ ವಿಚಾರದಲ್ಲಿ ಸಿಬಿಐನಲ್ಲಿನ ಕೈಪಿಡಿ ಲೋಕಾಯುಕ್ತಕ್ಕೂ ಅವಶ್ಯವಿದೆ. ಲೋಕಾ ಯುಕ್ತ ಸಂಸ್ಥೆಯಲ್ಲಿ ತನಿಖೆಗೆ ಸಂಬಂದಿಸಿದಂತೆ ಕೈಪಿಡಿ ಇಲ್ಲದ ಕಾರಣ ತನಿಖೆ ಪೂರ್ಣಗೊಳಿಸಲು ವಿಳಂಬವಾಗುತ್ತಿದೆ. ಈ ಮಧ್ಯೆ ಸಂಸ್ಥೆಯಲ್ಲಿ ಹುದ್ದೆಗಳು ಖಾಲಿ ಇರುವ ಪರಿಣಾಮ ಪರಿಣಾಮ ಕಾರಿಯಾಗಿ ತನಿಖೆ ನಡೆಸಲು ಅಡ್ಡಿಯಾಗುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಶೀಘ್ರ ಹುದ್ದೆಗಳನ್ನು ಆದ್ಯತೆ ಮೇರೆಗೆ ಮುಂದಿನ ವಿಚಾರಣೆ ಒಳಗಾಗಿ ಹುದ್ದೆ ಭರ್ತಿ ಮಾಡಿರುವ ಕುರಿತು ಮಾಹಿತಿ ನೀಡಬೇಕು. ಈ ರೀತಿ ಪೂರ್ಣಪ್ರಮಾಣದ ಸಿಬ್ಬಂದಿ ಇದ್ದರೆ ಮಾತ್ರ ಲೋಕಾಯುಕ್ತ ಇಲಾಖೆ ಸದೃಢವಾಗಲು ಸಾಧ್ಯ ಎಂದು ಆದೇಶಿಸಿ ವಿಚಾರಣೆ ಜು.29ಕ್ಕೆ ಮುಂದೂಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com