ಬೆಂಗಳೂರು ರೈಲು ನಿಲ್ದಾಣಕ್ಕೆ ಪ್ರತ್ಯೇಕ ಆ್ಯಪ್

ದೇಶದಲ್ಲೇ ಪ್ರಥಮ ಬಾರಿಗೆ ರೈಲ್ವೆ ನಿಲ್ದಾಣಕ್ಕೆಂದೇ ಪ್ರತ್ಯೇಕ ಆ್ಯಪ್ ಪಡೆದುಕೊಂಡ ಕೀರ್ತಿ...
ಬೆಂಗಳೂರು ರೈಲ್ವೆ ನಿಲ್ದಾಣಕ್ಕಾಗಿ ನಿರ್ಮಿಸಿರುವ ಪ್ರತ್ಯೇಕ ಆ್ಯಪ್‍ಗೆ ಹೆಚ್ಚುವರಿ ಮಂಡಲ ರೈಲ್ವೆ ವ್ಯವಸ್ಥಾಪಕಿ ಸುನಂದ ಅರುಲ್ ಚಾಲನೆ ನೀಡಿದರು
ಬೆಂಗಳೂರು ರೈಲ್ವೆ ನಿಲ್ದಾಣಕ್ಕಾಗಿ ನಿರ್ಮಿಸಿರುವ ಪ್ರತ್ಯೇಕ ಆ್ಯಪ್‍ಗೆ ಹೆಚ್ಚುವರಿ ಮಂಡಲ ರೈಲ್ವೆ ವ್ಯವಸ್ಥಾಪಕಿ ಸುನಂದ ಅರುಲ್ ಚಾಲನೆ ನೀಡಿದರು

ಬೆಂಗಳೂರು:ದೇಶದಲ್ಲೇ ಪ್ರಥಮ ಬಾರಿಗೆ ರೈಲ್ವೆ ನಿಲ್ದಾಣಕ್ಕೆಂದೇ ಪ್ರತ್ಯೇಕ ಆ್ಯಪ್ ಪಡೆದುಕೊಂಡ ಕೀರ್ತಿ ಬೆಂಗಳೂರು ರೈಲು ನಿಲ್ದಾಣಕ್ಕೆ ದಕ್ಕಿದೆ.ಅಲ್ಲದೇ, ನಿಲ್ದಾಣಕ್ಕೆಂದೇ ಪ್ರತ್ಯೇಕ ವೆಬ್‍ಸೈಟ್ ಕೂಡ ಉದ್ಘಾಟನೆಯಾಗಿದೆ.

ಬೆಂಗಳೂರು ವಿಭಾಗದ ಹಿರಿಯ ಮಂಡಲ ವಾಣಿಜ್ಯ ವ್ಯವಸ್ಥಾಪಕ ಡಾ. ಅನೂಪ್ ದಯಾನಂದ್ ಸಾಧು ಗುರುವಾರ ನಗರ ರೈಲ್ವೆ ನಿಲ್ದಾಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ವಿವರಗಳನ್ನು ಪ್ರಕಟಿಸಿದರು.

ಬೆಂಗಳೂರು ಕೇಂದ್ರ ರೈಲ್ವೆ ನಿಲ್ದಾಣಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿ ಈ ಆ್ಯಪ್ ಹಾಗೂ ವೆಬ್‍ಸೈಟ್ ಮೂಲಕ ಸಾರ್ವಜನಿಕರಿಗೆ ದಕ್ಕಿದಂತಾಗಿದೆ. ಪ್ರತಿದಿನ 1 ರಿಂದ 1.5 ಲಕ್ಷ ಮಂದಿ ಬೆಂಗಳೂರು ಮುಖ್ಯ ರೈಲ್ವೆ ನಿಲ್ದಾಣದ ವೆಬ್‍ಸೈಟ್ ನೋಡುತ್ತಾರೆ. ಪ್ರವಾಸಿಗರು ಹಾಗೂ ಪ್ರಥಮ ಬಾರಿಗೆ ನಿಲ್ದಾಣಕ್ಕೆ ಬರುವವರಿಗೆ ಯಾವ ಸೌಲಭ್ಯಗಳು ದೊರೆಯುತ್ತದೆ ಎಂಬ ಸಮಗ್ರ ಮಾಹಿತಿ ಇಲ್ಲಿ ದೊರೆಯುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ, ವೃದ್ಧರು ಹಾಗೂ ವಿಕಲಚೇತನರ ಸಹಾಯಕ್ಕೆ ಸಂಚಾರಿ ವಾಹನ ಸೇವೆಯನ್ನೂ ಉದ್ಘಾಟಿಸಲಾಯಿತು. ನಡೆಯಲು ಸಾಧ್ಯವಿಲ್ಲದವರಿಗೆ ಈ ಉಚಿತ ವಾಹನ ಸೇವೆ ದೊರೆಯುತ್ತದೆ ಎಂದರು ಡಾ. ಅನೂಪ್ ಸಾಧು. ಹೆಚ್ಚುವರಿ ಮಂಡಲ ರೈಲ್ವೆ ವ್ಯವಸ್ಥಾಪಕಿ ಸುನಂದ ಅರುಲ್ ಉಪಸ್ಥಿತರಿದ್ದರು.

ನಿಲ್ದಾಣಕ್ಕೇ ವೆಬ್‍ಸೈಟ್: ಬೆಂಗಳೂರು ರೈಲ್ವೆ ವಿಭಾಗದಿಂದ ಅಭಿವೃದ್ಧಿಪಡಿಸಲಾಗಿರುವ ವೆಬ್‍ಸೈಟಿದು ( bengalururailwaystation.com ) ಇದರಲ್ಲಿ ರೈಲ್ವೆ ನಿಲ್ದಾಣದಲ್ಲಿ ಪಾರ್ಕಿಂಗ್ ವ್ಯವಸ್ಥೆ, ವಿಶ್ರಾಂತಿ ಗೃಹ, ಟಿಕೆಟ್ ನೀಡುವ ವ್ಯವಸ್ಥೆ, ಮಹಿಳಾ ಸಹಾಯವಾಣಿ, ಸುರಕ್ಷತೆ ಸಹಾಯವಾಣಿಯ ದೂರವಾಣಿ ನಂಬರ್ ಲಭ್ಯವಾಗುತ್ತದೆ. ರೈಲು ಬರುವ ವೇಳೆ ಹಾಗೂ ಹೊರಡುವ ವೇಳೆ ಜಾಲತಾಣದಲ್ಲಿ ನಿರಂತರ ಮಾಹಿತಿ ಕನ್ನಡ, ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ದೊರೆಯುತ್ತಿರುತ್ತದೆ. ಅಂಗವಿಕಲರಿಗೆ ದೊರೆಯುವ ವಿಶೇಷ ಸೌಕರ್ಯ ಹಾಗೂ ಎಟಿಎಂ ಕೇಂದ್ರಗಳ ಮಾಹಿತಿಯೂ ದೊರೆಯುತ್ತದೆ.

ಏನೇನು ಮಾಹಿತಿ?

ಟಿಕೆಟ್ ಪಡೆಯುವ ವ್ಯವಸ್ಥೆ, ಪಾರ್ಕಿಂಗ್ ಮತ್ತು ಭರಿಸಬೇಕಾದ ಶುಲ್ಕ, ವೈದ್ಯಕೀಯ ಸೌಲಭ್ಯ, ಆಹಾರದ ಲಭ್ಯತೆ, ವಿಶ್ರಾಂತಿ ಕೊಠಡಿಗಳ ಆನ್‍ಲೈನ್ ಬುಕಿಂಗ್, ಪುಸ್ತಕ ಮಳಿಗೆ, ಡಾಟಾ ಕನೆಕ್ಟಿವಿಟಿ, ಆರ್ಟ್ ಗ್ಯಾಲರಿ, ಪ್ರವಾಸಿಗರಿಗೆ ಲಭ್ಯವಿರುವ ಸಹಾಯ, ಟ್ಯಾಕ್ಸಿ ಕಾಯ್ದಿರಿಸುವ ವ್ಯವಸ್ಥೆ,ಆನ್ ಲೈನ್ ಬುಕಿಂಗ್ ಮಾಹಿತಿ, ಸಾರಿಗೆ ವ್ಯವಸ್ಥೆ, ದೂರು ಕೇಂದ್ರ ಹಾಗೂ ಸಲಹಾ ಕೇಂದ್ರಗಳು ಮಾಹಿತಿ ಒಳಗೊಂಡಂತೆ ಸಂಪೂರ್ಣ ಮಾಹಿತಿ ಮೊಬೈಲ್ ಆ್ಯಪ್‍ನಲ್ಲಿ ದೊರೆಯುತ್ತದೆ. ಜತೆಗೆ ರೈಲ್ವೆ ಸಿಬ್ಬಂದಿ ರೈಲುಗಳ ಮಾಹಿತಿಯನ್ನು ನಿರಂತರ ಟ್ವಿಟ್ಟರ್ ಮೂಲಕ ಟ್ವೀಟ್ ಮಾಡುತ್ತಾರೆ.

ಆಟೋಮ್ಯಾಟಿಕ್ ಟಿಕೆಟ್ ವೆಂಡಿಂಗ್‍ನ (ಸ್ಮಾರ್ಟ್ ಕಾರ್ಡ್ ಮೂಲಕ ಟಿಕೇಟ್ ಖರೀದಿ) 58 ಕೇಂದ್ರಗಳನ್ನು ಇನ್ನು ಒಂದು ತಿಂಗಳಲ್ಲಿ ಬೆಂಗಳೂರು ವಿಭಾಗದಲ್ಲಿ ಆರಂಭಿಸಲಾಗುವುದು. ಈ ಪೈಕಿ 13 ಕೇಂದ್ರಗಳನ್ನು ಬೆಂಗಳೂರು ನಗರ ಹಾಗೂ 10 ಕೇಂದ್ರಗಳನ್ನು ಕೇಂದ್ರ ರೈಲ್ವೆ ನಿಲ್ದಾಣದಲ್ಲಿ ಸ್ಥಾಪಿಸುವ ಚಿಂತನೆ ಇದೆ.
ಡಾ. ಅನೂಪ್ ದಯಾನಂದ್ ಸಾಧು,
ಬೆಂಗಳೂರು ವಿಭಾಗದ ಹಿರಿಯ ಮಂಡಲ
ವಾಣಿಜ್ಯ ವ್ಯವಸ್ಥಾಪಕ




ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com