ಯು.ಟಿ.ಖಾದರ್
ಯು.ಟಿ.ಖಾದರ್

ಆಯುಷ್-ಸರ್ಕಾರ ಮಾತುಕತೆ ಯಶಸ್ವಿ

ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಎನ್ ಆರ್ ಎಚ್ ಎಂ ಆಯುಷ್ ವೈದ್ಯರು ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ...

ಬೆಂಗಳೂರು:ಸೇವೆ ಕಾಯಂ ಮಾಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದ ಎನ್ ಆರ್ ಎಚ್ ಎಂ ಆಯುಷ್ ವೈದ್ಯರು ಹಾಗೂ ಆರೋಗ್ಯ ಸಚಿವ ಯು.ಟಿ. ಖಾದರ್ ಅವರೊಂದಿಗೆ ನಡೆದ ಸಂಧಾನ ಸಭೆ ಕೊನೆಗೂ ಯಶಸ್ವಿಯಾಗಿದೆ.

ಗುರುವಾರ ನಡೆದ ಸಭೆಯಲ್ಲಿ, ಈಗ ಆಯುಷ್ ವೈದ್ಯರಿಗೆ ನೀಡುತ್ತಿರುವ ಸಂಬಳ 15,400ನ್ನು 28 ಸಾವಿರಕ್ಕೆ ಏರಿಸಲು ಸರ್ಕಾರ ಸಮ್ಮತಿಸಿದೆ. ಆದರೆ, 15,400ಕ್ಕೆ ರಾಜ್ಯಸರ್ಕಾರ 3 ಸಾವಿರ ಸೇರಿಸಿ, ಅಂದರೆ 18,400 ನೀಡಲಿದ್ದು, ಉಳಿದ ಸಂಬಳದ ಹಣವನ್ನು ಕೇಂದ್ರ ಸರ್ಕಾರ ನೀಡುವಂತೆ ಮನವಿ ಮಾಡುವುದಾಗಿ ಸಚಿವರು ತಿಳಿಸಿದ್ದಾರೆ.

ವೈದ್ಯರು ಮುಷ್ಕರ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬುಧವಾರ ಸಭೆ ಕರೆದ ಸಚಿವರು ಪ್ರತಿಭಟನೆ ಹಿಂಪಡೆಯಿರಿ. ಈ ಯೋಜನೆ ಕೇಂದ್ರ ಸರ್ಕಾರದ್ದಾಗಿದ್ದು, ನಿಮ್ಮ ಅವಧಿ ಮುಕ್ತಾಯವಾಗಲಿದೆ.ನಂತರ ವೈದ್ಯರ ನೇಮಕಕ್ಕೆ ಹೊಸದಾಗಿ ಅರ್ಜಿ ಕರೆಯಲಾಗುವುದು. ಆಗ ಅರ್ಜಿ ಸಲ್ಲಿಸಿ ಎಂದು ಸೂಚಿಸಿದ್ದರು. ಆದರೆ, ಪಟ್ಟು ಬಿಡದ ವೈದ್ಯರು ಪ್ರತಿಭಟನೆ ಹಿಂಪಡೆಯದೆ, ಗುರುವಾರ ಬೆಳಗ್ಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಅವರ  
ಮನೆ ಮುಂದೆ ಕಸ ಗುಡಿಸುವ ಮೂಲಕ ವಿನೂತನವಾಗಿ ಪ್ರತಿಭಟನೆ ನಡೆಸಿದರು. ನಂತರ ಫ್ರೀಡಂಪಾರ್ಕ್‍ನಲ್ಲಿ ಧರಣಿ ಮುಂದುವರೆಸಿದ್ದರು.

ಆಗಸ್ಟ್ ವರೆಗೆ ಗಡುವು: ಆಯುಷ್ ವೈದ್ಯರು ಧರಣಿ ಹಿಂಪಡೆಯದ ಹಿನ್ನೆಲೆಯಲ್ಲಿ ಗುರುವಾರ ಮಧ್ಯಾಹ್ನ ಸಭೆ ಕರೆದ ಸಚಿವರು ಆಗಸ್ಟ್ ಕೊನೆವರೆಗೆ ಕಾಲಾವಕಾಶ ಕೋರಿದ್ದಾರೆ. ಆ ಸಮಯದೊಳಗೆ ಆಯುಷ್ ವೈದ್ಯರ ತಂಡವೊಂದನ್ನು ಕೇಂದ್ರಕ್ಕೆ ಕರೆದೊಯ್ದು ಅಲ್ಲಿನ ಆರೋಗ್ಯ ಸಚಿವ ಶ್ರೀಪಾದ್ ನಾಯಕ್ ಅವರ ಜತೆ ಮಾತುಕತೆ ನಡೆಸಿ, ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲಾಗುವುದು. ರಾಜ್ಯ ಸರ್ಕಾರ 18,400 ನೀಡಲು ಮುಂದಾಗಿದ್ದು, ಕೇಂದ್ರ ಸರ್ಕಾರ 8,600 ನೀಡುವಂತೆ ಪ್ರಸ್ತಾಪ ಮಾಡಲಾಗುವುದು. ಮುಷ್ಕರದಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು, ತಕ್ಷಣದಿಂದ ಮುಷ್ಕರ ಕೈಬಿಡಿ ಎಂದು ಮನವಿ ಮಾಡಿದ್ದಾರೆ ಎಂದು ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಂಘದ ಕಾರ್ಯದರ್ಶಿ ಮಧುಕರ್ ಬೇಡಿಕೆ ಈಡೇರಿಸುವ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಮುಷ್ಕರ ಕೈಬಿಡಲಿದ್ದು, ಆಗಸ್ಟ್ ಕೊನೆವರೆಗೂ ಕಾಯ್ದು ನೋಡಲಾಗುವುದು. ಬೇಡಿಕೆ ಈಡೇರದಿದ್ದಲ್ಲಿ ಸೆಪ್ಟೆಂಬರ್‍ನಿಂದ ಮತ್ತೆ ಮುಷ್ಕರ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಸಭೆಯಲ್ಲಿ ಇಲಾಖೆ ಪ್ರಧಾನ ಕಾರ್ಯದರ್ಶಿ ಅತುಲ್ ತಿವಾರಿ ಇದ್ದರು.

Related Stories

No stories found.

Advertisement

X
Kannada Prabha
www.kannadaprabha.com