ಡಿ.ಕೆ. ರವಿ ಸಾವು ತನಿಖೆ: ಶೀಘ್ರವೇ ಸಿಬಿಐ ವರದಿ

ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣದ ತನಿಖೆ ಕೊನೆಯ ಘಟ್ಟ ತಲುಪಿದ್ದು, ಶೀಘ್ರದಲ್ಲೇ ಅಂತಿಮ ವರದಿ ಸಲ್ಲಿಸಲಾಗುವುದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಐಎಎಸ್ ಅಧಿಕಾರಿ ಡಿ.ಕೆ. ರವಿ ಸಾವಿನ ಪ್ರಕರಣದ ತನಿಖೆ ಕೊನೆಯ ಘಟ್ಟ ತಲುಪಿದ್ದು, ಶೀಘ್ರದಲ್ಲೇ ಅಂತಿಮ ವರದಿ ಸಲ್ಲಿಸಲಾಗುವುದು ಎಂದು ಸಿಬಿಐ ನಿರ್ದೇಶಕ
ಅನಿಲ್‍ಕುಮಾರ್ ಸಿನ್ಹಾ ತಿಳಿಸಿದ್ದಾರೆ.

ನಿರ್ದೇಶಕರಾಗಿ ಅಧಿಕಾರ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಆಗಮಿಸಿದ್ದ ಸಿನ್ಹಾ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ರವಿ ಹತ್ಯೆ ಪ್ರಕರಣ ಸಂಬಂಧ ಎಲ್ಲ ರೀತಿಯಲ್ಲೂ ತನಿಖೆ ನಡೆಸಲಾಗುತ್ತಿದೆ. ಸಮರ್ಥ ಅಧಿಕಾರಿಗಳಿಗೆ ಆ ಜವಾಬ್ದಾರಿ  ವಹಿಸಲಾಗಿದ್ದು, ಈ ಪ್ರಕರಣದಲ್ಲಿ ಅಧಿಕಾರಿಗಳ ಮೇಲೆ ಯಾವುದೇ ರಾಜಕೀಯ ಒತ್ತಡ ಇಲ್ಲ ಎಂದು ಸ್ಪಷ್ಟಪಡಿಸಿದರು.

ರವಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ಸಾಕ್ಷಿ ಹಾಗೂ ಮಾಹಿತಿ ಕಲೆ ಹಾಕಲಾಗಿದೆ. ಅಧಿಕಾರಿಗಳು ಸಮರ್ಥರಾಗಿದ್ದು, ಅವರ ಮೇಲೆ ತಾವು ಒತ್ತಡ ಹೇರುವುದಿಲ್ಲ. ಹಾಗಾದಲ್ಲಿ ತನಿಖೆಗೆ ತೊಂದರೆಯಾಗುತ್ತದೆ. ಆದ್ದರಿಂದ ತನಿಖೆ ನಂತರ ಅವರೇ ತಮಗೆ ಮಾಹಿತಿ ನೀಡಲಿದ್ದು, ತನಿಖೆ ಅಂತಿಮ ಹಂತದಲ್ಲಿದೆ ಎಂದು ಹೇಳಿದರು.

ಲಾಟರಿ, ಅಕ್ರಮ ಗಣಿಗಾರಿಕೆ, ವ್ಯಾಪಂ ಹಗರಣ ಸೇರಿದಂತೆ ಸಾಕಷ್ಟು ಪ್ರಕರಣಗಳು ತನಿಖಾ ಹಂತದಲ್ಲಿರುವುದರಿಂದ ಅವುಗಳ ಅಂತಿಮ ವರದಿಯನ್ನು ಮುಂಚಿತವಾಗಿಯೇ ಜನರಿಗೆ ತಿಳಿಸಲು ಸಾಧ್ಯವಿಲ್ಲ. ತನಿಖೆ ಮುಕ್ತಾಯವಾದ ನಂತರ ಅದನ್ನು ನ್ಯಾಯಾಲಯಕ್ಕೆ  ಸಲ್ಲಿಸಲಾಗುತ್ತದೆ. ಶಿಕ್ಷೆ ಪ್ರಕರಣಗಳೂ ಹೆಚ್ಚಿವೆ. ತಮ್ಮ ವ್ಯಾಪ್ತಿಗೆ ಬರುವ ಪ್ರತಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಲಾಗುತ್ತದೆ. ಯಾವುದೇ ಒತ್ತಡಕ್ಕೆ ಮಣಿಯುವುದಿಲ್ಲ ಎಂದು ಹೇಳಿದರು. ಸಿಬಿಐ ಎಸ್ಪಿ ಸುಬ್ರಮಣ್ಯೇಶ್ವರ ರಾವ್ ಹಾಗೂ ಹಿರಿಯ ಅಧಿಕಾರಿಗಳು ಇದ್ದರು.

ಸಿಬಿಐಗೂ ಸಿಬ್ಬಂದಿ ಕೊರತೆ
ರಾಜ್ಯದಲ್ಲಿ ಸಿಬಿಐಗೆ ಬರುತ್ತಿರುವ ಪ್ರಕರಣಗಳ ಸಂಖ್ಯೆ ಹೆಚ್ಚಿವೆ. ಆದರೆ, ಸಿಬ್ಬಂದಿ ಕೊರತೆ ಇದೆ. ಇದರಿಂದಲೂ ಕೆಲ ಪ್ರಕರಣಗಳ ತನಿಖೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಸಿಬ್ಬಂದಿ ಭರ್ತಿ ಮಾಡುವ ಬಗ್ಗೆ ಸರ್ಕಾರ ಹಾಗೂ ನ್ಯಾಯಾಲಯಕ್ಕೆ ಮನವಿ ಸಲ್ಲಿಸಲಾಗಿದೆ. ಸರ್ಕಾರ ತಮ್ಮ ಮನವಿಗೆ ಓಗೊಟ್ಟರೆ ಹೆಚ್ಚುತ್ತಿರುವ ಪ್ರಕರಣಗಳ ತನಿಖೆ ಸುಲಭವಾಗುತ್ತದೆ.

ಇಲ್ಲಿನ ಸಿಬ್ಬಂದಿ ಜತೆ ಚರ್ಚಿಸಿ ಸಮಸ್ಯೆಗಳನ್ನು ತಿಳಿದುಕೊಳ್ಳಲಾಗಿದೆ. ಯಾವುದೇ ಒತ್ತಡಕ್ಕೆ ಮಣಿಯದಂತೆಯೂ ಸೂಚಿಸಲಾಗಿದೆ. ಪ್ರಕರಣಗಳ ತನಿಖೆ ಚುರುಕುಗೊಳಿಸುವುದು, ಕೆಲಸದ ರೀತಿ, ಸಾಕ್ಷಿ ಸಂಗ್ರಹ, ಆರೋಪಿಗಳ ಬಂಧನ ಸೇರಿದಂತೆ ತನಿಖಾ ವಿಧಾನಗಳ ಕುರಿತು ಸಮಾಲೋಚಿಸಲಾಗಿದೆ. ಒಂದು ಸಂಸ್ಥೆ ಸಿಬ್ಬಂದಿಗೆ ಇರಬೇಕಾದ ಸೂಕ್ಷತೆ, ಕಾರ್ಯಕ್ಷಮತೆ ಬಗ್ಗೆ ಸಹ ತಿಳಿಸಲಾಗಿದೆ ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com