
ಬೆಂಗಳೂರು: ಲೋಕಾಯುಕ್ತ ಪಿಆರ್‍ಓ ಸೈಯದ್ ರಿಯಾಜ್ ಸುಳ್ಳು ಚಾರ್ಜ್‍ಶೀಟ್ ಸಲ್ಲಿಸುವ ಮೂಲಕ ಸಾಕಷ್ಟು ಆರೋಪಿಗಳ ಖುಲಾಸೆಗೆ ಕಾರಣರಾಗಿದ್ದಾರೆ ಎಂದು ರಾಜ್ಯ ಭ್ರಷ್ಟಾಚಾರ ನಿರ್ಮೂಲನಾ ವೇದಿಕೆ ಅಧ್ಯಕ್ಷ ಕೆ.ಎಚ್.ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಸ್ಥೆ ಯಲ್ಲಿ ದಾಖಲಾಗುತ್ತಿದ್ದ ಸಾಕಷ್ಟು ಪ್ರಕರಣಗಳಲ್ಲಿ ತನಿಖೆ ಸರಿಯಾಗಿ ನಡೆಸದೆ, ಆರೋಪಿಗಳ ವಿರುದ್ಧ ಸುಳ್ಳು ಚಾರ್ಜ್‍ಶೀಟ್ ಸಲ್ಲಿಸುತ್ತಿದ್ದರು. ಈ ಮೂಲಕ ಅವರು ಲೋಕಾಯುಕ್ತ ನ್ಯಾಯಾಲಯ ದಲ್ಲಿ ಖುಲಾಸೆ ಯಾಗುವಂತೆ ಸಹಕರಿಸುತ್ತಿದ್ದರು. ಮಾಹಿತಿ ಹಕ್ಕು ಕಾಯ್ದೆ ಅಡಿ ಟ್ರ್ಯಾಪ್
ಮತ್ತು ರೈಡ್ ಮಾಡಿರುವ ಪ್ರಕರಣಗಳ ಬಗ್ಗೆ ಮಾಹಿತಿ ಕೋರಿದಾಗ ಸೂಕ್ತ ಮಾಹಿತಿ ನೀಡುತ್ತಿರಲಿಲ್ಲ. ಅಂತಹ ಸಾಕಷ್ಟು ಪ್ರಕರಣಗಳಿದ್ದು, ಅವುಗಳನ್ನು ಗಮನಿಸಿದರೆ ಅವರು ಭ್ರಷ್ಟಾಚಾರದಲ್ಲಿ ತೊಡಗಿರುವುದು ಮೇಲ್ನೋಟಕ್ಕೆ ಸಾಬೀತಾದಂತೆ. ಈ ಮೂಲಕ ಭ್ರಷ್ಟಾಚಾರ ನಿಗ್ರಹ ಕಾಯ್ದೆಯನ್ನು ದುರುಪಯೋಗಪಡಿಸಿ ಕೊಂಡಿ ದ್ದಾರೆ. ಹಾಗಾಗಿ ರಿಯಾಜ್ ಅಧಿಕಾರಾವಧಿಯಲ್ಲಿ ನಡೆಸಿರುವ ಭ್ರಷ್ಟಾ ಚಾರದ ಬಗ್ಗೆ ಸಿಬಿಐ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು.
ಅರ್ಹತೆ ಇಲ್ಲದಿದ್ದರೂ ಹುದ್ದೆ: ಲೋಕಾಯುಕ್ತ ಪಿಆರ್‍ಒ ಹುದ್ದೆ ಪಡೆದಿರುವ ಸೈಯದ್ ರಿಯಾಜ್ ಅರ್ಹತೆ ಇಲ್ಲದಿದ್ದರೂ ಆ ಹುದ್ದೆ ಅಲಂಕರಿಸಿದ್ದಾರೆ. ಸಾಮಾನ್ಯ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಆಗಿ ನೇಮಕಗೊಂಡ ಸೈಯದ್ ಕಾಲಕ್ರಮೇಣ ಲೋಕಾಯುಕ್ತ ಪೊಲೀಸ್ ಇನ್ಸ್‍ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ನಂತರ ಈ ಸಂಸ್ಥೆಯಿಂದ ಹೊರಹೋಗಲು ಇಚ್ಛಿಸದ ಅವರು ಕೆಲವರ ಪ್ರಭಾವ ಬಳಸಿ ಅರ್ಹತೆ ಇಲ್ಲದಿದ್ದರೂ 2002ರಲ್ಲಿ ಲೋಕಾಯುಕ್ತದಲ್ಲಿ ಪಿಆರ್‍ಒ ಹುದ್ದೆ ಪಡೆದಿದ್ದರು. ಅವರಿಗೆ ನೀಡಿರುವ ಹುದ್ದೆ ಅಲಂಕರಿಸಲು ವಿದ್ಯಾರ್ಹತೆ ಏನಿರಬೇಕು ಎಂದು ಲೋಕಾಯುಕ್ತ ಮತ್ತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಲ್ಲಿ ಉಲ್ಲೇಖವಿದೆ. ಪಿಆರ್‍ಒ ಹುದ್ದೆ ಪಡೆಯಲು ಎಂಎಸ್ ಡಬ್ಲ್ಯೂ ಅಥವಾ ಎಂಎ ಸಮಾಜಶಾಸ್ತ್ರ ಪದವಿ ಪಡೆದಿರಬೇಕು. ಆದರೆ, ಈ ಯಾವ ಅರ್ಹತೆಯೂ ಇಲ್ಲದ ಸೈಯದ್‍ನನ್ನು ಆ ಹುದ್ದೆಗೆ ನೇಮಿಸಲಾಗಿದೆ. ಇದರ ಹಿಂದೆ ಕಾಣದ ಕೈವಾಡ ಇದೆ. ಲೋಕಾಯುಕ್ತ ಪೊಲೀಸ್ ಆಗಿ ಕರ್ತವ್ಯ ನಿರ್ವಹಿಸಿದ ವೇಳೆ ದಾಳಿ ನಡೆಸುವುದಾಗಿ ಬೆದರಿಸಿ ಕೆಲ ಅಧಿಕಾರಿಗಳಿಂದ ಲಂಚ ಪಡೆದಿದ್ದಾರೆ. ಭ್ರಷ್ಟಾಚಾರದ ಪ್ರಮುಖ ಆರೋಪಿ ಅಶ್ವಿನ್ ರಾವ್ ಜತೆಯೂ ಹಲವು ಪ್ರಕರಣದಲ್ಲಿ ಭಾಗಿಯಾಗಿ ಹಣ ಪಡೆದಿರುವ ಆರೋಪ ಕೇಳಿ ಬಂದಿವೆ. ಹಾಗಾಗಿ ಈ ಎಲ್ಲಾ ಪ್ರಕರಣಗಳನ್ನೂ ಸಿಬಿಐ ತನಿಖೆಗೆ ವಹಿಸಬೇಕು ಎಂದು ರಾಮಲಿಂಗಾರೆಡ್ಡಿ ಆಗ್ರಹಿಸಿದರು.
Advertisement