
ಬೆಂಗಳೂರು: ಪೀಣ್ಯ ಎರಡನೇ ಹಂತದ ಇಂದಿರಾ ಪ್ರಿಯದರ್ಶಿನಿ ನಗರದ ಮನೆಯೊಂದರಲ್ಲಿ ಮಹಿಳೆಯೊಬ್ಬರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪತಿಯೇ ಕೊಲೆ ಮಾಡಿ ಪರಾರಿಯಾಗಿರುವ ಶಂಕೆ ವ್ಯಕ್ತವಾಗಿದೆ. ಆಟೋ ಚಾಲಕ ರಮೇಶ್ ಎಂಬಾತನ ಪತ್ನಿ ಯಶೋಧ (30) ಮೃತಪಟ್ಟವರು. ಕುಣಿಗಲ್ ತಾಲೂಕಿನ ಯಶೋಧ 12 ವರ್ಷಗಳ ಹಿಂದೆ ರಮೇಶ್ ಎಂಬಾತನನ್ನು ವಿವಾಹವಾಗಿದ್ದರು.
ದಂಪತಿಗೆ ಎಂಟು ವರ್ಷದ ಮಗನಿದ್ದಾನೆ. ಯಶೋಧ ಗಾರ್ಮೆಂಟ್ಸ್ ಕೆಲಸಕ್ಕೆ ಹೋಗುತ್ತಿದ್ದರು. ನಾಲ್ಕು ವರ್ಷಗಳಿಂದ ಈ ಕುಟುಂಬ ಇಂದಿರಾ ಪ್ರಿಯದರ್ಶಿನಿ ನಗರದಲ್ಲಿ ನೆಲೆಸಿತ್ತು. ಅವರ ಮನೆಯ ಸಮೀಪದಲ್ಲೇ ಯಶೋಧ ಸಹೋದರ ನಾಗರಾಜ್ ಕುಟುಂಬ ನೆಲೆಸಿದೆ. ಭಾನುವಾರ ರಾತ್ರಿ ದಂಪತಿ ನಡುವೆ ಕೌಟುಂಬಿಕ ವಿಚಾರವಾಗಿ ಗಲಾಟೆ ಆಗಿತ್ತು. ಈ ವೇಳೆ ಸಹೋದರ ನಾಗರಾಜ್ ಮಧ್ಯಪ್ರವೇಶಿಸಿ ಜಗಳ ಬಿಡಿಸಿ ಸಮಾಧಾನ ಮಾಡಿದ್ದರು. ಸೋಮವಾರ ಗ್ರಾಮದಲ್ಲಿ ದೇವಿ ಉತ್ಸವ ಇದ್ದುದ್ದರಿಂದ ನಾಗರಾಜ್ ತನ್ನ ಅಕ್ಕನ ಮಗನನ್ನು ಕರೆದುಕೊಂಡು ಊರಿಗೆ ಹೋಗಿದ್ದರು. ಈ ಸಂದರ್ಭದಲ್ಲಿ ಯಶೋಧ ಅವರ ಸಾವು ಸಂಭವಿಸಿದೆ ಎಂದು ಪೊಲೀಸರು ಹೇಳಿದ್ದಾರೆ.
ನಾಗರಾಜ್ ಅವರು ಬುಧವಾರ ನಗರಕ್ಕೆ ಮರಳಿದಾಗ ಸಹೋದರಿ ಮನೆಗೆ ಬೀಗ ಹಾಕಿತ್ತು. ನಂತರ ಮೊಬೈಲ್ ಫೋನ್ ಮೂಲಕ ಅಕ್ಕ-ಭಾವನಿಗೆ ಕರೆ ಮಾಡಿದ್ದಾರೆ. ಪ್ರತಿಕ್ರಿಯೆ ಬಾರದಿದ್ದಾಗ ಅನುಮಾನಗೊಂಡ ಅವರು, ಕಿಟಕಿ ಮೂಲಕ ನೋಡಿದಾಗ ಮಂಚದ ಮೇಲೆ ಯಶೋಧ ಮೃತದೇಹ ಕೊಳೆತ ಸ್ಥಿತಿಯಲ್ಲಿ ಬಿದ್ದಿರುವುದನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು. ಮೃತರ ಕುತ್ತಿಗೆ ಮೇಲೆ ಗಾಯದ ಗುರುತಿದೆ. ಪತಿ ರಮೇಶ್, ಕತ್ತು ಬಿಗಿದು ಕೊಲೆ ಮಾಡಿರಬಹುದು ಎಂದು ನಾಗರಾಜï ದೂರು ನೀಡಿದ್ದಾರೆ. ತಲೆಮರೆಸಿಕೊಂಡಿರುವ ಆರೋಪಿಗಾಗಿ ಶೋಧ ಕಾರ್ಯ ನಡೆದಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ರಾಜಗೋಪಾಲನಗರ ಪೊಲೀಸರು ಹೇಳಿದ್ದಾರೆ.
Advertisement