
ಕಾರವಾರ: ಎಟಿಎಂ ಸಂಖ್ಯೆ, ಪಿನ್, ಖಾತೆ ವಿವರ ನೀಡುವಂತೆ ಕೋರಿ ಬರುವ ಕರೆಗಳಿಗೆ ಸ್ಪಂದಿಸಬೇಡಿ ಎಂದು ಬ್ಯಾಂಕ್‍ಗಳು ಗ್ರಾಹಕರನ್ನು ಆಗಾಗ ಎಚ್ಚರಿಸುತ್ತಿರುತ್ತವೆ.
ಆದರೂ ಮೋಸ ಹೋಗುವವರ ಸಂಖ್ಯೆಯೇನೂ ಕಡಿಮೆ ಆಗಿಲ್ಲ. ಇಂತಹ ಕರೆಗೆ ಸ್ಪಂದಿಸಿದ ಯೋಧರೊಬ್ಬರು ರು.66,200 ಕಳೆದುಕೊಂಡಿರುವ ಪ್ರಕರಣ ಕಾರವಾರದಲ್ಲಿ ಸೋಮವಾರ ಬೆಳಕಿಗೆ ಬಂದಿದೆ. ತಾಲೂಕಿನ ಕಡವಾಡದ ಯೋಧ ಕಿಶೋರ ಗುರವ ವಂಚನೆಗೊಳಗಾದವರು. ಹದಿನೈದು ದಿನಗಳ ಹಿಂದೆ 09983055993 ದೂರವಾಣಿ ಸಂಖ್ಯೆಯಿಂದ ಕರೆ ಬಂದಿದೆ.
ಹಿಂದಿಯಲ್ಲಿ ಮಾತನಾಡಿದ ವ್ಯಕ್ತಿ ತಾನು ರವಿಕುಮಾರ ಶರ್ಮಾ, ರಾಜಸ್ಥಾನದಿಂದ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದಾನೆ. ತಮ್ಮ ಎಸ್‍ಬಿಐ ಖಾತೆ ತಾಂತ್ರಿಕ ದೋಷದಿಂದ ಕೂಡಿದ್ದು, ಎಟಿಎಂ ಕಾರ್ಡ್ ಸಂಖ್ಯೆ ನೀಡಿ ಎಂದು ಕೇಳಿದ್ದಾನೆ. ಬಳಿಕ 87577018980 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿ ಬಿಹಾರದಿಂದ ಮಾತನಾಡುತ್ತಿರುವುದಾಗಿ ತಿಳಿಸಿ, ಕಿಶೋರ್ ಹಾಗೂ ಪತ್ನಿ ಕಾಂಚನಾ ಹೆಸರನಲ್ಲಿದ್ದ ಜಂಟಿ ಎಸ್‍ಬಿಐ ಖಾತೆಯ ಸಂಖ್ಯೆ ಪಡೆದಿದ್ದಾನೆ.
ಕಿಶೋರ್ ಖಾತೆಯಿಂದ ರು.5,000, ರು.16,000 ಹಾಗೂ ಜಂಟಿ ಖಾತೆಯಿಂದ ರು.30,000 ವನ್ನು ಹಂತ ಹಂತವಾಗಿ ಡ್ರಾ ಮಾಡಲಾಗಿದೆ. ಖಾತೆಯಿಂದ ಹಣ ಡ್ರಾ ಆಗುತ್ತಿರುವ ಬಗ್ಗೆ ಮೊಬೈಲ್ ಗೆ ಸಂದೇಶಗಳು ಬರುತ್ತಿದ್ದರೂ ದಂಪತಿ ಚಿಂತಿಸಿರಲಿಲ್ಲ. ವಂಚಕರು ಆನ್‍ಲೈನ್ ಶಾಪಿಂಗ್ ಅಥವಾ ಹಣ ವರ್ಗಾಯಿಸುವ ಮೂಲಕ ಮೋಸ ಮಾಡಿದ್ದಾರೆ. ಸೋಮವಾರ ಬೆಳಗ್ಗೆ ಕಾಂಚನಾ ಅವರಿಗೆ ತಿಂಗಳ ವೇತನ ಬಂದಿದೆ. ಖಾತೆ ಪರೀಕ್ಷಿಸಿದಾಗ ಕಡಿಮೆ ಹಣ ಇರುವುದು ತಿಳಿದುಬಂದಿದೆ.
ಆಗ ಎಟಿಎಂ ಸಂಖ್ಯೆ ಪಡೆದ ವ್ಯಕ್ತಿ ಹಣ ತೆಗೆದ ಬಗ್ಗೆ ಸಂಶಯ ಮೂಡಿದೆ. ಈ ಬಗ್ಗೆ ಕಾರವಾರ ಎಸ್‍ಬಿಐ ಶಾಖೆ ವ್ಯವಸ್ಥಾಪಕರನ್ನು ವಿಚಾರಿಸಿದಾಗ ಎರಡೂ ಖಾತೆಯಿಂದ ಒಟ್ಟು ರು.66,270 ಹಣ ಡ್ರಾ ಆಗಿರುವುದು ಸ್ಪಷ್ಟವಾಗಿದೆ. ರಜಾ ದಿನಗಳನ್ನು ಮುಗಿಸಿರುವ ಕಿಶೋರ್ ಭಾನುವಾರ ಬೆಳಗಾವಿಗೆ ಕರ್ತವ್ಯಕ್ಕಾಗಿ ತೆರಳಿದ್ದಾರೆ. ವಂಚನೆ ಬಗ್ಗೆ ದೂರು ನೀಡಲು ಕಾಂಚನಾ ನಿರ್ಧರಿಸಿದ್ದಾರೆ.
Advertisement