ಕೊರಟಗೆರೆ ಹೈಸ್ಕೂಲ್ ಫಲಿತಾಂಶ ಪ್ರಕಟಕ್ಕೆ ಹೈಕೋರ್ಟ್ ನಿರ್ದೇಶನ

ತುಮಕೂರು ಜಿಲ್ಲೆ ಕೊರಟಗೆರೆಯ ವಿವೇಕಾನಂದ ಹೈಸ್ಕೂಲ್‍ನ 25 ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮೂರು ದಿನದ ಒಳಗಾಗಿ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ...
ಕರ್ನಾಟಕ ಹೈ ಕೋರ್ಟ್
ಕರ್ನಾಟಕ ಹೈ ಕೋರ್ಟ್

ಬೆಂಗಳೂರು: ತುಮಕೂರು ಜಿಲ್ಲೆ ಕೊರಟಗೆರೆಯ ವಿವೇಕಾನಂದ ಹೈಸ್ಕೂಲ್‍ನ 25 ವಿದ್ಯಾರ್ಥಿಗಳ ಎಸ್ಸೆಸ್ಸೆಲ್ಸಿ ಫಲಿತಾಂಶವನ್ನು ಮೂರು ದಿನದ ಒಳಗಾಗಿ ಪ್ರಕಟಿಸುವಂತೆ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಗೆ ಹೈಕೋರ್ಟ್ ಮಂಗಳವಾರ ನಿರ್ದೇಶಿಸಿದೆ.

ಶಾಲೆ ಮಾನ್ಯತೆ ಪಡೆಯದ ಕಾರಣ ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಶಾಲೆಯ 25 ವಿದ್ಯಾರ್ಥಿಗಳ ಫಲಿತಾಂಶವನ್ನು ತಡೆಹಿಡಿದಿತ್ತು. ಮಂಡಳಿಯ ಈ ಕ್ರಮ ಪ್ರಶ್ನಿಸಿ ವಿದ್ಯಾರ್ಥಿಗಳು ಹೈಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದರು. ವಿಚಾರಣೆ ನಡೆಸಿದ ನ್ಯಾ.ಎಚ್.ಜಿ.ರಮೇಶ್ ಅವರಿದ್ದ ಏಕ ಸದಸ್ಯ ಪೀಠ, ಈ ರೀತಿ ಫಲಿತಾಂಶ ತಡೆಹಿಡಿಯುವುದರಿಂದ ವಿದ್ಯಾರ್ಥಿಗಳು ಮುಂದಿನ ಹಂತದ ಪದವಿಪೂರ್ವ ಕಾಲೇಜು ಪ್ರವೇಶಕ್ಕೆ ತೊಂದರೆಯಾಗುವುದಾಗಿ ಅಭಿಪ್ರಾಯಪಟ್ಟು ಮೂರು ದಿನಗಳ ಒಳಗಾಗಿ ಪರೀಕ್ಷೆಯ ಫಲಿತಾಂಶ ಪ್ರಕಟಿಸುವಂತೆ ನಿರ್ದೇಶಿಸಿದೆ.

ಮಾತ್ರವಲ್ಲದೇ ಪ್ರಕರಣವನ್ನು ಇತ್ಯರ್ಥಪಡಿಸಲು ಕಾನೂನಿನಲ್ಲಿರುವ ಅವಕಾಶಗಳ ಕುರಿತು ಮುಂದಿನ ವಿಚಾರಣೆ ವೇಳೆ ಮಾಹಿತಿ ನೀಡುವಂತೆ ಸರ್ಕಾರಿ ವಕೀಲರಿಗೆ ಸೂಚಿಸಿದೆ. ವಿದ್ಯಾರ್ಥಿಗಳ ಫಲಿತಾಂಶ ಅರ್ಜಿಯ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ಇದೇ ವೇಳೆ ಪೀಠ ಸ್ಪಷ್ಟಪಡಿಸಿ ವಿಚಾರಣೆ ಮುಂದೂಡಿದೆ.

ವಿವೇಕಾನಂದ ಹೈಸ್ಕೂಲ್ ಸರ್ಕಾರದಿಂದ ಮಾನ್ಯತೆ ಪಡೆದಿರಲಿಲ್ಲ ಎಂಬ ಕಾರಣಕ್ಕೆ ಶಾಲೆಯ ವಿದ್ಯಾರ್ಥಿಗಳಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆಗೆ ಅನುಮತಿ ನೀಡಲು ಮಂಡಳಿ ನಿರಾಕರಿಸಿತ್ತು. ಇದ್ನನು ಪ್ರಶ್ನಿಸಿ ಶಾಲೆ ಹೈಕೋರ್ಟ್ ಮೆಟ್ಟಿಲೇರಿತ್ತು. ಶಾಲೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ, ಎಸ್ಎಸ್‍ಎಲ್‍ಸಿ ವಿದ್ಯಾರ್ಥಿಗಳಿಗೆ ಏಪ್ರಿಲ್‍ನಲ್ಲಿ ನಡೆದಿದ್ದ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಮಂಡಳಿಗೆ ಸೂಚಿಸಿತ್ತು.ಅದರಂತೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಆದರೆ, ಫಲಿತಾಂಶವನ್ನು ಮಂಡಳಿ ತಡೆಹಿಡಿದಿತ್ತು. ಇದರಿಂದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com