
ಕೆ.ಆರ್.ಪುರ: ಪೂರ್ವ ತಾಲೂಕಿನಲ್ಲಿ 11 ಗ್ರಾಮ ಪಂಚಾಯಿತಿಗಳಿಗೆ ಶಾಂತಿಯುತವಾಗಿ ಚುನಾವಣೆ ನಡೆದಿದ್ದು, ಶೇ.75.52 ರಷ್ಟು ಮತದಾನವಾಗಿದೆ. ಅಂಗವಿಕಲರು, ಹಿರಿಯ ನಾಗರಿಕರು ಸೇರಿದಂತೆ ಎಲ್ಲರೂ ತಮ್ಮ ಮತದಾನದ ಹಕ್ಕನ್ನು ಹುರುಪಿನಿಂದ ಚಲಾಯಿಸಿದರು.
ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಶೀಗೆ ಹಳ್ಳಿ ವ್ಯಾಪ್ತಿಯಲ್ಲಿ ಅಭ್ಯರ್ಥಿಗಳು ಮಳಿಗೆ ನಿರ್ಮಿಸಿ ಪ್ರಚಾರ ಮಾಡಿದ್ದು, ನೀತಿ ಸಂಹಿತೆ ಉಲ್ಲಂಘನೆಯಾಗಿದೆ. ಬಿದರಹಳ್ಳಿ ಹೋಬಳಿ, ಶೀಗೆಹಳ್ಳಿ ಗ್ರಾಪಂ ಮತಗಟ್ಟೆಯಿಂದ 100 ಮೀಟರ್ ಗಿಂತ ಕಡಿಮೆ ಅಂತರದಲ್ಲಿ ಅಭ್ಯರ್ಧಿಗಳು ಚಿಹ್ನೆಗಳಾದ ತೆಂಗಹಿನಕಾಯಿ ಲೇಡಿಸ್ ಬ್ಯಾಗ್, ಕಟ್ಟಿಂಗ್ ಪ್ಲೇಯರ್, ಹೊಲಿಗೆಯಂತ್ರ ಸೇರಿದಂತೆ ವಿವಿಧ ವಸ್ತುಗಳ ಮಳಿಗೆಗಳನ್ನು ಹಾಕಿದ್ದರು. ಕೆಲವು ಅಭ್ಯರ್ಥಿಗಳು ದ್ರಾಕ್ಷಿ ತೋಟವನ್ನೇ ನಿರ್ಮಿಸಿ ಆಕರ್ಷಣೆಯ ಕೇಂದ್ರ ಬಿಂದುವಾದರು.
ಅಭ್ಯರ್ಥಿಗಳಿಗೆ ಈ ಚುನಾವಣೆ ಪ್ರತಿಷ್ಠೆಯಾಗಿದ್ದು, ಗ್ರಾಮೀಣ ಪ್ರದೇಶದ ಮತದಾರರನ್ನು ಆಕರ್ಷಿಸಲು ಹಣ ಹಾಗೂ ಹೆಂಡದ ಆಮಿಷವೂ ಪ್ರಯೋಗವಾಗಿದೆ. ಕುಕ್ಕರ್, ಬೆಳ್ಳಿ ದೀಪ, ಬೆಳ್ಳಿ ಕಾಲು ಚೈನು, ಬಂಗಾರದ ಮೂಗೂತಿ, ಮಿಕ್ಸಿ, ತೆಂಗಿನಕಾಯಿ ಸೇರಿದಂತೆ ಚುನಾವಣಾಧಿಕಾರಿ ನೀಡಿರುವ ಗುರುತಿನ ವಸ್ತುಗಳನ್ನು ಮತದಾರರಿಗೆ ನೀಡಲಾಗಿದೆ. ಮಾಂಸ, ಅಕ್ಕಿ ಸೇರಿದಂತೆ ಆಹಾರ ಪದಾರ್ಥಗಳನ್ನೂ ಹಂಚಿದ್ದು, ಪ್ರತಿ ಮತಕ್ಕೆ ರು. 1,000-3,000 ಹಂಚಲಾಗಿದೆ.
`ಚುನಾವಣೆ ಕರ್ತವ್ಯದಲ್ಲಿದ್ದ ಅಧಿಕಾರಿಗಳಿಗೆ ತರಬೇತಿ ನೀಡಲಾಗಿದೆ. ಯಾವುದೇ ಒತ್ತಡ ಹಾಗೂ ಪ್ರಭಾವಕ್ಕೊಳಗಾಗದೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ಆದರೂ ಮಳಿಗೆ ತೆರೆದು ಪ್ರಚಾರ ಮಾಡಿರುವುದು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ. ಸಂಬಂಧಿಸಿದ ಪೊಲೀಸ್ ಅಧಿಕಾರಿಗಳಿಗೆ ತಿಳಿಸಿದರೂ, ಕ್ರಮ ಕೈಗೊಳ್ಳದಿರುವುದು ಹಲವು ಸಂಶಯಗಳಿಗೆ ಎಡೆಮಾಡಿಕೊಟ್ಟಿದೆ' ಎಂದು ತಹಸೀಲ್ದಾರ್ ಡಾ.ಹರೀಶ್ ನಾಯಕ್ ತಿಳಿಸಿದ್ದು, ತನಿಖೆ ನಡೆಸಿ ಕ್ರಮ ಜರುಗಿಸುವ ಭರವಸೆ ನೀಡಿದ್ದಾರೆ.
Advertisement