ಬಿಬಿಎಂಪಿ ಮೀಸಲು ಪಟ್ಟಿ ತಕರಾರನ್ನು ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳಿ : ಹೈಕೋರ್ಟ್

ಬಿಬಿಎಂಪಿ ಚುನಾವಣೆ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್ ನ ನ್ಯಾ.ನಾಗರತ್ನ ಅವರ ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ.
ಬಿಬಿಎಂಪಿ
ಬಿಬಿಎಂಪಿ

ಬೆಂಗಳೂರು : ಬಿಬಿಎಂಪಿ  ಚುನಾವಣೆ ಮೀಸಲು ಪಟ್ಟಿ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಹೈಕೋರ್ಟ್  ನ ನ್ಯಾ.ನಾಗರತ್ನ ಅವರ ಏಕಸದಸ್ಯ ಪೀಠದಲ್ಲೇ ಬಗೆಹರಿಸಿಕೊಳ್ಳುವಂತೆ  ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ನ್ಯಾ.ರಾಘವೇಂದ್ರ ಸಿಂಗ್ ಚೌವ್ಹಾಣ್ ಆದೇಶಿಸಿದ್ದಾರೆ. 

ಮೇ.31 ರೊಳಗೆ ಬಿಬಿಎಂಪಿ ಚುನಾವಣೆ ಪ್ರಕ್ರಿಯೆ ನಡೆಸಬೇಕು. ಬಿಬಿಎಂಪಿ ಚುನಾವಣೆಗೆ 2001 ರ ಜನಗಣತಿ  ಆಧರಿಸಿ ಮೀಸಲುಪಟ್ಟಿ ನಿಗದಿಪಡಿಸಿ ಮೇ.31 ರ ಒಳಗಾಗಿ ಚುನಾವಣೆ ನಡೆಸುವಂತೆ ನ್ಯಾ.ಬಿ.ವಿ ನಾಗರತ್ನ ಅವರಿದ್ದ ಪೀಠ ರಾಜ್ಯ ಚುನಾವಣಾ ಆಯೋಗಕ್ಕೆ ಕಳೆದ ಮಾರ್ಚ್ 30 ರಂದು ನಿರ್ದೇಶನ ನೀಡಿತ್ತು. ಆದೇಶವನ್ನು ಪ್ರಶ್ನಿಸಿದ್ದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ, ಹೈಕೋರ್ಟ್ ಗೆ ತಕರಾರು ಅರ್ಜಿ ಸಲ್ಲಿಸಿ, 2011 ರ ಜನಗಣತಿ ಆಧಾರದ ಮೇಲೆ  ಮೀಸಲು ಪಟ್ಟಿ ಸಿದ್ಧಪಡಿಸಲು ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಆದೇಶ ನೀಡಬೇಕೆಂದು ಕೋರಿತ್ತು.

ವಿಚಾರಣೆ ವೇಳೆ ವಾದ ಮಂಡಿಸಿದ್ದ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ ಎ.ಎಸ್  ಪೊನ್ನಣ್ಣ,  ಚುನಾವಣೆಗೆ 2011 ರ ಜನಗಣತಿ ಪ್ರಕಾರವೇ ಮೀಸಲು ಪಟ್ಟಿ ಪ್ರಕಟಿಸಲು  ಸರ್ಕಾರ ಸಿದ್ಧವಿದೆ. ಆದರೆ  ಸೂಕ್ತ ಸಮಯದಲ್ಲಿ ಚುನಾವಣೆ ನಡೆಸುವಂತೆ ನಿರ್ದೇಶಿಸಿರುವ ನ್ಯಾ.ನಾಗರತ್ನ ಅವರ ಆದೇಶದಲ್ಲಿ ಮೀಸಲು  ವಿವರ ಸ್ಪಷ್ಟವಾಗಿಲ್ಲ ಎಂದು ನ್ಯಾ. ರಾಘವೇಂದ್ರ ಸಿಂಗ್ ಚೌವ್ಹಾಣ್  ಅವರಿದ್ದ ಪೀಠಕ್ಕೆ ತಿಳಿಸಿದರು.  ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಹೈಕೋರ್ಟ್,  ಏಕ ಸದಸ್ಯ ಪೀಠದ ಆದೇಶದ ನಂತರವೂ ನೀವು ಚುನಾವಣೆಗೆ ಮುಂದಾಗಲೇ ಇಲ್ಲ.  ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವಿಭಾಗೀಯ ಪೀಠಕ್ಕೆ ಹೋದಿರಿ, ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈಗ ನೋಡಿದರೆ  ಮೀಸಲು ತಕರಾರಿನಲ್ಲಿ 2011 ರ  ಜನಗಣತಿ ಪ್ರಕಾರವೇ  ಚುನಾವಣೆ ನಡೆಸುತ್ತೇವೆ ಎಂದು ಹೇಳುತ್ತಿದ್ದೀರಿ, ನಾವು ತಾಳ ಹಾಕಬೇಕು ನೀವು  ಕುಣಿಯಬೇಕು ಆಗಾಗ್ಗೆ ಹೊಸ ರಾಗ ಗಳನ್ನೂ ಹುಡುಕಬೇಕೆ? ಎಂದು  ನ್ಯಾಯಮೂರ್ತಿ ಚೌವ್ಹಾಣ್ ಸರ್ಕಾರದ ವಕೀಲರನ್ನು ಪ್ರಶ್ನಿಸಿದರು.

ಅಲ್ಲದೇ  ತನ್ನದೇ ಮಿತಿಯಲ್ಲಿ ಪೀಠ ವಿಚಾರಣೆ ನಡೆಸುತ್ತಿರುವುದರಿಂದ ಈ ಹಿಂದೆ ಆದೇಶ ನೀಡಿದ್ದ ನ್ಯಾ.ನಾಗರತ್ನ ಅವರ ಏಕಸದಸ್ಯ   ಪೀಠದ ಮುಂದೆಯೇ ಹೋಗಿ ಹೊಸದಾಗಿ ಅರ್ಜಿ ಸಲ್ಲಿಸಿ   ಬಗೆಹರಿಸಿಕೊಳ್ಳಿ ಎಂದು ಆದೇಶ ನೀಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com