ಬೆಂಗಳೂರು: ನಾವೇನಾದರೂ ಸಾಮಾಜಿಕ ನ್ಯಾಯದ ಪರ ವಾಗಿದ್ದೇವೆ, ಅವಕಾಶ ವಂಚಿತರಿಗೆ ಅವಕಾಶ ಮಾಡಿಕೊಡುತ್ತಿದ್ದೇವೆ ಅಂದರೆ ಅದಕ್ಕೆ ದೇವರಾಜ ಅರಸು ಹಾಕಿಕೊಟ್ಟ ಮಾರ್ಗ ದರ್ಶನವೇ ಕಾರಣ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ವಿಧಾನಸೌಧದ ಆವರಣದಲ್ಲಿ ದೇವರಾಜ ಅರಸು 33ನೇ ಪುಣ್ಯತಿಥಿ ಅಂಗವಾಗಿ ಆಯೋಜನೆಗೊಂಡ ಕಾರ್ಯಕ್ರಮದಲ್ಲಿ ಅರಸು ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೇವರಾಜ ಅರಸು ಅವರ ಜನ್ಮಶತಮಾನೋತ್ಸವ ವರ್ಷದ ಹಿನ್ನೆಲೆಯಲ್ಲಿ ಇಡೀ ವರ್ಷ ಹತ್ತು ಹಲವು ಕಾರ್ಯಕ್ರಮ ರೂಪಿಸಲಾಗಿದ್ದು, ಬಜೆಟ್‍ನಲ್ಲೇ ಘೋಷಿಸಲಾಗಿದೆ.
ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ವಿದೇಶಿ ವ್ಯಾಸಂಗಕ್ಕೆ ಪ್ರೊತ್ಸಾಹ ನೀಡಲು ವರ್ಷಕ್ಕೆ 10 ಲಕ್ಷದಂತೆ ಮೂರು ವರ್ಷ ವಿದ್ಯಾರ್ಥಿ ವೇತನ ನೀಡಿಕೆ, ಉನ್ನತ ವ್ಯಾಸಂಗಕ್ಕೆ ವಿಶೇಷ ಪ್ರೊತ್ಸಾಹ, ದ್ವಿತೀಯ ಪಿಯುಸಿ ಅತಿ ಹೆಚ್ಚು ಅಂಕ ಪಡೆದವರಿಗೆ ರು.15 ಸಾವಿರ ಬಹುಮಾನ ಸೇರಿದಂತೆ ಅನೇಕ ಕಾರ್ಯಕ್ರಮ ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದರು.
ದೇವರಾಜ ಅರಸು ಅವರೊಂದಿಗೆ ನಾನು ಕೆಲಸ ಮಾಡಿರಲಿಲ್ಲ. ಆದರೆ ಅವರ ಮೇಲೆ ಅಪಾರ ಗೌರವವಿದೆ. ಅರಸು ಅವರು ಆರು ಬಾರಿ ಶಾಸಕರಾಗಿ, ಮಂತ್ರಿಯಾಗಿ, ಮುಖ್ಯಮಂತ್ರಿಯಾಗಿ
ಕರ್ನಾಟಕದ ಅಭಿವೃದ್ಧಿಗೆ ಅನನ್ಯ ಸೇವೆ ಸಲ್ಲಿಸಿದ್ದಾರೆ. ಅವರನ್ನು ಸಾಮಾಜಿಕ ನ್ಯಾಯದ ಹರಿಕಾರ ಎಂದು ಎಲ್ಲರು ಇಂದಿಗೂ ಸ್ಮರಿಸುತ್ತಿದ್ದಾರೆ. ದನಿ ಇಲ್ಲದ ಜನರಿಗೆ ರಾಜಕೀಯವಾಗಿ ಪ್ರಾತಿನಿಧ್ಯ ಕೊಡುವ ಮೂಲಕ ಅವರಿಗೆ ದನಿ ಕೊಡುವ ಪ್ರಯತ್ನ ಮಾಡಿದರು. ಅವರ ಕೆಲಸಗಳೇ ನಮಗೆ ಸ್ಫೂರ್ತಿ ಎಂದರು.
ಸಮಾಜ ಕಲ್ಯಾಣ ಸಚಿವ ಆಂಜನೇಯ, ಗೃಹ ಸಚಿವ ಕೆ.ಜೆ.ಜಾರ್ಜ್, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಜರಿದ್ದರು.
Advertisement