ಕಾಮಗಾರಿ ಆರಂಭಕ್ಕೆ ಸಮನ್ವಯ ಸಮಿತಿ ಅನುಮತಿ ಕಡ್ಡಾಯ: ಜಿ. ಕುಮಾರ್ ನಾಯಕ್

ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಸಂಸ್ಥೆಗಳಿಂದ ಕಾಮಗಾರಿ ಆರಂಭಿಸುವ ಮುನ್ನ ಸಮನ್ವಯ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಆಯುಕ್ತ ಜಿ. ಕುಮಾರ್ ನಾಯಕ್ ಸೂಚನೆ ನೀಡಿದ್ದಾರೆ...
ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್
ಬಿಬಿಎಂಪಿ ಆಯುಕ್ತ ಜಿ. ಕುಮಾರ್ ನಾಯಕ್
Updated on

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಯಾವುದೇ ಸರ್ಕಾರಿ ಸಂಸ್ಥೆಗಳಿಂದ ಕಾಮಗಾರಿ ಆರಂಭಿಸುವ ಮುನ್ನ ಸಮನ್ವಯ ಸಮಿತಿಯಿಂದ ಅನುಮತಿ ಪಡೆದುಕೊಳ್ಳಬೇಕು ಎಂದು ಆಯುಕ್ತ ಜಿ. ಕುಮಾರ್ ನಾಯಕ್ ಸೂಚನೆ ನೀಡಿದ್ದಾರೆ.

ಜಲಮಂಡಳಿ, ಬೆಸ್ಕಾಂ, ಕೆಪಿಟಿಸಿಎಲ್, ಬಿಎಂಆರ್‍ಸಿಎಲ್ ಹಾಗೂ ಬಿಡಿಎ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ಅವರು, ನಗರದಲ್ಲಿ ಸರ್ಕಾರಿ ಸಂಸ್ಥೆಗಳು ಕಾಮಗಾರಿ ನಡೆಸುವಾಗ ಸಮನ್ವಯ ಸಮಿತಿಗೆ ಮಾಹಿತಿ ನೀಡಿ ಅನುಮತಿ ಪಡೆಯಬೇಕು. ನಗರದಲ್ಲಿ ಹಲವು ಇಲಾಖೆಗಳಿಂದ ಅಭಿವೃದ್ಧಿ ಕಾಮಗಾರಿ ನಡೆಯುತ್ತಿವೆ. ಇಲಾಖೆ ಹಾಗೂ ಬಿಬಿಎಂಪಿ ನಡುವೆ ಸಮನ್ವಯದ ಕೊರತೆಯಿಂದ ಗೊಂದಲ ಉಂಟಾಗಿದೆ. ಬಿಬಿಎಂಪಿ ನಿರ್ಮಿಸಿದ ರಸ್ತೆಗಳನ್ನು ಅನುಮತಿ ಇಲ್ಲದೆ ಅಗೆಯಲಾಗುತ್ತಿದೆ. ಇತ್ತೀಚೆಗೆ ಅನೇಕ ಕಡೆಗಳಲ್ಲಿ ಡಾಂಬರೀಕರಣ ಪೂರ್ಣಗೊಂಡ ರಸ್ತೆಗಳಲ್ಲೂ ಗುಂಡಿ ತೋಡಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಅನುಮತಿ ಪಡೆಯದೆ ಕಾಮಗಾರಿ ನಡೆಸುವುದಕ್ಕೆ ಕಡಿವಾಣ
ಹಾಕಬೇಕಿದೆ ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡಾ ತಪಾಸಣೆ ಸಂದರ್ಭದಲ್ಲಿ ಸಮನ್ವಯ ಸಮಿತಿ ರಚನೆ ಮಾಡಿ, ರಸ್ತೆ ಅಗೆತಕ್ಕೆ ಕಡಿವಾಣ ಹಾಕಲು ಸೂಚಿಸಿದ್ದಾರೆ. ಪ್ರತಿ ಇಲಾಖೆಯಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿ 6 ತಿಂಗಳಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿ, ಅಲ್ಪಾವಧಿ ಹಾಗೂ ದೀರ್ಘಾವಧಿ ಕಾಮಗಾರಿಗಳ ಪಟ್ಟಿಯನ್ನು ಸಮನ್ವಯ ಸಮಿತಿಗೆ ಸಲ್ಲಿಸಬೇಕು. ಸಮಿತಿಗೆ ಮಾಹಿತಿ ದೊರೆತ ನಂತರ ಸಾರ್ವಜನಿಕರಿಗೆ ಲಭ್ಯವಾಗುವಂತೆ ಬಿಬಿಎಂಪಿ ವೆಬ್ ಸೈಟ್‍ನಲ್ಲಿ ಹಾಕಲಾಗುವುದು. ಸಾರ್ವಜನಿಕರಿಗೂ ಸ್ಪಷ್ಟವಾದ ಪಾರದರ್ಶಕತೆಯಿಂದ ಕೂಡಿದ ಮಾಹಿತಿ ದೊರಯಬೇಕಿದೆ. ಸಾರ್ವಜನಿಕರೂ ಉದ್ದೇಶಿತ ಕಾಮಗಾರಿಗಳ ಬಗ್ಗೆ ಸಲಹೆ, ಸೂಚನೆ ನೀಡಬಹುದು ಎಂದರು.

ರು.1500 ಕೋಟಿ ವೆಚ್ಚದ ಕಾಮಗಾರಿ: ಬಿಬಿಎಂಪಿಯಿಂದ ಶೀಘ್ರದಲ್ಲಿ ರು.1500 ಕೋಟಿ ವೆಚ್ಚದ ಕಾಮಗಾರಿಗಳನ್ನು ಆರಂಭಿಸಲಾಗುವುದು. ಈ ಕಾಮಗಾರಿಗಳ ವಿವರಗಳನ್ನೂ ವೆಬ್‍ಸೈಟ್‍ನಲ್ಲಿ ಹಾಕಲಾಗುವುದು. ಕಾಮಗಾರಿಗಳ ಪಟ್ಟಿಯನ್ನು ಎಲ್ಲ ಇಲಾಖೆ ಮುಖ್ಯಸ್ಥರಿಗೆ ಒದಗಿಸಲಾಗುವುದು. ಪ್ರತಿವಾರ ಆಯುಕ್ತರ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ಸಭೆ ನಡೆಯಲಿದ್ದು, ಆರಂಭಿಸಬೇಕಾದ ಕಾಮಗಾರಿಗಳ ಕುರಿತು ಚರ್ಚಿಸಲಾಗುವುದು. ಪ್ರತಿ ಇಲಾಖೆಗೆ ಬಿಬಿಎಂಪಿಯಿಂದ ಒಬ್ಬ ನೋಡಲ್ ಅಧಿಕಾರಿ ನೇಮಿಸಲಾಗುವುದು. ಸಭೆಯಲ್ಲಿ ಇತರೆ ಇಲಾಖೆಗಳೊಂದಿಗೆ ಮಾಹಿತಿ ಹಂಚಿಕೊಳ್ಳಲು ನೋಡಲ್ ಅಧಿಕಾರಿಗಳಿಗೆ ಸೂಚಿಸಲಾಗುವುದು. ಕಾಮಗಾರಿ ಪೂರ್ಣಗೊಂಡ ನಂತರ ಇಲಾಖೆ, ಬಿಬಿಎಂಪಿಗೆ ಸೇರದ ಪ್ರತ್ಯೇಕ ತಂಡದಿಂದ ತಪಾಸಣೆ ನಡೆಸಿ ವರದಿ ಪಡೆಯಲಾಗುತ್ತದೆ. ತಪಾಸಣೆ ನಂತರವೇ ಗುತ್ತಿಗೆದಾರರಿಗೆ ಹಣ ಪಾವತಿ ಮಾಡಲಾಗುವುದು ಎಂದರು.

ಸರ್ಕಾರಿ ಇಲಾಖೆಗಳು ಕಾಮಗಾರಿ ಅಂದಾಜು ಪಟ್ಟಿ ಸಿದಟಛಿಪಡಿಸುವಾಗ, ರಸ್ತೆ ಅಗೆದು ಮತ್ತೆ ದುರಸ್ತಿ ಮಾಡಲು ತಗಲುವ ವೆಚ್ಚವನ್ನೂ ಸೇರಿಸಬೇಕು. ಬಿಬಿಎಂಪಿಯಿಂದ ರಸ್ತೆ ದುರಸ್ತಿ ನಡೆಸಬೇಕೆಂದರೆ ಶುಲ್ಕ ಪಾವತಿಸಬೇಕು. 110 ಹಳ್ಳಿಗಳಿಗೆ ಕುಡಿಯುವ ನೀರು ಮತ್ತು ಒಳಚರಂಡಿ ಸಂಪರ್ಕ ನೀಡಲು ರಸ್ತೆ ಅಗೆಯಲಾಗಿದೆ. ದುರಸ್ತಿ ಕಾಮಗಾರಿಗೆ ತಗಲುವ ವೆಚ್ಚವನ್ನು ಜಲಮಂಡಳಿಯಿಂದ ಪಾವತಿಸಬೇಕಾಗುತ್ತದೆ. ಇಲಾಖೆಗಳಿಂದ ಕಾಮಗಾರಿ ಆರಂಬಿsಸುವ ಮುನ್ನ, ಬಿಬಿಎಂಪಿಯಿಂದ ಅನುಮತಿ ಪಡೆಯಲು ಏಕಗವಾಕ್ಷಿ ಪದ್ಧತಿ ಅನುಸರಿಸಲಾಗುವುದು ಎಂದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com