ಕಾಮೆಡ್-ಕೆ: ರಾಜ್ಯದವರೇ ಟಾಪ್
ಬೆಂಗಳೂರು: ರಾಜ್ಯದಲ್ಲಿರುವ ವೃತ್ತಿ ಶಿಕ್ಷಣ ಖಾಸಗಿ ಕಾಲೇಜುಗಳ ಸೀಟುಗಳ ಆಯ್ಕೆಗಾಗಿ ಕಾಮೆಡ್-ಕೆಯ ರಾಷ್ಟ್ರ ಮಟ್ಟದ ಸಾಮಾನ್ಯ ಪ್ರವೇಶ ಪರೀಕ್ಷೆ ಸೋಮ ವಾರ ಫಲಿತಾಂಶ ಪ್ರಕಟಗೊಂಡಿದ್ದು, ಸರ್ಕಾರಿ ಸಿಇಟಿಯಲ್ಲಿ ಅಗ್ರಗಣ್ಯರಾದ ವಿದ್ಯಾರ್ಥಿಗಳು ಕಾಮೆಡ್-ಕೆ ಸಿಇಟಿಯಲ್ಲೂ ಸಹ ಮುಂಚೂಣಿ ರ್ಯಾಂಕ್ ಗಳಿಸಿದ್ದಾರೆ.
ಮೇ 10ರಂದು ಕಾಮೆಡ್-ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆದಿತ್ತು. ಮೆಡಿಕಲ್ ಸೀಟು ಅಪೇಕ್ಷಿಸಿ ಅರ್ಜಿ ಸಲ್ಲಿಸಿ 70,968 ಮಂದಿ ಅರ್ಜಿ ಸಲ್ಲಿಸಿದ್ದರು, ಈ ಪೈಕಿ 57,885 ಮಂದಿ ಪರೀಕ್ಷೆ ಎದುರಿಸಿದ್ದರು. ಎಂಜಿನಿಯರಿಂಗ್‍ನಲ್ಲಿ 51,221 ಮಂದಿ ಅರ್ಜಿ ಸಲ್ಲಿಸಿದ್ದು, 43,981 ಮಂದಿ ಪರೀಕ್ಷೆ ಬರೆದಿದ್ದರು. 14 ಮೆಡಿಕಲ್ ಕಾಲೇಜು, 24 ಮೆಡಿಕಲ್ ಕಾಲೇಜುಗಳಲ್ಲಿ ಸರಿಸುಮಾರು 750 ಮೆಡಿಕಲ್-ಡೆಂಟಲ್ ಸೀಟುಗಳಿವೆ (ಕಾಮೆಡ್ ಪಾಲು). ಪರೀಕ್ಷೆ ಎದುರಿಸಿದವರ ಪೈಕಿ ಮೆಡಿಕಲ್‍ನಲ್ಲಿ 27,395 ಮಂದಿ ಸೀಟು ಪಡೆಯಲು ಅರ್ಹತೆ ಪಡೆದುಕೊಂಡಿದ್ದು, ಇದರಲ್ಲಿ 7450 ಮಂದಿ ಕರ್ನಾಟಕದವರು.
ಇನ್ನು ಎಂಜಿನಿಯರಿಂಗ್‍ನಲ್ಲಿ ಪರೀಕ್ಷೆ ಎದುರಿಸಿದವರೆಲ್ಲರೂ ಸೀಟು ಪಡೆಯುವ ಅರ್ಹತೆ ಗಿಟ್ಟಿಸಿದ್ದಾರೆ. ಇದರಲ್ಲಿ 21,300 ಮಂದಿ ಕರ್ನಾಟಕದವರು. ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆಯಲ್ಲಿ ಮೆಡಿಕಲ್ ವಿಭಾಗದಲ್ಲಿ ಅಗ್ರಸ್ಥಾನ ಪಡೆದಿದ್ದ ಬೆಂಗಳೂರಿನ ಪ್ರಿಯಾ ನಾರ್ವಾಲ್ ಕಾಮೆಡ್-ಕೆನಲ್ಲೂ ಸಹ ಮೊದಲಿಗರಾಗಿದ್ದಾರೆ. ಸ್ವಾಗತ್ ಯದವಾಡ್, ಪಲ್ಲವಿ, ಅಲೈಕ್ಯ ರೆಡ್ಡಿ ಸಹ ಸರ್ಕಾರಿ ಸಿಇಟಿಯಲ್ಲಿ ಟಾಪ್ ರ್ಯಾಂಕ್ ಪಟ್ಟಿಯಲ್ಲಿದ್ದವರು.
ಇಲ್ಲೂ ಸಹ ಅವರು ಅಗ್ರಸ್ಥಾನದಲ್ಲಿದ್ದಾರೆ. ಮೆಡಿಕಲ್‍ನ ಮೊದಲ 100 ರ್ಯಾಂಕ್‍ಗಳಲ್ಲಿ 14 ಮಂದಿ ಕರ್ನಾಟಕದವರಿದ್ದರೆ, ಮೊದಲ ಸಾವಿರ ರ್ಯಾಂಕುಗಳಲ್ಲಿ 115 ಮಂದಿ ರಾಜ್ಯದವರಿದ್ದಾರೆ. ಎಂಜಿನಿಯರಿಂಗ್ ನಲ್ಲಿ ಕೊಮ್ಮೂರು ಅಲೈಕ್ಯ ಮೊದಲಿಗರಾಗಿದ್ದಾರೆ. ಕೆಇಎ ಎಂಜಿನಿಯರಿಂಗ್ ರ್ಯಾಂಕ್ ಪಟ್ಟಿಯಲ್ಲೂ ಇವರು ಮೊದಲಿಗ ರಾಗಿದ್ದರು. ಮೊದಲ ಹತ್ತು ರ್ಯಾಂಕುಗಳಲ್ಲಿ ಕರ್ನಾಟಕದವರು 7 ಮಂದಿ ಇದ್ದಾರೆ. ಮೊದಲ ನೂರು ರ್ಯಾಂಕುಗಳಲ್ಲಿ 76 ಮಂದಿ ಕರ್ನಾಟಕದವರಾಗಿದ್ದರೆ, ಸಾವಿರ ರ್ಯಾಂಕುಗಳಲ್ಲಿ 587 ಮಂದಿ ರಾಜ್ಯದವರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ