
ಬೆಂಗಳೂರು: ಬಿಬಿಎಂಪಿ ಆವರಣದಲ್ಲಿ ಧೂಮಪಾನ ಮಾಡದಂತೆ ಕಾರಿಡಾರ್‍ಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಿ ನಿಗಾವಹಿಸಬೇಕೆಂದು ಅಧಿಕಾರಿಗಳಿಗೆ ಆಯುಕ್ತ ಜಿ.ಕುಮಾರ್ ನಾಯಕ್ ಸೂಚಿಸಿದ್ದಾರೆ.
ಬಿಬಿಎಂಪಿಯಲ್ಲಿ ಮಂಗಳವಾರ ನಡೆದ ಸಭೆಯಲ್ಲಿ, ಕಚೇರಿಯ ಮುಂದೆ ಇರುವ ಕಾರಿಡಾರ್ ಹಾಗೂ ಶೌಚಾಲಯ ಸ್ವಚ್ಛವಾಗಿ ಇಟ್ಟುಕೊಳ್ಳಬೇಕು. ಸ್ವಚ್ಛತೆಯನ್ನು ಸಮರ್ಪಕವಾಗಿ ಎಂಪಿಇಡಿ ವಿಭಾಗ ನಿರ್ವಹಿಸಬೇಕು. ಸಿಬ್ಬಂದಿ ಕಾರಿಡಾರ್ ಗಳಲ್ಲಿ ಮತ್ತು ಶೌಚಾಲಯಗಳಲ್ಲಿ ಧೂಮಪಾನ ಮಾಡುತ್ತಿರುವ ಬಗ್ಗೆ ಕೆಲವು ಅಧಿಕಾರಿಗಳು ದೂರು ನೀಡಿದ್ದಾರೆ. ಇದಕ್ಕೆ ಕಡಿವಾಣ ಹಾಕಲು ತಂಬಾಕು ನಿಷೇಧ ದಳದಿಂದ ತಪಾಸಣೆ ಕೈಗೊಂಡು ತಪ್ಪಿತಸ್ಥರ ಮೇಲೆ ದಂಡ ವಿಧಿಸುವಂತೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯ ಆರೋಗ್ಯಾಧಿಕಾರಿಗಳಿಗೆ ಸೂಚಿಸಿದರು.
ಪಾಲಿಕೆಯ ಅಧಿಕಾರಿ ಮತ್ತು ಸಿಬ್ಬಂದಿಯಲ್ಲಿ ಸಮಯ ಪಾಲನೆ, ಶಿಸ್ತು ತರಲು ಕೇಂದ್ರ ಕಚೇರಿಯ ಕಾರಿಡಾರ್‍ಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಸಲಾಗುವುದು, ಎಲ್ಲ ಇಲಾಖೆಗಳಲ್ಲಿ ಸಿಬ್ಬಂದಿ ನಾಮಫಲಕ ಕಡ್ಡಾಯವಾಗಿ ಹಾಕಬೇಕು. ಕಾಲಕಾಲಕ್ಕೆ ಕಡತ ವಿಲೇವಾರಿ ಮಾಡುವುದರ ಜೊತೆಗೆ ಕಚೇರಿಗಳಲ್ಲಿ ಶುಚಿತ್ವ ಕಾಪಾಡಬೇಕು.
ಕಚೇರಿ ವೇಳೆಯಲ್ಲಿ ಸಿಬ್ಬಂದಿ ವರ್ಗದ ಚಲನವಲನ ಹಾಗೂ ಸಮಯಕ್ಕೆ ಸರಿಯಾಗಿ ಕಚೇರಿಗೆ ಹಾಜರಾಗದಿರುವುದನ್ನು ನಿಯಂತ್ರಿಸಲು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಆಡಳಿತ ವಿಭಾಗದ ಅಪರ ಆಯುಕ್ತರಿಗೆ ಸೂಚನೆ ನೀಡಲಾಯಿತು. ಕೇಂದ್ರ ಕಚೇರಿಯಲ್ಲಿ ಅಧಿಕಾರಿಗಳ ಮತ್ತು ಸಿಬ್ಬಂದಿ ಹಾಜರು ಪಡೆದುಕೊಳ್ಳಲು ಬಯೋಮೆಟ್ರಿಕ್ ವ್ಯವಸ್ಥೆ ಜಾರಿ ಮಾಡಲಾಗಿದೆ.
ಪ್ರತಿ ಇಲಾಖೆಗಳ ಮುಖ್ಯಸ್ಥರು ಅದನ್ನು ಉಪಯೋಗಿಸಿಕೊಂಡು ಸಿಬ್ಬಂದಿ ವರ್ಗದವರು ಸರಿಯಾದ ಸಮಯಕ್ಕೆ ಬರುವಂತೆ ಹಾಗೂ ಗುರುತಿನ ಚೀಟಿ, ಸಮವಸ್ತ್ರ ಧರಿಸುವಂತೆ ನೋಡಿಕೊಳ್ಳಬೇಕು. ಸಮಯಕ್ಕೆ ಸರಿಯಾಗಿ ಬರದಿದ್ದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು. ಅಧಿಕಾರಿಗಳು ಸಮಯ ಪಾಲನೆ ಮಾಡಿದರೆ ಸಿಬ್ಬಂದಿ ವರ್ಗದವರೂ ಕೂಡಾ ತಾವಾಗಿಯೇ ಅದನ್ನೂ ರೂಢಿಸಿಕೊಳ್ಳುತ್ತಾರೆ. ಹೀಗಾಗಿ ಅಧಿಕಾರಿಗಳು ಸಮಯಕ್ಕೆ ಸರಿಯಾಗಿ ಹಾಜರಿರಬೇಕು ಎಂದು ತಿಳಿಸಿದರು.
Advertisement