
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿ ಕರಡು ಅಧಿಸೂಚನೆಗೆ ಸೇರಿದಂತೆ ಎಲ್ಲ ಪ್ರಕ್ರಿಯೆಯನ್ನು ಜುಲೈ 1ರ ಒಳಗಾಗಿ
ಅಂತಿಮಗೊಳಿಸುತ್ತೇವೆ ಎಂದು ರಾಜ್ಯ ಸರ್ಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ. ವಿಚಾರಣೆ ನಡೆಸಿದ ನ್ಯಾ. ನಾಗರತ್ನ ಅವರಿದ್ದ ಏಕಸದಸ್ಯ ಪೀಠ, ವಾದ- ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದೆ. 2001ರ ಜನಗಣತಿ ಆಧರಿಸಿ ಚುನಾವಣೆ ನಡೆಸಬೇಕು ಎಂದು ನ್ಯಾ. ನಾಗರತ್ನ ಅವರಿದ್ದ ಏಕಸದಸ್ಯ ಪೀಠ ಈ ಹಿಂದೆ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ರಾಜ್ಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗ ಹೈಕೋರ್ಟ್‍ಗೆ ಹೊಸ ತಕರಾರು ಅರ್ಜಿ ಸಲ್ಲಿಸಿತ್ತು. ಇದಕ್ಕೆ ಉತ್ತರವಾಗಿ ರಾಜ್ಯ ಸರ್ಕಾರ ಮಧ್ಯಂತರ ಅರ್ಜಿ ದಾಖಲಿಸಿತ್ತು. ವಿಚಾರಣೆ ವೇಳೆ ಸರ್ಕಾರದ ಪರ ಹೆಚ್ಚುವರಿ ಅಡ್ವೊಕೇಟ್ ಜನರಲ್ (ಎಎಜಿ) ಎ.ಎಸ್.ಪೊನ್ನಣ್ಣ ವಾದ ಮಂಡಿಸಿ, ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಪಾಲಿಕೆ ಆಡಳಿತಾಧಿಕಾರಿ, ಕಾರ್ಯದರ್ಶಿ ಸೇರಿ ಉನ್ನತ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಾಗಿದೆ. ವಾರ್ಡ್ ಮರು ವಿಂಗಡಣೆ, ಮೀಸಲು ಪಟ್ಟಿ, ಮತದಾರರ ಪಟ್ಟಿ ಮತ್ತು ಚುನಾವಣೆಯ ಮೇಲುಸ್ತುವಾರಿ ಸರ್ಕಾರವೇ ತೆಗೆದುಕೊಳ್ಳಲು ಸಿದ್ಧ ಎಂದು ಪೀಠಕ್ಕೆ ತಿಳಿಸಿದರು. ಸರ್ಕಾರದ ಈ ವಾದಕ್ಕೆ ಕೆಂಡಕಾರಿದ ಚುನಾವಣೆ ಆಯೋಗದ ಪರ ವಕೀಲ ಕೆ.ಎನ್.ಫಣೀಂದ್ರ, ಸರ್ಕಾರವೇ ಮತದಾರರ ಪಟ್ಟಿ ಮಾಡುವುದಾದರೆ ಪಟ್ಟಿಯಲ್ಲಾಗುವ ಲೋಪದೋಷಗಳಿಗೆ ಆಯೋಗ ಜವಾಬ್ದಾರಿ ಹೊರಬೇಕಾಗುತ್ತದೆ. ಮುಂದೊಂದು ದಿನ ಚುನಾವಣೆ ಪ್ರಕ್ರಿಯೆಯನ್ನೂ ತಾನೇ ನಿರ್ವಹಿಸಲಿದ್ದು, ಚುನಾವಣೆ ಆಯೋಗ ಸಂಪೂರ್ಣ ಸ್ಥಗಿತಗೊಳಿಸುವಂತೆ ರಾಜ್ಯ ಸರ್ಕಾರ ಹೇಳಿದರೂ ಆಶ್ಚರ್ಯಪಡಬೇಕಿಲ್ಲ ಎಂದು ತಿರುಗೇಟು ನೀಡಿದರು.
ಸರ್ಕಾರಕ್ಕೆ ಗೊಂದಲ: ವಾರ್ಡ್ ಮರುವಿಂಗಡಣೆ ಮತ್ತು ಮೀಸಲು ಪಟ್ಟಿಗೆ ಸಂಬಂಧಿಸಿದಂತೆ ಅಧಿಸೂಚನೆ ಹೊರಡಿಸಿದ ನಂತರ ಆಕ್ಷೇಪಣೆ ಹಾಗೂ ಅಂತಿಮ ಅಧಿ ಸೂಚನೆ ಹೊರಡಿಸಲು
ಸರ್ಕಾರಕ್ಕೆ ಎಷ್ಟು ಕಾಲಾವಕಾಶ ಬೇಕು ಎಂಬ ಪ್ರಶ್ನೆಗೆ 2 ತಿಂಗಳಾದರೂ ಬೇಕಾಗುತ್ತದೆ ಎಂಬ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿತು. ಚುನಾವಣೆಗೆ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಿದ್ದು, ಕೇವಲ ದಿನಾಂಕ ಪ್ರಕಟ ಮಾಡುವುದೊಂದು ಮಾತ್ರ ಬಾಕಿ. ಏಕಸದಸ್ಯ ಪೀಠದ ಆದೇಶದ ಪ್ರಕಾರ ನಡೆದುಕೊಳ್ಳುವುದಾದರೆ ಸಂಪೂರ್ಣ ಚುನಾವಣೆ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗಕ್ಕೆ 24 ದಿನ ಕಾಲಾವಕಾಶ ಬೇಕಿದೆ. ಅಂದರೆ ಜುಲೈ 28 ಅಥವಾ 29ರ ಒಳಗಾಗಿ ಚುನಾವಣೆಯ ಎಲ್ಲಾ ಪ್ರಕ್ರಿಯೆ ಪೂರ್ಣಗೊಳಿಸಲು ಆಯೋಗ ಸಿದ್ದವಿದೆ. ಆದ್ದರಿಂದ ಸರ್ಕಾರದ ಸಲ್ಲಿಸಿರುವ ಮಧ್ಯಂತರ ಅರ್ಜಿ ವಜಾಗೊಳಿಸಬೇಕು ಎಂದು ಪೀಠಕ್ಕೆ ಮನವಿ ಮಾಡಿದರು. ವಾರ್ಡ್ ಮರುವಿಂಗಡಣೆ ವಿಚಾರದಲ್ಲಿ ಬಿಬಿಎಂಪಿ ಅವಧಿ ಪೂರ್ಣಗೊಳ್ಳುವುದರ ಒಳಗೆ ಸರ್ಕಾರ ಸಮಯೋಚಿತವಾಗಿ ನಡೆದುಕೊಂಡಿದ್ದರೆ ಈ ಪರಿಸ್ಥಿತಿ
ಉದ್ಭವಿಸುತ್ತಿರಲಿಲ್ಲ ಎಂದು ಪೀಠ ತರಾಟೆಗೆ ತೆಗೆದುಕೊಂಡಿತು. ಈ ಮಧ್ಯೆ ತಮ್ಮನ್ನು ಈ ಪ್ರಕರಣದಲ್ಲಿ ಪ್ರತಿವಾದಿ ಮಾಡಿಕೊಳ್ಳುವಂತೆ ಸಂಸದ ರಾಜೀವ್ ಚಂದ್ರಶೇಖರ್, ಪಾಲಿಕೆ ಮಾಜಿ ಸದಸ್ಯರುಗಳಾದ ಸಿ.ಕೆ.ರಾಮಮೂರ್ತಿ ಸೇರಿ ಹಲವರು ಮಧ್ಯಂತರ ಅರ್ಜಿ ದಾಖಲಿಸಿದ್ದಾರೆ.
Advertisement