ನಿವೃತ್ತರ ತಾಣವಾದ ಲೋಕಾಯುಕ್ತ: ನ್ಯಾ. ಸಂತೋಷ ಹೆಗ್ಡೆ

ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಲೋಕಾಯುಕ್ತ ಕಾಯಿದೆ ನಿವೃತ್ತ ನ್ಯಾಯಾಧೀಶರ ಪುನರ್ವಸತಿ ತಾಣವಾಗಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು...
ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ
ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ

ಬೆಂಗಳೂರು: ಸರ್ಕಾರ ಜಾರಿಗೆ ತರಲು ಹೊರಟಿರುವ ನೂತನ ಲೋಕಾಯುಕ್ತ ಕಾಯಿದೆ ನಿವೃತ್ತ ನ್ಯಾಯಾಧೀಶರ ಪುನರ್ವಸತಿ ತಾಣವಾಗಲಿದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ ಹೆಗ್ಡೆ ಆಕ್ರೋಶ ವ್ಯಕ್ತಪಡಿಸಿದರು.

ಕಾರ್ಪೋರೇಟ್ ಸಂಸ್ಥೆಗಳ ಸಾಮಾಜಿಕ ಹೊಣೆಗಾರಿಕೆ ಕಾರ್ಯಕ್ರಮದಡಿ `ಕರ್ನಾಟಕ ನೌಕರರ ಸಂಘ'ವು ಗುರುವಾರ ನಗರದ ಖಾಸಗಿ ಹೊಟೇಲ್ ನಲ್ಲಿ ಆಯೋಜಿಸಿದ್ದ ವಾರ್ಷಿಕೋತ್ಸವ ಸಮಾರಂಭದಲ್ಲಿ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಲೋಕಾಯುಕ್ತ ಸಂಸ್ಥೆ ಕೇವಲ ಭ್ರಷ್ಟರನ್ನು ಹಿಡಿದು ಕುಳಿತರೆ ಸಾಲದು, ಅದು ಜನರ ಬಳಿಗೆ ಹೋಗಬೇಕು. ಭ್ರಷ್ಟಾಚಾರದಿಂದ ನೊಂದ ಜನರ ನೋವುಗಳನ್ನು ಆಲಿಸಬೇಕು. ಸಮಾಜದ ನಾನಾ ವರ್ಗಗಳ ಜನರ ಸಲಹೆ-ಸೂಚನೆಗಳನ್ನು ಪಡೆಯಬೇಕು ಎಂದು ಸಲಹೆ ನೀಡಿದರು.

ಆರೋಗ್ಯ ಮತ್ತು ಶಿಕ್ಷಣದಂತಹ ಸಂವಿಧಾನಾತ್ಮಕ ಸೌಲಭ್ಯವನ್ನು ಸರ್ಕಾರಗಳು ಜನರಿಗೆ ಮತ್ತಷ್ಟು ಪರಿಣಾಮಕಾರಿಯಾಗಿ ನೀಡಬೇಕಾಗಿತ್ತಾದರೂ, ಖಾಸಗಿಕರಣದ ಪ್ರಭಾವದಲ್ಲಿ ಸರ್ಕಾರ ಗಳು ಕ್ರಮೇಣ ಅವೆರಡರಿಂದಲೂ ನುಣುಚಿಕೊಳ್ಳುತ್ತಿವೆ ಎಂದು ವಿಷಾದಿಸಿದ ಹೆಗ್ಡೆ, ಜನರಿಗೆ ಆರೋಗ್ಯ ಮತ್ತು ಶಿಕ್ಷಣ ನೀಡುವ ಸಂವಿಧಾನಾತ್ಮಕ ಹೊಣೆ ಸರ್ಕಾರಗಳದ್ದಾಗಿದ್ದರೂ ಇವು ಸಾಮಾನ್ಯ ಜನರಿಗೆ ಸಿಗುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳು ಬಡವರನ್ನು ಸುಲಿಗೆ ಮಾಡುವ ತಾಣಗಳಾಗಿವೆ. ಅಲ್ಲಿ ಕೆಲಸ ನಿರ್ವಹಿಸುವ ವೈದ್ಯರಿಗೆ ಮಾನವೀಯತೆಯೇ ಮರೆತು ಹೋಗಿದೆ. ಹೀಗಾಗಿ ಜನ ಖಾಸಗಿ ಆಸ್ಪತ್ರೆಗಳನ್ನು ಅವಲಂಬಿಸುವಂತಾಗಿದ್ದರೂ ಸರ್ಕಾರಗಳು ಕಣ್ಮುಚ್ಚಿ ಕುಳಿತಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹೆಚ್ಚುತ್ತಿರುವ ಮಕ್ಕಳ ಸಂಖ್ಯೆಗೆ ತಕ್ಕಂತೆ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಾಗಬೇಕಿತ್ತು. ಬದಲಿಗೆ, ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ. ಗುಣಮಟ್ಟದ ಶಿಕ್ಷಣದ ಕೊರತೆಯಿಂದ ಮಕ್ಕಳೇ ಇಲ್ಲದ ಸರ್ಕಾರಿ ಶಾಲೆಗಳ ಸಂಖ್ಯೆ ಹೆಚ್ಚಾಗುತ್ತಿದೆ. ಮತ್ತೊಂದೆಡೆ, ಖಾಸಗಿ ಶಾಲೆಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದೆ. ಇಂತಹ ವೈರುಧ್ಯಗಳ ನಡುವೆ ಸರ್ಕಾರಗಳು, ತಮ್ಮ ಮೇಲಿರುವ ಸಂವಿಧಾನಾತ್ಮಕ ಹೊಣೆಗಾರಿಕೆಯಿಂದ ದೂರವಾಗುತ್ತಿರುವುದು ಜನ ಸಾಮಾನ್ಯರ ಮೇಲೆ ನೇರ ಪರಿಣಾಮ ಉಂಟು ಮಾಡಲಿವೆ ಎಂದು ಸಂತೋಷ ಹೆಗ್ಡೆ ಅವರು ಆತಂಕ ವ್ಯಕ್ತಪಡಿಸಿದರು.

ಯುವಜನತೆಯೇ ಭರವಸೆ: ಬದಲಾವಣೆ ಬಯಸುವ ಪ್ರತಿಯೊಬ್ಬರು ಆಶಾವಾದಿಗಳಾದರೆ, ಯಾವುದು ಕಠಿಣವಲ್ಲ. ವಿಶೇಷವಾಗಿ ಯುವಜನತೆ,ಮನಸ್ಸು ಮಾಡಿದರೆ ಭವಿಷ್ಯದಲ್ಲಿ ಭ್ರಷ್ಟಾಚಾರ ಮುಕ್ತ, ಹಸಿವು ಮುಕ್ತ ಸಮಾಜ ಮುಕ್ತ ಸಮಾಜ ಸಾಧ್ಯವಾಗಲಿದೆ ಎಂದು ಭರವಸೆ ವ್ಯಕ್ತಪಡಿಸಿದ ಅವರು, ಪೋಷಕರು ತಮ್ಮ ಮಕ್ಕಳ ಬಗ್ಗೆ ಎಚ್ಚರ ವಹಿಸಬೇಕಿದೆ. ಭವಿಷ್ಯದ ದೃಷ್ಟಿಯಿಂದ ಮಕ್ಕಳನ್ನು ಸಂಸ್ಕಾರಯುತವಾಗಿ ಬೆಳೆಸಬೇಕಿದೆ ಎಂದರು. ಸಂಘದ ಅಧ್ಯಕ್ಷ ಎಂ.ಸಿ. ಪ್ರಭಾಕರ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯಸ್ಥರಾದ ನಾಗೇಂದ್ರ ಪ್ರಸಾದ್, ಪ್ರಮೋದ್, ರಾಜ್ ಪಿಳೈ, ಸೀತಾರಾಂ ಭಟ್ ಹಾಜರಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com