
ಮಂಗಳೂರು: ಮಿಥಿಸಿಲಿನ್ ರೆಸಿಸ್ಟನ್ಸ್ ಸ್ಟ್ಯಾಫಿಲೋಕೊಕಸ್ ಔರೆಸ್(ಎಂಆರ್ ಎಸ್ಎ) ಬ್ಯಾಕ್ಟೀರಿಯಾ ಸೋಂಕು ಇಲ್ಲಿನ ಬಲ್ಮಠ ಲಕ್ಷ್ಮೀ ಮೆಮೋರಿಯಲ್ ಕಾಲೇಜು ವಿದ್ಯಾರ್ಥಿಗಳಿಗೆ ತಗುಲಿರುವುದು ಬೆಳಕಿಗೆ ಬಂದಿದೆ.
ಕಾಲೇಜಿನ 120 ವಿದ್ಯಾರ್ಥಿಗಳಲ್ಲಿ ಎಂಆರ್ ಎಸ್ಎ ಸೋಂಕಿರುವುದು ರಕ್ತ ಪರೀಕ್ಷೆಯಿಂದ ದೃಢಪಟ್ಟಿದೆ. ಬಹುತೇಕ ವಿದ್ಯಾರ್ಥಿಗಳು ಕೇರಳದವರಾಗಿದ್ದಾರೆ. ಹೀಗಾಗಿ ಚಿಕಿತ್ಸೆ ಪಡೆಯಲು ಹತ್ತು ದಿನಗಳ ರಜೆ ನೀಡಿ ಎಂದು ಆಗ್ರಹಿಸಿ ಶನಿವಾರ ಬೆಳಗ್ಗೆ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿದ ಆಡಳಿತ ಮಂಡಳಿ ಸದಸ್ಯರು ರಜೆ ನೀಡಿದ್ದರಿಂದ ಪ್ರತಿಭಡನೆ ಕೈ ಬಿಡಲಾಯಿತು. ಆದರೆ, ಈ ಸೋಂಕು ಸಾಮಾನ್ಯವಾಗಿದ್ದು, ಔಷಧಿಯಿಂದ ದೂರವಾಗುತ್ತದೆ ಎಂದು ವೈದ್ಯರು ದೃಢಪಡಿಸಿದ್ದಾರೆ.
ಎಂಆರ್ಎಸ್ಎ ಸೋಂಕು ಒಬ್ಬರನ್ನೊಬ್ಬರು ಮುಟ್ಟುವುದರಿಂದ ಮಾತ್ರ ಹರಡುತ್ತದೆ. ಇದುವರೆಗೆ ಯಾವೊಬ್ಬ ವಿದ್ಯಾರ್ಥಿಯೂ ಗಂಭೀರಗೊಂಡು ಆಸ್ಪತ್ರೆಗೆ ದಾಖಲಾಗಿಲ್ಲ. ಇದು ಆ್ಯಂಟಿಬಯೋಟಿಕ್ ನಲ್ಲಿ ಗುಣವಾಗುತ್ತದೆ. ಈಗ ಸೋಂಕು ತಗುಲಿದವರನ್ನು ಪ್ರತ್ಯೇಕಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕು ವಿಷಮಿಸಿದರೆ ಮೈಕೈ ನೋವು, ತೀವ್ರ ಜ್ವರ,ಗಂಟಲು ನೋವು ಕಾಡುತ್ತದೆ.ಎಲ್ಲ ವಿದ್ಯಾರ್ಥಿಗಳಿಗೆ ರಜೆ ನೀಡಿದರೆ ಅವರು ಊರಿಗೆ ಹೋಗಿ ಸೋಂಕು ಹಬ್ಬಿಸುವ ಸಾಧ್ಯತೆ ಇದೆ. ಈ ಕಾರಣಕ್ಕೆ ರಜೆ ನೀಡಿರಲಿಲ್ಲ. ಆದರೆ,ಒತ್ತಾಯಕ್ಕೆ ಮಣಿದು ಈಗ ರಜೆ ನೀಡಲಾಗಿದೆ ಎಂದು ಕಾಲೇಜಿನ ನರ್ಸಿಂಗ್ ವಿಭಾಗದ ಮುಖ್ಯಸ್ಥೆ ಡಯಾನಾ ತಿಳಿಸಿದ್ದಾರೆ.
Advertisement